ಶನಿವಾರ, ಡಿಸೆಂಬರ್ 5, 2020
19 °C
ಕೈಗೂಡದ ನಿವೇಶನದ ಕನಸು; ಅಭಿವೃದ್ಧಿಗೊಳ್ಳದ ಬಡಾವಣೆಗಳು

ಗದಗ: ಈಡೇರಲಿಲ್ಲ ನಿವೇಶನ ಹೊಂದುವ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಗದಗ: ಅಸ್ತಿತ್ವಕ್ಕೆ ಬಂದು 22 ವರ್ಷಗಳ ಬಳಿಕ ಹೊಸ ಬಡಾವಣೆಯೊಂದನ್ನು ನಿರ್ಮಿಸಲು ಗದಗ ನಗರಾಭಿವೃದ್ಧಿ ಪ್ರಾಧಿಕಾರ ಭರದ ಸಿದ್ಧತೆ ನಡೆಸಿದೆ! ಅಂತೆಯೇ, ಕರ್ನಾಟಕ ಹೌಸಿಂಗ್‌ ಬೋರ್ಡ್‌ನವರು 2012ರಲ್ಲಿ ನಿರ್ಮಿಸಿದ ಲೇಔಟ್‌ನಲ್ಲಿ ಈವರೆಗೂ ಒಂದು ಮನೆ ಕೂಡ ಮೇಲೆದ್ದಿಲ್ಲ. ನಿರ್ವಹಣೆ ಕೊರತೆಯಿಂದಾಗಿ ಅಭಿವೃದ್ಧಿಪಡಿಸಿದ ಮೂಲಸೌಕರ್ಯಗಳೆಲ್ಲವೂ ಹಾಳಾಗಿವೆ.

ಗದಗ ನಗರದಲ್ಲಿ ರಿಯಲ್‌ ಎಸ್ಟೇಟ್‌ನವರು ಅಭಿವೃದ್ಧಿಪಡಿಸಿರುವ ಲೇಔಟ್‌ಗಳದ್ದೇ ದರ್ಬಾರು. ಹೆಚ್ಚಿನ ಬಡಾವಣೆಗಳಲ್ಲಿ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ಇಂತಹ ಪ್ರದೇಶಗಳಲ್ಲಿ ಉಂಟಾಗುವ ಅಧ್ವಾನ ಹೇಳತೀರದಾಗಿದೆ. ‌‌

ಹೀಗೆ ಎರಡು ವೈರುಧ್ಯ ಸನ್ನಿವೇಶಗಳ ನಡುವೆ ಗದುಗಿನಲ್ಲಿರುವ ಮಧ್ಯಮ ವರ್ಗದ ಜನರ ನಿವೇಶನದ ಕನಸು ಕಮರುತ್ತಿದೆ. ಕೈಗೆಟುಕುವ ದರದಲ್ಲಿ ಸೈಟ್‌ ಕೊಂಡು ಮನೆ ಕಟ್ಟಿಸಬೇಕು ಎಂಬ ಅವರ ಆಸೆ ಇನ್ನೂ ಕೈಗೂಡಿಲ್ಲ.

‘ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇಔಟ್‌ ಮಾಡಿ, ನಿವೇಶನಗಳನ್ನು ಮಾರಾಟ ಮಾಡುವ ಯೋಜನೆ ಪ್ರಗತಿಯಲ್ಲಿದ್ದು ಅದಕ್ಕಾಗಿ ಭೂಮಿ ಹುಡುಕಾಟದಲ್ಲಿ ಇದ್ದೇವೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಪ್ಪು ಮಣ್ಣಿನ ಭೂಮಿ ಹೆಚ್ಚಾಗಿರುವುದರಿಂದ ಇನ್ನೂ ಭೂಮಿ ಗುರುತಿಸುವ ಕಾರ್ಯ ಅಂತಿಮಗೊಂಡಿಲ್ಲ. ಈಗಾಗಲೇ ಕೆಲವೆಡೆ ಭೂಮಿ ನೋಡಿದ್ದು, ಜಾಗ ಅಂತಿಮಗೊಂಡ ನಂತರ ಲೇಔಟ್‌ ಮಾಡಲಾಗುವುದು’ ಎನ್ನುತ್ತಾರೆ ಗದಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿ.ರಮೇಶ್‌.

ನಗರಾಭಿವೃದ್ಧಿ ಪ್ರಾಧಿಕಾರ ಆರಂಭಗೊಂಡು 22 ವರ್ಷಗಳು ಕಳೆದಿದ್ದರೂ ಕೂಡ ಇದರ ವತಿಯಿಂದ ಈವರೆಗೆ ಒಂದೇ ಒಂದು ಲೇಔಟ್‌ ಕೂಡ ಅಭಿವೃದ್ಧಿಪಡಿಸಿಲ್ಲ ಏಕೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ:

‘ನಗರ ವ್ಯಾಪ್ತಿಯಲ್ಲಿರುವ ಜಾಗವನ್ನು ಯಾರೂ ಕೊಡುತ್ತಿಲ್ಲ. ಸ್ವಲ್ಪ ದೂರ ಇರುವ ಜಮೀನುಗಳನ್ನು ಗುರುತಿಸಿ, ರೈತರ ಮನವೊಲಿಸುವುದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ’.

‘ತಿಂಗಳ ಸಂಬಳವನ್ನೇ ನಂಬಿ ಜೀವನ ನಡೆಸುವವರು. ಸಣ್ಣ ಪುಟ್ಟ ವ್ಯಾಪಾರ, ಉದ್ದಿಮೆಗಳಲ್ಲಿ ಬದುಕು ಕಟ್ಟಿಕೊಂಡಿರುವ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ನಿವೇಶನ ಒದಗಿಸಿಕೊಡಬೇಕು ಎಂಬುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಹೊಸ ಲೇಔಟ್‌ಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ’ ಎಂದು ಹೇಳಿದ ಅವರು, ರಿಯಲ್‌ ಎಸ್ಟೇಟ್‌ನವರು ಅಭಿವೃದ್ಧಿ ಪಡಿಸಿದ ಬಡಾವಣೆಗಳಲ್ಲಿ ನಿವೇಶಗಳ ಪತ್ರಗಳು ಸರಿ ಇರುತ್ತವೆಯೋ, ಇಲ್ಲವೋ ಎಂಬ ಭಯ ಹಲವರಿಗೆ ಇರುತ್ತದೆ. ಅಂತವರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳೇ ಆಸರೆಯಾಗಲಿವೆ ಎಂದರು.

‘ಆರಂಭಿಕವಾಗಿ ಪ್ರಾಧಿಕಾರದ ವತಿಯಿಂದ ಮೊದಲಿಗೆ 25 ಎಕರೆ ಪ್ರದೇಶದಲ್ಲಿ ನಿವೇಶಗಳನ್ನು ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಒಂದು ಎಕರೆ ಜಮೀನಿನಲ್ಲಿ 20X30, 30X40, 30X50, 60X40 ಹೀಗೆ ವಿವಿಧ ಅಳತೆಯ 20 ನಿವೇಶಗಳನ್ನು ಅಭಿವೃದ್ಧಿ ಪಡಿಸಬಹುದು. ಮಧ್ಯಮ ವರ್ಗದವರಿಂದ ಹಿಡಿದು ಶ್ರೀಮಂತರವರೆಗೂ ಎಲ್ಲರೂ ಒಂದೇ ಪ್ರದೇಶದಲ್ಲಿ ನಿವೇಶನ ಒದಗಿಸಬೇಕು ಎಂಬುದು ಇದರ ಹಿಂದಿನ ಆಶಯ. ನಿಯಮದ ಪ್ರಕಾರ ಒಂದು ಬಡಾವಣೆ ಅಭಿವೃದ್ಧಿ ಪಡಿಸುವಾಗ ಶೇ 10 ಉದ್ಯಾನಕ್ಕೆ ಹಾಗೂ ಶೇ 5ರಷ್ಟು ಜಾಗವನ್ನು ಸಾರ್ವಜನಿಕ ಉದ್ದೇಶಕ್ಕಾಗಿ (ಸಿಎ ಸೈಟ್‌) ಮೀಸಲಿಡಲಾಗುತ್ತದೆ’ ಎಂದು ಹೇಳಿದರು.

ಇನ್ನು ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ವತಿಯಿಂದ ನಗರದಿಂದ ಹೊರ ವಲಯದಲ್ಲಿರುವ ಕಳಸಾಪುರದಲ್ಲಿ 2012ರಲ್ಲಿ 306 ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕನಿಷ್ಠ 4 ಸಾವಿರ ನಿವೇಶಗಳು ಅಲ್ಲಿವೆ. ಆದರೆ, ಅಲ್ಲಿ ಈವರೆಗೂ ಜನವಸತಿ ಆರಂಭಗೊಂಡಿಲ್ಲ. ಎಲ್ಲರೂ ನಿವೇಶಗಳನ್ನು ಖರೀದಿ ಮಾಡಿಟ್ಟುಕೊಂಡು ಸುಮ್ಮನಾಗಿದ್ದಾರೆ. ಕೆಲವರು, ಎಂಟು ವರ್ಷವಾದರೂ ಅಭಿವೃದ್ಧಿಯಾಗಿಲ್ಲ ಎಂದು ನಿವೇಶನಗಳನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ.

‘ಪ್ರತಿ ಮೂರು ವರ್ಷಕ್ಕೊಮ್ಮೆ ಮೂಲಸೌಲಭ್ಯಗಳ ನಿರ್ವಹಣೆಗೆ ಒತ್ತು ನೀಡಬೇಕು ಎಂಬ ನಿಯಮ ಇದೆ. ಆದರೆ, ಎಂಟು ವರ್ಷಗಳಿಂದ ಅಭಿವೃದ್ಧಿ ಚಟುವಟಿಕೆಗಳು ನಡೆಯದೆ ಅಲ್ಲಿನ ರಸ್ತೆಗಳು ಕೆಟ್ಟು ಹೋಗಿವೆ. ಈ ಕಾರಣಕ್ಕಾಗಿ ಗದಗ ನಗರದಲ್ಲಿ ಹೊಸ ಬಡಾವಣೆಗಳ ಅಭಿವೃದ್ಧಿಗೆ ತೊಡಕಾಗಿದೆ. ಇತರೆ ಜಿಲ್ಲಾ ಕೇಂದ್ರಗಳಿಗೆ ಹೋಲಿಸಿದರೆ ಗದಗ ಜಿಲ್ಲೆಯೊಳಗೆ ಅಭಿವೃದ್ಧಿಯ ರಭಸ ಕಾಣುತ್ತಿಲ್ಲ’ ಎನ್ನುತ್ತಾರೆ ಕೆಎಚ್‌ಬಿಯ ಜೂನಿಯರ್‌ ಎಂಜಿನಿಯರ್‌ ಎಲ್‌.ಆರ್‌.ಪಾಟೀಲ ಹೇಳಿದರು.

‘ಗದಗ, ನರಗುಂದ, ಲಕ್ಷ್ಮೇಶ್ವರದಲ್ಲಿ ಹೊಸ ಬಡಾವಣೆಗಳ ನಿರ್ಮಾಣಕ್ಕಾಗಿ ಕೆಎಚ್‌ಬಿಯಿಂದ ಪ್ರಸ್ತಾವ ಸಲ್ಲಿಸಲಾಗಿದೆ. ‌ಸೆಂಟ್ರಲ್‌ ಕಮಿಟಿಯವರು ಬಂದು ಸ್ಥಳ ಪರಿಶೀಲಿಸಿ, ವರದಿ ನೀಡಿದ ನಂತರ ಪ್ರಕ್ರಿಯೆ ಆರಂಭಗೊಳ್ಳಲಿದೆ. ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ನಿವೇಶನ ದೊರಕಿಸಿಕೊಡುವ ನಿಟ್ಟಿನಲ್ಲಿ ಇಡಬ್ಲ್ಯುಎಸ್‌ ಯೋಜನೆ ಮೂಲಕ 20X30 ಅಳತೆಯ ನಿವೇಶನವನ್ನು ಕೆಎಚ್‌ಬಿ ಶೇ 50 ರಿಯಾಯಿತಿ ದರದಲ್ಲಿ ಒದಗಿಸುತ್ತಿದೆ. ಭೂಸ್ವಾಧೀನ ಪ್ರಕ್ರಿಯೆಯ ನಿಧಾನಗತಿ, ರೈತರಿಂದ ಭೂಮಿ ಖರೀದಿಗೆ ಇರುವ ತೊಡಕಿನಿಂದಾಗಿ ಹೊಸ ಬಡಾವಣೆಗಳು ತಲೆ ಎತ್ತುತ್ತಿಲ್ಲ’ ಎಂದು ಅವರು ಹೇಳಿದರು.


ಗದಗ ಕಳಸಾಪುರ ರಸ್ತೆಯಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಬಡಾವಣೆಯ ನೋಟ

**********

ಪ್ರಸ್ತಾವ ಸಲ್ಲಿಕೆ

ಶಿರಹಟ್ಟಿ: ರಾಜೀವ ಗಾಂಧಿ ವಸತಿ ನಿಗಮದ ಯೋಜನೆ ಅಡಿಯಲ್ಲಿ 2016ರ ಸೆ.19ರಂದು ಪಟ್ಟಣದಲ್ಲಿ 5 ಎಕರೆ 20 ಗುಂಟೆ ಜಮೀನನ್ನು ಆಶ್ರಯ ನಿವೇಶನಗಳನ್ನು ಹಂಚಿಕೆ ಮಾಡುವ ಸಲುವಾಗಿ ಖರೀದಿಸಲಾಗಿದ್ದು, ಅನುದಾನದ ಕೊರತೆಯಿಂದ ಅಭಿವೃದ್ಧಿಯಾಗಿಲ್ಲ.

ಭೂಮಿ ಖರೀದಿಸಿ 4 ವರ್ಷಗಳು ಕಳೆದಿದ್ದು, ಎರಡು ಮೂರು ಬಾರಿ ಫಲಾನುಭವಿಗಳ ಆಯ್ಕೆ ಮಾಡಿದರೂ ಈವರೆಗೂ ಅಂತಿಮಗೊಂಡಿಲ್ಲ. ಇದರಿಂದ ಆಶ್ರಯ ನಿವೇಶನಗಳ ಹಂಚಿಕೆ ಮಾಡುವುದು ಗೊಂದಲದ ಗೂಡಾಗಿದೆ. ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾಗಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶ.

‘ಶಿರಹಟ್ಟಿ ಪಟ್ಟಣದಲ್ಲಿರುವ 198 ಆಶ್ರಯ ಬಡಾವಣೆಗಳನ್ನು ಅಭಿವೃದ್ಧಿಗೊಳಿಸಲು ಜಿಲ್ಲಾಧಿಕಾರಿಗಳ ಮೂಲಕ ಪ್ರತಿ ಮನೆಗೆ ₹3 ಸಾವಿರದಂತೆ 198 ಮನೆಗಳಿಗೆ ₹5.94 ಲಕ್ಷ ಅನುದಾನವನ್ನು ಒದಗಿಸಲು ಶಿಫಾರಸು ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಲ್ಲೇಶ ಮಾಹಿತಿ ನೀಡಿದರು.


ಗದಗ ಕಳಸಾಪುರ ರಸ್ತೆಯಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಬಡಾವಣೆಯ ನೋಟ

*******
ಸೂರಿಗಾಗಿ ಪರದಾಟ ತಪ್ಪಿಲ್ಲ: ನಿವೇಶನ ದೊರೆಯುತ್ತಿಲ್ಲ

ನರಗುಂದ: ಪಟ್ಟಣ ದಿನೇ ದಿನೇ ಬೆಳೆಯುತ್ತಿದೆ. ಆದರೆ ಇಲ್ಲಿಯ ನಿವಾಸಿಗಳಿಗೆ ವಸತಿ ಸಮಸ್ಯೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪಟ್ಟಣಕ್ಕೆ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಮನೆಗಳ ಬಾಡಿಗೆ ಹುಬ್ಬಳ್ಳಿ ಮಹಾನಗರಕ್ಕೆ ಸಮನಾಗಿಯೇ ಇದೆ.

‌ಹೊಸ ಬಡಾವಣೆಗಳು ನಿರ್ಮಾಣಗೊಂಡಿದ್ದರೂ ಅವು ಜನ ಸಾಮಾನ್ಯರ ಕೈಗೆಟುಕುತ್ತಿಲ್ಲ. ಇದರಿಂದ ಬೇಗ ನಿವೇಶನ ಖರೀದಿಸಿ, ಮನೆ ಕಟ್ಟಿಕೊಳ್ಳಬೇಕೆನ್ನುವ ಮಧ್ಯಮ ವರ್ಗದ ಜನರ ಕನಸು ಕನಸಾಗಿ ಉಳಿಯುತ್ತಿದೆ.

2001ರಲ್ಲಿ ಸವದತ್ತಿ ರಾಜ್ಯ ಹೆದ್ದಾರಿ ಬದಿ ಕೆಎಚ್‍ಬಿ ಹೊಸದಾಗಿ ಬಡಾವಣೆ ನಿರ್ಮಿಸಿದ್ದು ಬಿಟ್ಟರೆ ಈವರೆಗೆ ಮತ್ತಾವುದೇ ಬಡಾವಣೆ ಆಗಿಲ್ಲ. ಸ್ಥಳೀಯ ಸಂಸ್ಥೆ ಮೂಲಕ ಎರಡು ದಶಕಗಳ ಹಿಂದೆ ಗುಡ್ಡದ ತಡಿಯಲ್ಲಿ ಆಶ್ರಯ ಯೋಜನೆಯಡಿ 2 ಸಾವಿರ ನಿವೇಶನ ಗುರುತಿಸಲಾಗಿದೆ. ಅದರಲ್ಲಿ 496 ಮನೆಗಳು ನಿರ್ಮಾಣವಾಗಿವೆ. ಆದರೆ ರಾಜಕೀಯಿ ತಿಕ್ಕಾಟದಲ್ಲಿ ಅವುಗಳು ಅರ್ಹ ಫಲಾನುಭವಿಗಳಿಗೆ ವಿತರಣೆಯಾಗಿಲ್ಲ. ವಸತಿ ರಹಿತರು ಬಾಡಿಗೆ ಭರಿಸಿ ಜೀವನ ನಡೆಸುವುದು ಕಷ್ಟವಾಗಿದೆ.

‘ನಮಗೆ ಮನೆ ಇಲ್ಲದ ಕಾರಣ ಹಲವಾರು ಬಾರಿ ಪುರಸಭೆಗೆ ಮನವಿ ಸಲ್ಲಿಸಿದ್ದೇವೆ. ಈಗ ಜನತಾ ಪ್ಲಾಟ್‍ನಲ್ಲಿ ವಾಸಿಸುತ್ತಿದ್ದೇವೆ. ಆದರೆ ನಮಗೆ ಹಕ್ಕುಪತ್ರ ನೀಡಿಲ್ಲ. ವಾಸಸ್ಥಳದ ಹಕ್ಕುಪತ್ರ ನೀಡಿ ಅಧಿಕೃತ ಸೂರು ಒದಗಿಸಬೇಕು’ ಎಂದು ಜನತಾ ಪ್ಲಾಟ್‍ ನಿವಾಸಿಗಳು ಆಗ್ರಹಿಸುತ್ತಾರೆ.


ಅಲ್ಲಿರುವ ಒಂಟಿ ಮನೆಗಳಿಗೆ ಕಳ್ಳರ ಭಯ

*********

ಲಕ್ಷ್ಮೇಶ್ವರ: ಪಟ್ಟಣದಲ್ಲಿ ವಾಸಿಸುವ ಮನೆ ಇಲ್ಲದ ಪ್ರತಿಯೊಬ್ಬರಿಗೂ ಮನೆ ಸಿಗಬೇಕು ಎಂಬ ಉದ್ದೇಶದಿಂದ ಇಲ್ಲಿನ ಪುರಸಭೆ ಈಗಾಗಲೇ ರಂಭಾಪುರಿ, ಕರೆಗೌರಿ ಪ್ಲಾಟ್, ರಂಭಾಪುರಿ ಆಶ್ರಯ ಕಾಲೊನಿ ನಿರ್ಮಿಸಿ ಸಾವಿರಾರು ಜನರಿಗೆ ಸೂರು ಕಲ್ಪಿಸಿದೆ.

2018-19ರಲ್ಲಿ ಪಟ್ಟಣದ ತಮ್ಮಾತಿಮ್ಮಿ ರಸ್ತೆಗೆ ಹೊಂದಿಕೊಂಡಂತೆ 16 ಎಕರೆ 16 ಗುಂಟೆ ಜಾಗ ಖರೀದಿಸಿ ಅಂದಾಜು 467 ಫಲಾನುಭವಿಗಳಿಗೆ ಹಂಚಿಕೆ ಮಾಡಿದೆ. ಅದರಂತೆ ಶಿಗ್ಲಿ ರಸ್ತೆಯಲ್ಲಿ ಈಗಾಗಲೇ 32 ಎಕರೆ ಜಾಗವನ್ನು ಆಶ್ರಯ ಉದ್ಧೇಶಕ್ಕಾಗಿ ಖರೀದಿಸಿದ್ದು ಅರ್ಜಿದಾರರಿಗೆ ಹಂಚಿಕೆ ಆಗಬೇಕಿದೆ. ಆಶ್ರಯ ಮನೆ ಕೋರಿ 638 ಅರ್ಜಿಗಳು ಬಂದಿವೆ ಎಂದು ಪುರಸಭೆ ಮಾಹಿತಿಯಿಂದ ಗೊತ್ತಾಗಿದೆ. ಇನ್ನೂ ಹೊಸದಾಗಿ ಅರ್ಜಿ ಸ್ವೀಕರಿಸುತ್ತಿಲ್ಲ.

‘ಮನೆ ಇಲ್ಲದವರನ್ನು ಗುರುತಿಸಿ ಅಂಥವರಿಗೆ ಜಾಗ ವಿತರಿಸಲಾಗುತ್ತಿದೆ’ ಎಂದು ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ತಿಳಿಸಿದರು.

ಇನ್ನು ಹುಡ್ಕೋ ಸಂಸ್ಥೆ ಇಲ್ಲಿನ ದೊಡ್ಡೂರು ರಸ್ತೆಗೆ ಹೊಂದಿಕೊಂಡಂತೆ ಕಳೆದ 25 ವರ್ಷಗಳ ಹಿಂದೆಯೇ ಪ್ಲಾಟ್ ಹಂಚಿಕೆ ಮಾಡಿದೆ. ಆದರೆ ಈವರೆಗಾದರೂ ಅಲ್ಲಿ ಒಂದು ಮನೆ ಸಹ ನಿರ್ಮಾಣ ಆಗಿರುವುದಿಲ್ಲ. ನಂತರ ಅದು ಮತ್ತೆ ಪಟ್ಟಣದಲ್ಲಿ ಯಾವುದೇ ಕಾರ್ಯಚಟುವಟಿಕೆ ನಡೆಸಿಲ್ಲ.

*****


ವಿ.ರಮೇಶ್

ಪ್ರಾಧಿಕಾರದ ವತಿಯಿಂದ 25 ಎಕರೆ ಪ್ರದೇಶದಲ್ಲಿ ನಿವೇಶಗಳನ್ನು ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಮಧ್ಯಮ ವರ್ಗದ ಜನರು, ಉದ್ಯೋಗಸ್ಥರಿಗೆ ನಿವೇಶನ ಒದಗಿಸಲಾಗುವುದು
- ವಿ.ರಮೇಶ್‌, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ

 

 

 

 

(ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ನಾಗರಾಜ ಎಸ್‌.ಹಣಗಿ, ಬಸವರಾಜ ಹಲಕುರ್ಕಿ, ಖಲೀಲಅಹ್ಮದಶೇಖ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.