ಬುಧವಾರ, ಆಗಸ್ಟ್ 21, 2019
22 °C
ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ಕಟ್ಟಡದಲ್ಲಿ ಮೋಡಬಿತ್ತನೆ ಪ್ರಯೋಗ

ಗದುಗಿನಲ್ಲಿ ರೆಡಾರ್‌ ಕೇಂದ್ರ ಸ್ಥಾಪನೆ

Published:
Updated:
Prajavani

ಗದಗ: ಇಲ್ಲಿನ ಗದಗ–ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡಿರುವ ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ಕಟ್ಟಡದಲ್ಲಿ, ಮೋಡ ಬಿತ್ತನೆಗಾಗಿ ರೆಡಾರ್‌ ಕೇಂದ್ರ ತೆರೆಯಲಾಗಿದ್ದು, ಕಟ್ಟಡದ ಮೇಲ್ಭಾಗದಲ್ಲಿ ರೆಡಾರ್‌ ಯಂತ್ರವನ್ನು ಅಳವಡಿಸಲಾಗಿದೆ.

ಗದಗ ಕೇಂದ್ರದಿಂದ 200 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಮೋಡಗಳಲ್ಲಿ ನೀರಿನ ಸಾಂದ್ರತೆ, ತೇವಾಂಶ ಗುರುತಿಸಿ ಅವುಗಳ ಬಗ್ಗೆ ಚಿತ್ರ ಸಹಿತ ಮಾಹಿತಿಯನ್ನು ಈ ರೆಡಾರ್‌ ನೀಡಲಿದೆ. ತಜ್ಞರ ತಂಡವು ಈ ದತ್ತಾಂಶಗಳನ್ನು ವಿಶ್ಲೇಷಿಸಿ, ಮೋಡಬಿತ್ತನೆ ಕಾರ್ಯಾಚರಣೆ ನಡೆಸುವ ವಿಮಾನದ ಪೈಲಟ್‌ಗೆ ರವಾನಿಸುತ್ತಾರೆ. ಈ ಮಾಹಿತಿ ಆಧರಿಸಿ ಹುಬ್ಬಳ್ಳಿ ವಿಮಾನ ನಿಲ್ದಾಣ ಕೇಂದ್ರವಾಗಿಟ್ಟುಕೊಂಡು ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ನಡೆಯಲಿದೆ.

ಮೋಡಗಳ ಫಲವತ್ತತೆ ಆಧರಿಸಿ ಪ್ರತಿ ದಿನ ಸರಾಸರಿ 3 ಗಂಟೆ ಕಾರ್ಯಾಚರಣೆ ನಡೆಸುವ ಗುರಿ ಹೊಂದಲಾಗಿದೆ. 2018ರ ಸೆಪ್ಟೆಂಬರ್‌ನಲ್ಲಿ ಗದುಗಿನಲ್ಲಿ ರೆಡಾರ್‌ ಕೇಂದ್ರ ಸ್ಥಾಪಿಸಿ, ಮಲಪ್ರಭಾ ಹಾಗೂ ತುಂಗಾಭದ್ರಾ ಜಲಾನಯನ ಪ್ರದೇಶಗಳಲ್ಲಿ ಮೋಡ ಬಿತ್ತನೆ ನಡೆಸಲಾಗಿತ್ತು.

‘ಸದ್ಯ ರೆಡಾರ್‌ ಕೇಂದ್ರದಲ್ಲಿ ಸಿಬ್ಬಂದಿ ತಂತ್ರಾಂಶ ಅಳವಡಿಕೆ ಮತ್ತು ಪರೀಕ್ಷೆ ಕಾರ್ಯದಲ್ಲಿ ತೊಡಗಿದ್ದಾರೆ. ಮೋಡಬಿತ್ತನೆಯ ಸಂಪೂರ್ಣ ನಿರ್ವಹಣೆಯನ್ನು ಗುತ್ತಿಗೆ ಪಡೆದಿರುವ ಸಂಸ್ಥೆ ಮತ್ತು ಮೋಡ ಬಿತ್ತನೆ ಉಸ್ತುವಾರಿಗಾಗಿ ಸರ್ಕಾರ ರಚಿಸಿರುವ ತಜ್ಞರ ತಂಡವು ನೋಡಿಕೊಳ್ಳಲಿದೆ. ಸ್ಥಳೀಯವಾಗಿ ಹೆಚ್ಚಿನ ಮಾಹಿತಿ ಇಲ್ಲ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

‘ಶೇ 45ಕ್ಕಿಂತ ಹೆಚ್ಚಿನ ತೇವಾಂಶ ಹೊಂದಿದ ಮೋಡಗಳನ್ನು ಮೋಡಬಿತ್ತನೆಗೆ ಗುರುತಿಸಲಾಗುತ್ತದೆ. ಇಂತಹ ಫಲವತ್ತಾದ ಮೋಡಗಳಿಗಾಗಿ ಕಾಯಬೇಕಾಗುತ್ತದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನಿಸರ್ಗ ಹೇಗೆ ಸ್ಪಂದಿಸುತ್ತದೆ ಎನ್ನುವುದೂ ಕೂಡ ಅಷ್ಟೇ ಮುಖ್ಯ’ ಎಂದು ತಂತ್ರಾಂಶ ಅಳವಡಿಕೆ ಮಾಡುತ್ತಿದ್ದ ರೆಡಾರ್‌ ಕೇಂದ್ರದ ತಾಂತ್ರಿಕ ಸಿಬ್ಬಂದಿ ಹೇಳಿದರು.

Post Comments (+)