ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ | ಸಮನ್ವಯ ಕೊರತೆ; ಸಾಂಕ್ರಾಮಿಕ ರೋಗ ಭೀತಿ

ಆರೋಗ್ಯ ಇಲಾಖೆಯಿಂದ ಜಾಗೃತಿ: ಚರಂಡಿಗಳ ಸ್ವಚ್ಛತೆಗೆ ಕ್ರಮವಹಿಸದ ಸ್ಥಳೀಯ ಸಂಸ್ಥೆಗಳು
Published 24 ಜೂನ್ 2024, 4:28 IST
Last Updated 24 ಜೂನ್ 2024, 4:28 IST
ಅಕ್ಷರ ಗಾತ್ರ

ಗದಗ: ಮುಂಗಾರು ಆರಂಭಗೊಂಡಿದ್ದು ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಪ್ರತಿದಿನ ಮಳೆ ಸುರಿದಾಗಲೂ ಉಕ್ಕಿ ಹರಿಯುವ ಚರಂಡಿಗಳು ಸ್ಥಳೀಯ ಸಂಸ್ಥೆಗಳ ಕಾರ್ಯವೈಖರಿಗೆ ಕನ್ನಡಿ ಹಿಡಿಯುತ್ತಿವೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳು ಚರಂಡಿಗಳನ್ನು ಸ್ವಚ್ಛಗೊಳಿಸುವಂತಹ ಕನಿಷ್ಠ ಮಟ್ಟದ ಕೆಲಸವನ್ನೂ ಮಾಡದಿರುವುದು ಸಾರ್ವಜನಿಕರಲ್ಲಿ ಆಕ್ರೋಶ ತರಿಸಿದೆ.

ಅವಳಿ ನಗರವೂ ಸೇರಿದಂತೆ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಊರುಗಳ ಚರಂಡಿಗಳ ಸ್ಥಿತಿ ಶೋಚನೀಯವಾಗಿದೆ. ಕಸ–ಮುಸುರೆ, ಕಡ್ಡಿ– ಪ್ಲಾಸ್ಟಿಕ್‌ ತುಂಬಿಕೊಂಡು ಅಸಹ್ಯ ಹುಟ್ಟಿಸುತ್ತಿವೆ. ಇಂತಹ ಚರಂಡಿಗಳು ಸೊಳ್ಳೆ ಉತ್ಪಾದನೆಯ ಕಾರ್ಖಾನೆಗಳಾಗಿವೆ. ಸ್ವಚ್ಛತೆಗೆ ಕಟ್ಟುನಿಟ್ಟಿನ ಕ್ರಮವಹಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಮುಂದುವರಿಸಿದ್ದಾರೆ.

ಸ್ವಚ್ಛತೆ ಕೊರತೆ ಕಾರಣದಿಂದ ಉಲ್ಭಣಿಸುತ್ತಿರುವ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಶ್ರಮಿಸುತ್ತಿದೆ. ಡೆಂಗಿ, ಚಿಕೂನ್‌ಗುನ್ಯಾ, ಮಲೇರಿಯಾ ನಿಯಂತ್ರಣಕ್ಕೆ ನಗರದಿಂದ ಗ್ರಾಮ ಮಟ್ಟದವರೆಗೂ ಕಾರ್ಯಕ್ರಮಗಳನ್ನು ಆಯೋಜಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಆರೋಗ್ಯ ಇಲಾಖೆ ಜತೆಗೆ ಸ್ಥಳೀಯ ಸಂಸ್ಥೆಗಳು ಕೂಡ ಸಮನ್ವಯದಿಂದ ಕೆಲಸ ನಿರ್ವಹಿಸಿದರೆ ಕೀಟಜನ್ಯ ರೋಗಗಳನ್ನು ಸಂಪೂರ್ಣ ನಿಯಂತ್ರಿಸಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಪುರಸಭೆಯಿಂದ ಸ್ವಚ್ಛತೆ ನಿರ್ಲಕ್ಷ

ಮುಂಡರಗಿ: ಸ್ವಚ್ಛತೆಯ ಕೊರತೆ, ಮಳೆಯ ಕಾರಣದಿಂದ ಅಲ್ಲಲ್ಲಿ ನಿಯಮಿತವಾಗಿ ಸಂಗ್ರಹವಾಗುವ ಮಳೆನೀರು, ಸ್ವಚ್ಛತೆ ಕುರಿತಾಗಿ ಪುರಸಭೆಯ ನಿರ್ಲಕ್ಷ್ಯ ಮೊದಲಾದ ಕಾರಣಗಳಿಂದ ಪಟ್ಟಣವು ಸೇರಿದಂತೆ ತಾಲ್ಲೂಕಿನಾದ್ಯಂತ ಜನರು ಸಾಂಕ್ರಾಮಿಕ ರೋಗಗಳ ಭೀತಿಗೆ ಒಳಗಾಗಿದ್ದಾರೆ.

ಪಟ್ಟಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕುರಿತಂತೆ ಪುರಸಭೆಯು ದಿವ್ಯ ನಿರ್ಲಕ್ಷ್ಯ ವಹಿಸಿದೆ. ಈ ಕಾರಣದಿಂದ ಪಟ್ಟಣದ ಬಹುತೇಕ ಚರಂಡಿಗಳು ಗಬ್ಬೆದ್ದು ನಾರುತ್ತಲಿವೆ. ಚರಂಡಿ, ರಸ್ತೆ ಮಧ್ಯದಲ್ಲಿ ನಿರ್ಮಾಣವಾಗಿರುವ ಬೃಹತ್ ಗುಂಡಿಗಳಲ್ಲಿ ಹಾಗೂ ಪಟ್ಟದಲ್ಲಿರುವ ಸಾವಿರಾರು ಖಾಲಿ ನಿವೇಶನಗಳಲ್ಲಿ ನಿತ್ಯ ಸಂಗ್ರಹವಾಗುವ ಗಲೀಜು ನೀರು ಸಾಂಕ್ರಾಮಿಕ ರೋಗ ಹರಡಲು ಪ್ರಮುಖ ಕಾರಣವಾಗಿದೆ.

ಪಟ್ಟಣದ ಚರಂಡಿ, ರಸ್ತೆ, ಖಾಲಿ ನಿವೇಶನ ಮೊದಲಾದ ಭಾಗಗಳು ಸೊಳ್ಳೆ, ಹಂದಿ, ಬೀದಿ ನಾಯಿ ಮೊದಲಾದವುಗಳ ಅಡಗುದಾಣಗಳಾಗಿದ್ಸು, ಅವು ಸಾಂಕ್ರಾಮಿಕ ರೋಗ ಹರಡುವ ಪ್ರಮುಖ ಕೇಂದ್ರಗಳಾಗಿವೆ. ಪುರಸಭೆಯು ಆಗಾಗ ರಸ್ತೆ ಹಾಗೂ ಚರಂಡಿಗಳನ್ನು ಸ್ವಚ್ಛಮಾಡುತ್ತದೆ. ಆದರೆ, ಚರಂಡಿ ಹಾಗೂ ರಸ್ತೆಗಳಿಗೆ ನಿಯಮಿತವಾಗಿ ಡಿಡಿಟಿ, ಫಾಗಿಂಗ್ ಹಾಗೂ ಮತ್ತಿತರ ಕ್ರಿಮಿನಾಶಕಗಳನ್ನು ಸಿಂಪಡಿಸದೆ ಇರುವುದರಿಂದ ಸಾಂಕ್ರಾಮಿಕ ರೋಗಗಳನ್ನು ಹರಡುವ ಕ್ರಿಮಿಗಳು ಉಲ್ಬಣಗೊಳ್ಳುತ್ತಲಿವೆ.

ಚಿಕ್ಕಮಕ್ಕಳಿಗೆ ಜ್ವರಬಾಧೆ

ಗಜೇಂದ್ರಗಡ ತಾಲ್ಲೂಕಿನಲ್ಲಿ ಉತ್ತಮ ಮಳೆ ಸುರಿದಿದ್ದು, ರೈತರಲ್ಲಿ ಕೃಷಿ ಕಾರ್ಯ ಕೈಗೊಳ್ಳಲು ಉತ್ಸಾಹ ಮೂಡಿಸಿದೆ. ಮತ್ತೊಂದೆಡೆ ಗ್ರಾಮಗಳಲ್ಲಿ ಹಾಗೂ ಗ್ರಾಮಗಳ ಹೊರ ವಲಯದಲ್ಲಿರುವ ತಗ್ಗು ಪ್ರದೇಶದಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ. ಹೀಗಾಗಿ ಜನರಲ್ಲಿ ಡೆಂಗಿ, ಚಿಕೂನ್‌ಗುನ್ಯಾ, ಮಲೇರಿಯಾದಂತ ಕೀಟಜನ್ಯ ರೋಗಗಳ ಭಯ ಹೆಚ್ಚಾಗಿದೆ.

ಹಳ್ಳಿಗಳಲ್ಲಿ ತಗ್ಗು ಪ್ರದೇಶದಲ್ಲಿ ಸಂಗ್ರಹವಾಗಿರುವ ಮಳೆ ನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿದ್ದು, ಜನ-ಜಾನುವಾರುಗಳನ್ನು ಹಗಲು-ರಾತ್ರಿ ಕಚ್ಚುತ್ತಿವೆ. ಜನರು ರಾತ್ರಿ ಸಮಯದಲ್ಲಿ ಸೊಳ್ಳೆ ಪರೆದೆ ಇಲ್ಲದೇ ಮಲಗುವುದು ದುಸ್ತರವಾಗಿದೆ. ಚಿಕ್ಕ ಮಕ್ಕಳಲ್ಲಿ ಪದೇ ಪದೇ ಜ್ವರ ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅತಿಸಾರ ನಿಯಂತ್ರಣಕ್ಕೆ ಕ್ರಮ

ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಮಳೆಗಾಲದಲ್ಲಿ ಬರುವ ಅತಿಸಾರದಂಥ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಸಲುವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಸುಭಾಷ ದಾಯಗೊಂಡ ತಿಳಿಸಿದ್ದಾರೆ.

ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿನ ಮೇಲ್ಮಟ್ಟದ ಟ್ಯಾಂಕ್‌ಗಳನ್ನು ಸ್ವಚ್ಛ ಮಾಡುವಂತೆ ಸೂಚನೆ ನೀಡಲಾಗಿದೆ. ಇನ್ನು ಸಾರ್ವಜನಿಕರು ಮಳೆಗಾಲದಲ್ಲಿ ನೀರನ್ನು ಕುದಿಸಿ ಕುಡಿಯಬೇಕು. ಮತ್ತು ಕೊಳವೆಬಾವಿಗಳ ಸುತ್ತ ಗಲೀಜು ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಇದರೊಂದಿಗೆ ಮನೆ‌ ಸುತ್ತಮುತ್ತಲಿನ ಪರಿಸರವನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಅತಿಸಾರ ರೋಗ ಕಂಡು ಬಂದರೆ ನಿಯಂತಣಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ರೋಗ ನಿಯಂತ್ರಣಕ್ಕೆ ಜಾಗೃತಿ ಜಾಥಾ

ನರಗುಂದ ತಾಲ್ಲೂಕಿನ ಕಣಕಿಕೊಪ್ಪ, ಕೊಣ್ಣೂರಲ್ಲಿ ಕಳೆದ ತಿಂಗಳು ತಲಾ ಒಂದು ಡೆಂಗಿ ಪ್ರಕರಣ, ಜಗಾಪುರ, ಶಿರೋಳದಲ್ಲಿ ತಲಾ ಒಂದು ಚಿಕೂನ್‌ಗುನ್ಯಾ ಪ್ರಕರಣ ಕಂಡು ಬಂದಿವೆ. ಸಕಾಲಕ್ಕೆ ಸರಿಯಾದ ಚಿಕಿತ್ಸೆ ದೊರೆತ ಪರಿಣಾಮ ಆ ರೋಗಿಗಳು ವಾಸಿಯಾಗಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ನಿಂತ ನೀರು, ಗ್ರಾಮೀಣ ಪ್ರದೇಶದ ತಗ್ಗು ಪ್ರದೇಶಗಳು ಸೊಳ್ಳೆ ಉತ್ಪತ್ತಿಯ ತಾಣಗಳಾಗಿವೆ. ಇದರ ಪರಿಣಾಮ ಡೆಂಗಿ, ಚಿಕೂನ್‌ಗುನ್ಯಾ, ಮಲೇರಿಯಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೀಟಜನ್ಯ ರೋಗ ನಿಯಂತ್ರಣಕ್ಕೆ ತಾಲ್ಲೂಕು ಆರೋಗ್ಯ ಇಲಾಖೆ ನಿರಂತರ ಕೆಲಸ ಮಾಡುತ್ತಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ.

ಆರೋಗ್ಯ ಇಲಾಖೆಯು ಹಳ್ಳಿ ಹಾಗೂ ನರಗುಂದ ಶಹರದಲ್ಲಿ ತಮ್ಮ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸಾಂಕ್ರಾಮಿಕ ರೋಗಗಳು ಹರಡದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮನೆಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದೆ.

ಆಸ್ಪತ್ರೆಯಲ್ಲಿ ಆರೈಕೆ

ನರೇಗಲ್ ಭಾಗದಲ್ಲಿ ಮುಂಗಾರು ಮಳೆಯು ಜೋರಾಗಿದ್ದು ತಂಪಿನ ವಾತಾವರಣದಿಂದಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿವೆ. ಹೊಲಕ್ಕೆ ಹೋಗುವ ಜನರು ಮಳೆಯಲ್ಲಿ ಒದ್ದೆಯಾಗಿ ಕೆಮ್ಮು, ನಗಡಿ, ಜ್ವರಿ, ಚಳಿಯಿಂದ ತೊಂದರೆಗೆ ಒಳಗಾಗಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಣಕ್ಕೆ ತರಲು ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿಗಳ ಆಶ್ರಯದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಸಮುದಾಯ ಆರೋಗ್ಯ ಕೇಂದ್ರ ನರೇಗಲ್‌ ವತಿಯಿಂದ ಆರಂಭಿಸಲಾಗಿದೆ.

ಎರಡು ವಾರಗಳ ಹಿಂದೆಯೇ ಆರೋಗ್ಯ ರಕ್ಷಣೆಗೆ ಜನರು ಕೈಗೊಳ್ಳಬೇಕಾಗದ ಮುಂಜಾಗ್ರತ ಕ್ರಮಗಳ ಕುರಿತು ಆಯಾ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಸಂಘ ಸಂಸ್ಥೆಗಳ, ಸ್ಥಳೀಯ ಆಡಳಿತಗಳ ಆಶ್ರಯದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ಜನರಿಗೆ ಉತ್ತಮ ಆರೈಕೆ ನೀಡಿ ಮಾಹಿತಿ ನೀಡಲಾಗುತ್ತಿದೆ ಎಂದು ನರೇಗಲ್‌ ವೈದ್ಯಾಧಿಕಾರಿ ಡಾ. ಎ.ಡಿ.ಸಾಮುದ್ರಿ ತಿಳಿಸಿದ್ದಾರೆ.

‌ಪೂರಕ ಮಾಹಿತಿ: ಕಾಶೀನಾಥ ಬಿಳಿಮಗ್ಗದ, ಶ್ರೀಶೈಲ ಎಂ.ಕುಂಬಾರ, ನಾಗರಾಜ ಎಸ್‌.ಹಣಗಿ, ಬಸವರಾಜ ಹಲಕುರ್ಕಿ, ಚಂದ್ರು ಎಂ.ರಾಥೋಡ್‌

ಯಾರು ಏನಂತಾರೆ?

ನಿಯಮಿತವಾಗಿ ರಕ್ತ ತಪಾಸಣೆ ಜಿಲ್ಲೆಯಲ್ಲಿ ಕೀಟಜನ್ಯ ರೋಗಗಳ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ. ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ನಿಯೋಜಿಸಿ ಲಾರ್ವಾ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಶಂಕಿತರ ರಕ್ತದ ಮಾದರಿ ಸಂಗ್ರಹಿಸಿ ಡೆಂಗಿ ಚಿಕೂನ್‌ಗುನ್ಯಾ ಮಲೇರಿಯಾ ಪರೀಕ್ಷೆ ನಿಯಮಿತವಾಗಿ ಮಾಡಲಾಗುತ್ತಿದೆ.

-ಡಾ.ವೆಂಕಟೇಶ ರಾಠೋಡ ಜಿಲ್ಲಾ ರೋಗವಾಹಕ

ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಚರಂಡಿ ಸ್ವಚ್ಛತೆಗೆ ಕ್ರಮ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಕ್ಷ್ಮೇಶ್ವರ ನಗರಕ್ಕೆ ಪೂರೈಕೆಯಾಗುವ ತುಂಗಭದ್ರಾ ನದಿ ನೀರನ್ನು ಸೂರಣಗಿ ಶುದ್ಧೀಕರಣ ಘಟಕದಲ್ಲಿ ಶುದ್ಧ ಮಾಡಲಾಗುತ್ತಿದೆ. ಕಾಲ ಕಾಲಕ್ಕೆ ನೀರಿನ ಟ್ಯಾಂಕ್‌ಗಳನ್ನು ತೊಳೆದು ಮಾಡಲು ಕ್ರಮಕೈಗೊಳ್ಳಲಾಗಿದೆ. ಅಲ್ಲದೆ ಪಟ್ಟಣದಲ್ಲಿ ಪ್ರತಿದಿನ ಉತ್ಪನ್ನವಾಗುವ ಕಸವನ್ನು ತ್ಯಾಜ್ಯ ವಿಲೇವಾರಿ ಸಾಗಿಸಲಾಗುತ್ತಿದೆ. ಜೊತೆಗೆ ಚರಂಡಿ  ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಹಾಕಲು ಪೌರಕಾರ್ಮಿಕರಿಗೆ ತಿಳಿಸಲಾಗಿದೆ.

-ಮಹೇಶ ಹಡಪದ ಮುಖ್ಯಾಧಿಕಾರಿ

ಲಕ್ಷ್ಮೇಶ್ವರ ಪುರಸಭೆ ಹಳ್ಳಿಗಳಲ್ಲಿ ಹೆಚ್ಚಿನ ಜಾಗೃತಿ ಗ್ರಾಮ ಪಂಚಾಯ್ತಿ ಶಾಲಾ ಕಾಲೇಜು ಶಿಕ್ಷಕರಿಗೆ ಜಾಗೃತಿ ಕಾರ್ಯಕ್ರಮ ನಡೆಸಿ ಅವರ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಮನೆಗಳಲ್ಲಿ ನೀರಿನ ತೊಟ್ಟಿಯ ಸ್ವಚ್ಛತೆ ಲಾರ್ವಾ ಸಮೀಕ್ಷೆ ನಿಂತ ನೀರಿನ ಸ್ಥಳದಲ್ಲಿ ಟೆಮಿಪಾಸ್ ಸಿಂಪರಣೆ ಸೇರಿದಂತೆ ವಿವಿಧ ಸೊಳ್ಳೆ ಲಾರ್ವಾ ನಾಶಕ್ಕೆ ಹಲವಾರು ಕಾರ್ಯಕ್ರಮ ಕೈಗೊಂಡಿದೆ. ಸಾಂಕ್ರಾಮಿಕ ರೋಗ ಹರಡದಂತೆ ಪ್ರತಿಯೊಂದು ಹಳ್ಳಿಗಳಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ತಾಲ್ಲೂಕಿನಾದ್ಯಂತ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ. ಹಳ್ಳಿಗರಲ್ಲಿ ನಾಗರಿಕ ಪ್ರಜ್ಞೆ ಹೆಚ್ಚಾದರೆ ಸೊಳ್ಳೆಗಳು ಉತ್ಪಾದನೆ ಆಗದಂತೆ ಮಾಡಬಹುದು.

ಡಾ.ರೇಣುಕಾ ಕೊರವನವರ ತಾಲ್ಲೂಕು ಆರೋಗ್ಯಾಧಿಕಾರಿ

ನರಗುಂದ ಡೆಂಗಿ ನಿಯಂತ್ರಣಕ್ಕೆ ಕ್ರಮ ಮುಂಡರಗಿ ತಾಲ್ಲೂಕು ಆರೋಗ್ಯ ಇಲಾಖೆಯು ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಗಟ್ಟಲು ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಪಟ್ಟಣದಲ್ಲಿ ನಿಯಮಿತವಾಗಿ ಲಾರ್ವಾ ಸಮೀಕ್ಷೆ ಕೈಗೊಳ್ಳಲಾಗಿದೆ. ಹಳ್ಳಿಗಳಿಗೆ ತೆರಳಿ ಸಾಂಕ್ರಾಮಿಕ ರೋಗ ಹರಡುವ ವಿಧಾನ ಕೈಗೊಳ್ಳಬಹುದಾದ ಮುಂಜಾಗೃತಾ ಕ್ರಮ ಮೊದಲಾದವುಗಳ ಕುರಿತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತಿದೆ.

ಗ್ರಾಮ ಪಂಚಾಯ್ತಿ ಪಿಡಿಒ

ಗ್ರಾಮೀಣ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಂಕ್ರಾಮಿಕ ರೋಗ ತಡೆಗಟ್ಟುವ ಕುರಿತಂತೆ ವಿವಿಧ ಜಾಗೃತಿ ಹಾಗೂ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ. ಡೆಂಗಿ ಸೇರಿದಂತೆ ಸಾಂಕ್ರಾಮಿಕ ರೋಗಗಳನ್ನು ಆರಂಭದ ಹಂತದಲ್ಲಿಯೇ ನಿಯಂತ್ರಿಸಲಾಗಿದೆ. ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಲು ಅಗತ್ಯವಿರುವ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಡಾ.ಲಕ್ಷ್ಮಣ ಪೂಜಾರ ತಾಲ್ಲೂಕು ಆರೋಗ್ಯಾಧಿಕಾರಿ ಮುಂಡರಗಿ

ಫೀವರ್‌ ಕ್ಲಿನಿಕ್‌ ಆರಂಭ ಕಲುಷಿತ ನೀರಿನಿಂದ ಮಲೇರಿಯಾ ಬರುತ್ತದೆ. ತೆಂಗಿನ ಚಿಪ್ಪು ಟೈರ್‌ ಒಡೆದ ಬಾಟಲ್‌ಗಳು ನೀರು ಸಂಗ್ರಹಿಸುವ ಪಾತ್ರೆಗಳಲ್ಲಿ ಸಂಗ್ರಹವಾಗುವ ಶುದ್ಧ ಮಳೆ ನೀರಿನಲ್ಲಿ ಲಾರ್ವಾಗಳು ಉತ್ಪತ್ತಿಯಾಗಿ ಅದರಿಂದ ಡೆಂಗಿ ಬರುತ್ತದೆ. ಹೀಗಾಗಿ ಆರೋಗ್ಯ ಇಲಾಖೆ ಈಗಾಗಲೇ ಆಶಾ ಕಾರ್ಯಕರ್ತೆಯರೊಂದಿಗೆ ಪ್ರತಿ ಮನೆಗೆ ಭೇಟಿ ನೀಡಿ ಲಾರ್ವಾ ಸಮಿಕ್ಷೆ ಮಾಡಲಾಗುತ್ತಿದೆ. ಅಂಗನವಾಡಿ ದೇವಸ್ಥಾನ ಶಾಲೆಗಳಲ್ಲಿ ಐಇಸಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಕೀಟಜನ್ಯ ರೋಗಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಡೆಂಗಿ ಮಲೇರಿಯಾ ಪ್ರಕರಣಗಳು ಕಂಡು ಬಂದಲ್ಲಿ. ಆ ಪ್ರದೇಶದಲ್ಲಿ ಫೀವರ್‌ ಕ್ಲಿನಿಕ್‌ ತೆರೆದು ರಕ್ತದ ಮಾದರಿ ಸಂಗ್ರಹಿಸಿ ತಪಾಸಣೆಗೆ ಕಳಿಸಲಾಗುತ್ತಿದೆ

ಡಾ.ಬಿ.ಎಸ್.ಭಜಂತ್ರಿ ರೋಣ-ಗಜೇಂದ್ರಗಡ ತಾಲ್ಲೂಕು ಆರೋಗ್ಯ ಅಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT