ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಕಲ್ಪಿಸಲು ಆದ್ಯತೆ

ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವಿಂದ್ರ ಶೆಟ್ಟಿ ಭರವಸೆ
Last Updated 4 ಏಪ್ರಿಲ್ 2021, 2:00 IST
ಅಕ್ಷರ ಗಾತ್ರ

ಗದಗ: ‘ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಡಿಯಲ್ಲಿ ಒಟ್ಟು 46 ಸಮುದಾಯಗಳು ಇದ್ದು, ಅವುಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು’ ಎಂದು ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವಿಂದ್ರ ಶೆಟ್ಟಿ ಹೇಳಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಅಲೆಮಾರಿ ಸಮುದಾಯವು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ನಿಗಮದಿಂದ ಸಮುದಾಯದ ಆರ್ಥಿಕ ಸಬಲತೆ ಸಾಧಿಸುವುದರ ಜತೆಗೆ ಅವರು ಎಲ್ಲರಂತೆ ಗೌರವಯುತ ಜೀವನ ನಡೆಸಲು ಅನುವು ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

‘ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳುವುದರ ಮೂಲಕ ಸಮುದಾಯದ ಪ್ರಗತಿ ಮಾಡಲಾಗುವುದು. ಗದಗ ಜಿಲ್ಲೆಯಲ್ಲಿ ಅಂದಾಜು 47 ಸಾವಿರ ಅಲೆಮಾರಿ, ಅರೆ ಅಲೆಮಾರಿ ಜನರು ವಾಸವಿದ್ದು ಅವರಿಗೆ ನಿವೇಶನ ಸೇರಿದಂತೆ ಸಾಲ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

‘ನಿಗಮದ ಅಧ್ಯಕ್ಷನಾದ ನಂತರ ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದು, ಇದು 11ನೇ ಜಿಲ್ಲೆಯಾಗಿದೆ. ಸಮುದಾಯದವರ ಸ್ಥಿತಿಗತಿ , ಆಚಾರ ವಿಚಾರವನ್ನು ಪ್ರವಾಸದ ಮೂಲಕ ಅರಿಯುವುದರೊಂದಿಗೆ ಸಮಗ್ರ ವರದಿ ತಯಾರಿಸಿ ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು’ ಎಂದು ಹೇಳಿದರು.

‘ಅಲೆಮಾರಿ ಸಮುದಾಯಕ್ಕೆ ಪ್ರತಿ ಜಿಲ್ಲೆಗೆ ಒಂದರಂತೆ ಸಭಾಭವನ ನಿರ್ಮಿಸಬೇಕು. ಅದಕ್ಕೆ ಅಗತ್ಯವಿರುವ ಅನುದಾನ ಕ್ರೋಡೀಕರಣ ಮಾಡಲಾಗುವುದು. ಅಲ್ಲದೇ ಪ್ರತ್ಯೇಕ ಸ್ಮಶಾನ ಅಗತ್ಯವಿದ್ದು ಅವುಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗು ವುದು’ ಎಂದು ತಿಳಿಸಿದರು.

ರಾಜ್ಯ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷ ಹರೀಶ ಪೂಜಾರ, ಗೊಂದಳಿ ಸಮಾಜದ ಮುಖಂಡ ವಿಠಲ ಗಣಾಚಾರಿ, ಸಮಾಜದ ಮುಖಂಡರಾದ ಶಂಕರ ಹೆಬ್ಬಳ್ಳಿ , ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪ್ರಿಯದರ್ಶಿನಿ ಇದ್ದರು.

ಸಮುದಾಯದ ಏಳಿಗೆಗೆ ಶ್ರಮಿಸಲು ಸೂಚನೆ

ಗದಗ: ‘ಜಿಲ್ಲೆಯಲ್ಲಿರುವ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸಾಲ ಸೌಲಭ್ಯಗಳನ್ನು ಮಂಜೂರು ಮಾಡಿಸುವುದರೊಂದಿಗೆ ಸಮುದಾಯದ ಆರ್ಥಿಕ ಪ್ರಗತಿಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು’ ಎಂದು ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವಂತೆ ಉತ್ತಮ ಶಿಕ್ಷಣ ದೊರಕಿಸಿಕೊಡಲು ಶ್ರಮಿಸಬೇಕು’ ಎಂದು ಹೇಳಿದರು.

ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಟಿ. ಪ್ರಿಯದರ್ಶಿನಿ ಮಾತನಾಡಿ, ‘2020-21ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ಸಾಲ ಯೋಜನೆ ಅಡಿ 25 ಫಲಾನುಭವಿಗಳಿಗೆ ₹12.50 ಲಕ್ಷ ಆರ್ಥಿಕ ಗುರಿ ನಿಗದಿಪಡಿಸಲಾಗಿತ್ತು. ಇದರಲ್ಲಿ 21 ಫಲಾನುಭವಿಗಳಿಗೆ ₹10.50 ಲಕ್ಷ ವಿತರಿಸಲಾಗಿದೆ. ಕಿರುಸಾಲ ಯೋಜನೆ ಅಡಿ 10 ಮಂದಿ ಫಲಾನುಭವಿಗಳಿಗೆ ₹2 ಲಕ್ಷ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT