ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಲಕ್ಷ್ಮೇಶ್ವರದ ಹೊಸ ಬಡಾವಣೆಗಳು

ರಸ್ತೆ, ಒಳಚರಂಡಿ ಸೌಲಭ್ಯ ಇಲ್ಲ; 10 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ; ನಿವಾಸಿಗಳ ಪರದಾಟ
Last Updated 10 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ವಾಣಿಜ್ಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಕಷ್ಟು ಬೆಳವಣಿಗೆ ಕಾಣುತ್ತಿರುವ ಲಕ್ಷ್ಮೇಶ್ವರದಲ್ಲಿ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಜಮೀನಿನ ಬೆಲೆ ಚಿನ್ನದಂತೆ ಏರುತ್ತಲೇ ಇದೆ. ಆದರೂ ಉತ್ತಮ ರಸ್ತೆ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು, ಬೀದಿ ದೀಪದ ಸೌಕರ್ಯಗಳಿಂದ ಬಡಾವಣೆಗಳು ಸೊರಗುತ್ತಿವೆ. ಖಾಲಿ ನಿವೇಶನಗಳು ಕೊಳಚೆ ಕೊಳಚೆ ಪ್ರದೇಶಗಳಾಗಿ ಮಾರ್ಪಾಡಾಗಿವೆ. ಹೊಸ ಬಡಾವಣೆಗಳ ಸಮಸ್ಯೆಗಳ ಕುರಿತಾಗಿ ‘ನಮ್ಮ ನಗರ ನಮ್ಮ ಧ್ವನಿ’ ಬೆಳಕು ಚೆಲ್ಲಿದೆ.

ಲಕ್ಷ್ಮೇಶ್ವರ

ಹೊಸ ತಾಲ್ಲೂಕು ಕೇಂದ್ರವಾದ ಲಕ್ಷ್ಮೇಶ್ವರದಲ್ಲಿ ದಿನದಿಂದ ದಿನಕ್ಕೆ ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ಜನಸಂಖ್ಯೆ ಹೆಚ್ಚಿದಂತೆ ನಗರದ ಹೊರವಲಯದ ಕೃಷಿ ಜಮೀನುಗಳು, ನಿವೇಶನಗಳಾಗಿ ಬದಲಾಗಿ, ನೂತನ ಬಡಾವಣೆಗಳಾಗಿ ರೂಪುಗೊಳ್ಳುತ್ತಿವೆ. ಆದರೆ, ಬಹುತೇಕ ಬಡಾವಣೆಗಳಲ್ಲಿ ಉತ್ತಮ ರಸ್ತೆಯಾಗಲಿ, ಒಳಚರಂಡಿ ಸೌಲಭ್ಯವಾಗಲಿ ಇಲ್ಲ. ಕುಡಿಯುವ ನೀರು, ಬೀದಿ ದೀಪದ ಸೌಕರ್ಯವೂ ಇಲ್ಲ. ಕೆಲವೆಡೆ ಈ ಹೊಸ ಬಡಾವಣೆಗಳು ಕಸದ ತೊಟ್ಟಿಗಳಾಗಿ ಬದಲಾಗಿದ್ದು, ಹಂದಿಗಳು, ಬೀದಿ ನಾಯಿಗಳ ಆವಾಸ ಕೇಂದ್ರಗಳಾಗಿವೆ.

23 ವಾರ್ಡ್‌ಗಳನ್ನು ಒಳಗೊಂಡಿರುವ ಲಕ್ಷ್ಮೇಶ್ವರ ಪಟ್ಟಣದ ಜನಸಂಖ್ಯೆ 40 ಸಾವಿರದಷ್ಟಿದೆ. ಪಟ್ಟಣವು ವಾಣಿಜ್ಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಬೆಳವಣಿಗೆ ಕಾಣುತ್ತಿದೆ. ಎಂಜಿನಿಯರಿಂಗ್, ಪಾಲಿಟೆಕ್ನಿಕ್, ಐಟಿಐ, ಡಿಇಡಿ ಕಾಲೇಜುಗಳಿವೆ. ಸೇರಿದಂತೆ ಹತ್ತಾರು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಸುತ್ತಮುತ್ತಲಿನ ಪಟ್ಟಣಗಳಿಂದಲೂ ನಿತ್ಯ ನೂರಾರು ಜನರು ಉದ್ಯೋಗಕ್ಕಾಗಿ ಇಲ್ಲಿಗೆ ಬರುತ್ತಾರೆ. ಪಟ್ಟಣದ ಸುತ್ತಮುತ್ತಲಿನ ಕಚೇರಿ, ಶಾಲೆಗಳಲ್ಲಿ ಸೇವೆ ಸಲ್ಲಿಸುವ ಸರ್ಕಾರಿ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣದಲ್ಲಿಯೇ ಮನೆ ಕಟ್ಟಿಕೊಳ್ಳಲು ನಿವೇಶನ ಖರೀದಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಜಮೀನಿನ ಬೆಲೆ ಚಿನ್ನದಂತೆ ಏರುತ್ತಲೇ ಇದೆ.

ಹೆಚ್ಚಿನ ಲಾಭದ ಆಸೆಗೆ ಜಮೀನುಗಳ ಮಾಲೀಕರು ಮಧ್ಯವರ್ತಿಗಳ ಮೂಲಕ ಕೃಷಿಭೂಮಿಯನ್ನು ವಾಣಿಜ್ಯ ಬಳಕೆ ಉದ್ದೇಶಕ್ಕೆ ಪರಿವರ್ತಿಸುತ್ತಿದ್ದಾರೆ. ಈಗಾಗಲೇ ನೂರಾರು ಎಕರೆ ಜಮೀನು ವಸತಿ ನಿವೇಶನಗಳಾಗಿ ಬದಲಾಗಿವೆ. ಪಟ್ಟಣದಿಂದ 2 ರಿಂದ 3 ಕಿ.ಮೀ ಸುತ್ತಳತೆಯ ಜಮೀನುಗಳು ನಿವೇಶನಗಳಾಗಿ ಪರಿವರ್ತನೆಯಾಗಿದ್ದು, ನಾಲ್ಕೂ ದಿಕ್ಕುಗಳಲ್ಲಿ ಇಂತಹ ಹೊಸ ಬಡಾವಣೆಗಳು ತಲೆ ಎತ್ತಿ ನಿಂತಿವೆ. ಆದರೆ, ಮೂಲಸೌಕರ್ಯ ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಪಟ್ಟಣ ತೀವ್ರ ಹಿಂದುಳಿದಿದೆ.

ಹೊಸ ಬಡಾವಣೆ ನಿರ್ಮಿಸುವಾಗ, ಅದರ ಮಾಲೀಕರು ಸುಸಜ್ಜಿತ ರಸ್ತೆ, ಚರಂಡಿ, ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಉದ್ಯಾನ, ಶಾಲೆ, ದೇವಸ್ಥಾನಕ್ಕಾಗಿ ಸ್ಥಳ ಬಿಡಬೇಕು. ಹೊಸ ಬಡಾವಣೆಯಲ್ಲಿ ಸಸಿಗಳನ್ನು ಬೆಳೆಸಬೇಕು ಎಂಬ ನಿಯಮವಿದೆ. ಆದರೆ, ಇಲ್ಲಿ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಯಾವ ನೂತನ ಬಡಾವಣೆಗಳಲ್ಲೂ ಹೇಳಿಕೊಳ್ಳುವಂತ ಮೂಲ ಸೌಲಭ್ಯಗಳ ಇಲ್ಲ. ಇಂಥ ಅವ್ಯವಸ್ಥಿತ ಬಡಾವಣೆಗಳಲ್ಲಿ ಮನೆ ಕಟ್ಟಿಕೊಳ್ಳುವವರು ತಾವೇ ಚರಂಡಿ ಮತ್ತು ರಸ್ತೆಗಳನ್ನು ನಿರ್ಮಿಸಿಕೊಳ್ಳಬೇಕಾಗಿದೆ.

ಮಕ್ಕಳ ಶಿಕ್ಷಣ, ವ್ಯವಹಾರ, ನೌಕರಿ ದೃಷ್ಟಿಯಿಂದ ಪಟ್ಟಣಕ್ಕೆ ಬರುವವರು ಇಲ್ಲಿಯೇ ಮನೆ ಕಟ್ಟಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ನಿವೇಶನ ಖರೀದಿಸಿದರೂ ಮೂಲಸೌಕರ್ಯ ಅಭಿವೃದ್ಧಿಯಾಗದ ಕಾರಣ, ಅದನ್ನು ಖಾಲಿ ಬಿಟ್ಟಿದ್ದಾರೆ. ಇನ್ನು ಕೆಲವರು ಭೂಮಿಗೆ ಹೆಚ್ಚಿನ ಬೆಲೆ ಬರುತ್ತಿರುವುದನ್ನು ಗಮನಿಸಿ, ಹೆಚ್ಚಿನ ಲಾಭದಾಸೆ ಮಾರಾಟ ಮಾಡಲು ಖಾಲಿ ಬಿಟ್ಟಿದ್ದಾರೆ. ಸೂಕ್ತ ನಿರ್ವಹಣೆ ಇಲ್ಲದ ಕಾರಣ, ಖಾಲಿ ನಿವೇಶನಗಳು ಕೊಳಚೆ ಪ್ರದೇಶಗಳಾಗಿ ನಗರದ ಸೌಂದರ್ಯವನ್ನು ಹಾಳುಗೆಡವುತ್ತಿದೆ.

‘ನಮ್ಮ ಬಡಾವಣೆಯಲ್ಲಿ 10 ದಿನಕ್ಕೊಮ್ಮೆ ನೀರು ಬಿಡ್ತಾರ್ರೀ. ಅನುಕೂಲ ಇದ್ದವರು ನೀರು ತುಂಬಿಸಿಕೊಂಡ್ರ ಇಲ್ಲದವರು ನೀರಿಗಾಗಿ ದಿನಾಲೂ ಪರದಾಡಬೇಕಾದ ಪರಿಸ್ಥಿತಿ ಐತ್ರಿ’ ಎಂದು ಇಂದಿರಾನಗರದ ನಿವಾಸಿ ಭಾಷಾಸಾಬ್ ಮುಳಗುಂದ ಅಳಲು ತೋಡಿಕೊಂಡರು.

‘ನಮ್ಮ ಬಡಾವಣೆಯಲ್ಲಿ ಒಂದು ರಸ್ತೆಯೂ ಚೆನ್ನಾಗಿಲ್ಲ. ಚರಂಡಿ ಇಲ್ಲ. ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿಯುವುದರಿಂದ ರಸ್ತೆಗಳು ಕೊರೆದು ಕೊರಕಲು ಆಗಿವೆ’ ಎಂದು ಈಶ್ವರ ನಗರದ ನಿವಾಸಿ ವಿನಾಯಕ ಆಚಾರಿ ಸಮಸ್ಯೆ ಹೇಳಿಕೊಂಡರು.

‘ಜನ್ನತ್ ನಗರದಾಗ ಕುಡ್ಯಾಕೆ ನೀರಿಲ್ಲ. ಸರಿಯಾದ ರಸ್ತೆ, ಗಟಾರ ಇಲ್ಲ. ಪುರಸಭೆಗೆ ಹೇಳಿದರೂ ನಮ್ಮ ಸಮಸ್ಯೆ ಬಗೆಹರಿಯುತ್ತಿಲ್ಲ’ ಎಂದು ಜನ್ನತ್ ನಗರದ ನಿವಾಸಿ ಜಾಕೀರ್‌ ಹುಸೇನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT