ಮಂಗಳವಾರ, ಮೇ 18, 2021
24 °C
ನರೇಗಲ್‌ ಅನ್ನದಾನ ವಿಜಯ ಪ್ರೌಢಶಾಲೆ; ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಮಟ್ಟದ ಸಾಧನೆ

ಇದು ಕನ್ನಡದ ಅಭಿಮಾನದ ಶಾಲೆ..!

ಚಂದ್ರು ಎಂ. ರಾಥೋಡ್ Updated:

ಅಕ್ಷರ ಗಾತ್ರ : | |

ನರೇಗಲ್: ಆಂಗ್ಲ ಮಾಧ್ಯಮ ಶಾಲೆಗಳ ಅಬ್ಬರದಿಂದ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಈ ಕನ್ನಡ ಮಾಧ್ಯಮ ಶಾಲೆಯಲ್ಲಿ ಯಾವ ವರ್ಷವೂ ಮಕ್ಕಳ ಪ್ರವೇಶಾತಿ ಕಡಿಮೆಯಾಗಿಲ್ಲ. ಬದಲಿಗೆ ದಾಖಲಾತಿ ಹೆಚ್ಚುತ್ತಲೇ ಇದೆ. ಇದು ಪಟ್ಟಣದ ಅನುದಾನಿತ ಅನ್ನದಾನ ವಿಜಯ ಕನ್ನಡ ಮಾಧ್ಯಮ ಬಾಲಕಿಯರ ಪ್ರೌಢಶಾಲೆ.

1971ರಲ್ಲಿ ಪ್ರಾರಂಭಗೊಂಡ ಈ ಶಾಲೆಯು ಸದ್ಯ ಸುವರ್ಣ ಮಹೋತ್ಸವದ ಹೊಸ್ತಿಲಿನಲ್ಲಿದೆ. ಸದ್ಯ ಶಾಲೆಯಲ್ಲಿ 149 ಬಾಲಕಿಯರು ಕಲಿಯುತ್ತಿದ್ದಾರೆ. ಇದುವರೆಗೆ ಈ ಶಾಲೆಯಿಂದ 3,883 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಹೊರ ಹೋಗಿದ್ದಾರೆ. ಇದರ ಹಿಂದೆ ಗ್ರಾಮೀಣ ಭಾಗದ ಬಾಲಕಿಯರಿಗಾಗಿ ಶಾಲೆಯನ್ನು ಆರಂಭಿಸಿದ ಹಾಲಕೆರೆ ಮಠದ ಬೆತ್ತದ ಅನ್ನದಾನ ಸ್ವಾಮೀಜಿಯವರ ಶೈಕ್ಷಣಿಕ ಪರಿಶ್ರಮ ಅಡಗಿದೆ.

ಕಲಿಕೆ ಗುಣಮಟ್ಟ ಹೆಚ್ಚಿಸಲು ಇಲ್ಲಿನ ಶಿಕ್ಷಕರು ಕೈಗೊಂಡ ವಿನೂತನ ಕ್ರಮಗಳ ಮೂಲಕ ಈ ಶಾಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲೂ ರಾಜ್ಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ. 2018ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯ ವಿದ್ಯಾರ್ಥಿನಿ ಚೈತ್ರಾ ಲಿಂಗಯ್ಯ ಗೌರಿ ಎಸ್ಸೆಸ್ಸೆಲ್ಸಿಯಲ್ಲಿ 625 ಕ್ಕೆ 622 ಅಂಕಗಳನ್ನು (ಶೇ 99.52) ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ 4ನೇ ಸ್ಥಾನ ಗಳಿಸಿ ನರೇಗಲ್‌ನ ಕೀರ್ತಿ ಹೆಚ್ಚಿಸಿದ್ದಾಳೆ. ಶಾಲೆಯ ಒಂದಿಲ್ಲೊಂದು ವಿದ್ಯಾರ್ಥಿ ಪ್ರತಿ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಯಾವುದಾದರೂ ಒಂದು ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸುತ್ತಾರೆ.

ಪಠ್ಯೇತರ ಚಟುವಟಿಕೆಗಳಲ್ಲೂ ಈ ಶಾಲಾ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ. 2016–17 ರಲ್ಲಿ ಮೈಸೂರಿನಲ್ಲಿ ನಡೆದ ವಿಜ್ಞಾನ ಮಕ್ಕಳ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿಜ್ಞಾನ ಕ್ವಿಜ್‌ಗೆ ಆಯ್ಕೆಯಾಗಿದ್ದಾರೆ. 2018–19ರಲ್ಲಿ ನಡೆದ ಜಿಲ್ಲಾ ಮಟ್ಟದ ಸ್ವಚ್ಚ ಭಾರತ ಮುಕ್ತ ಕ್ವಿಜ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ರೇಡಿಯೊ ಪಾಠ: ಪಠ್ಯ ಬೋಧನೆಯ ಜತೆಗೆ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ, ರೇಡಿಯೊ ಪಾಠ, ಪ್ರಾಯೋಗಿಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ. ವಿಷಯವಾರು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಳಕ್ಕೆ ಕ್ರಮ ವಹಿಸಲಾಗಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಎ.ಟಿ.ಮಳ್ಳಳ್ಳಿ.

ದತ್ತು ಯೋಜನೆ: ಈ ಶಾಲೆಯ ಶಿಕ್ಷಕರು ತಲಾ ಪ್ರತಿ ವರ್ಷ 10ನೇ ತರಗತಿಯ 8 ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಾರೆ. ವಿವಿಧ ಚಟುವಟಿಕೆಗಳನ್ನು ರೂಪಿಸಿ ಮಕ್ಕಳು ಉತ್ತಮ ಫಲಿತಾಂಶ ಪಡೆಯುವಂತೆ ಸಿದ್ಧಗೊಳಿಸುತ್ತಾರೆ.

ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ
ಶಾಲೆಯ ವಿದ್ಯಾರ್ಥಿನಿಯರಾದ ಸುಮಾ ಕುಲಕರ್ಣಿ ಎರಡು ಬಾರಿ, ಗೀತಾ ಕಣಗಿನಹಾಳ ಒಂದು ಬಾರಿ ಅಡತಡೆ ಓಟದಲ್ಲಿ, ರಶ್ಮಿ ಸಂಗನಾಳಮಠ ಚಕ್ರ ಎಸೆತದಲ್ಲಿ, ಸುಜಾತ ಪಾಟೀಲ ಹಾಗೂ ನಿಲಮ್ಮ ಗಿರಡ್ಡಿ ಎತ್ತರ ಜಿಗಿತದಲ್ಲಿ ಎರಡು ಬಾರಿ, ರೋಹಿಣಿ ಹಿರೆವಡೆಯರ ಚೆಸ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಟ್ಯಾಪಟ್ಯಾದಲ್ಲಿ ವಿಶೇಷ ಸಾಧನೆ ಮಾಡಿರುವ ನೇತ್ರಾ ರೋಣದ, ಚೈತ್ರಾ ಬಂಡಿವಡ್ಡರ ಅಂತರಾಷ್ಟ್ರೀಯ ಕ್ರೀಡಾಪಟುಗಳಾಗಿದ್ದಾರೆ. ಶಾಲೆಯ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್‌, ಗೋವಾ, ಕೇರಳ, ರಾಜಸ್ತಾನದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಜಯಿಸಿದ್ದಾರೆ.

*
ಸಾಧನೆಗಳು ಸುಲಭವಾಗಿ ಆಗಿಲ್ಲ. ಅದರ ಹಿಂದೆ ಕಠಿಣ ಶ್ರಮವಿದೆ. ಇದಕ್ಕಾಗಿ ಶಿಕ್ಷಕರು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಹಾಗಾಗಿಯೆ ರಾಜ್ಯಮಟ್ಟದಲ್ಲಿ ಶಾಲೆ ಗಮನ ಸೆಳೆದಿದೆ
– ಅಭಿನವ ಅನ್ನದಾನ ಸ್ವಾಮೀಜಿ, ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ

*
ಶಿಕ್ಷಕರು ಪ್ರತಿ ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯ ಅರಿತು ಪಾಠ ಮಾಡುತ್ತಾರೆ. ಸಾಧನೆಯ ಸಂಕಲ್ಪವನ್ನು ನಮ್ಮ ಮನಸ್ಸಿನಲ್ಲಿ ಗಟ್ಟಿಗೊಳಿಸುತ್ತಾರೆ
– ಚೈತ್ರಾ ಗೌರಿ, ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ವಿದ್ಯಾರ್ಥಿನಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು