ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿದಂತೆ ನಡೆದ ಸರ್ಕಾರ ನಮ್ಮದು: ಸಿಎಂ ಸಿದ್ದರಾಮಯ್ಯ

Published 25 ಏಪ್ರಿಲ್ 2024, 15:32 IST
Last Updated 25 ಏಪ್ರಿಲ್ 2024, 15:32 IST
ಅಕ್ಷರ ಗಾತ್ರ

ಗಜೇಂದ್ರಗಡ: ‘ಚುನಾವಣೆ ಪೂರ್ವದಲ್ಲಿ ನೀಡಿದ್ದ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಪಂಚ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅನುಷ್ಟಾನಗೊಳಿಸಿ ನುಡಿದಂತೆ ನಡೆದಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ಗುರುವಾರ ಹಾವೇರಿ- ಗದಗ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದದೇವರಮಠ ಪರವಾಗಿ ಏರ್ಪಡಿಸಿದ್ದ ಬೃಹತ್ ಚುನಾವಣಾ ಸಭೆಯಲ್ಲಿ ಮಾತನಾಡಿದರು.

‘ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರು ಉಚಿತ ಬಸ್‌ ಪ್ರಯಾಣ ಮಾಡುತ್ತಿದ್ದಾರೆ. ಅವರಿಗೆಲ್ಲ ಟಿಕೆಟ್‌ ಹಣ ಉಳಿತಾಯವಾಗಿದೆ. ಅನ್ನಭಾಗ್ಯ ಯೋಜನೆ ಮೂಲಕ 5 ಕೆ.ಜಿ. ಅಕ್ಕಿಯ ಹಣವನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತಿದ್ದೇವೆ. ಗೃಹಲಕ್ಷ್ಮೀ ಯೋಜನೆ ಮೂಲಕ ಕಳೆದ 8 ತಿಂಗಳಿನಿಂದ ಮನೆ ಯಜಮಾನಿ ಖಾತೆಗೆ ಹಣ ಜಮೆ ಮಾಡುತ್ತಿದ್ದೇವೆ. ಗೃಹಜ್ಯೋತಿ ಯೋಜನೆಯಿಂದ ಉಚಿತ ವಿದ್ಯುತ್‌ ಎಲ್ಲರಿಗೂ ಸಿಗುತ್ತಿದೆ. ಯುವ ನಿಧಿ ಯೋಜನೆಯಿಂದ ನಿರುದ್ಯೋಗಿ ಯುವಕರಿಗೆ ಅನುಕೂಲವಾಗಿದೆ. ನಾವು ಎಲ್ಲ ಭರವಸೆಗಳನ್ನು ಈಡೇರಿಸಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ’ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಟಿಕೆಟ್ ಬೇರೆಯವರಿಗೆ ಮಾರಿದ ವ್ಯಕ್ತಿ ಇಂದು ಹಾವೇರಿ ಗದಗ ಲೋಕಸಭಾ ಚುನಾವಣೆಗೆ ನಿಂತಿದ್ದಾರೆ. ಅವರಿಗೆ ಸೋಲು ಖಚಿತ ಶಿರಹಟ್ಟಿ ಮತಕ್ಷೇತ್ರದಲ್ಲಿ 50 ಸಾವಿರ ಮತಗಳ ಲೀಡ್ ಕೊಡಿಸುವೆ.
ರಾಮಣ್ಣ ಲಮಾಣಿ, ಮಾಜಿ ಶಾಸಕ

‘ಮಹದಾಯಿ ಯೋಜನೆ ಅನುಷ್ಠಾನಗೊಳಿಸದಿದ್ದರೆ ರಕ್ತದಲ್ಲಿ ಪತ್ರ ಬರೆದು ಚಳವಳಿ ನಡೆಸುವುದಾಗಿ ಬೊಮ್ಮಾಯಿ ಹೇಳಿದ್ದರು. ಬಳಿಕ ಅವರು ಮುಖ್ಯಮಂತ್ರಿ ಕೂಡ ಆಗಿದ್ದರು. ಆದರೆ, ಕೇಂದ್ರ ಬಿಜೆಪಿ ಸರ್ಕಾರದಿಂದ ಮಹದಾಯಿ ಯೋಜನೆ ಅನುಷ್ಟಾನಕ್ಕೆ ಅನುಮತಿ ಕೊಡಿಸಲು ಆಗಲಿಲ್ಲ. ಮುಂದೆಯೂ ಅವರು ಕೊಡಿಸುವುದಿಲ್ಲ. ನಾವು ಟೆಂಡರ್‌ ಕರೆದಿದ್ದೇವೆ. ಕೇಂದ್ರ ಸರ್ಕಾರ ಪರಿಸರ ಇಲಾಖೆಯಿಂದ ಅನುಮತಿ ಕೊಟ್ಟರೇ ನಾಳೆಯೇ ಕೆಲಸ ಆರಂಭಿಸುತ್ತೇವೆ’ ಎಂದು ಘೋಷಿಸಿದರು.

‘ಬೊಮ್ಮಾಯಿ ಅವರು ಈ ಚುನಾವಣೆಯನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿದ್ದಾರೆ. 2 ವರ್ಷ ಮುಖ್ಯಮಂತ್ರಿಯಾಗಿದ್ದಾಗ ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ನೀವೇಲ್ಲ ರೋಣ ವಿಧಾನಸಭಾ ಕ್ಷೇತ್ರದಿಂದ 25 ಸಾವಿರ ಮತಗಳ ಲೀಡ್ ಕೊಡುವುದಾಗಿ ಶಾಸಕ ಜಿ.ಎಸ್.ಪಾಟೀಲ ಹೇಳಿದ್ದಾರೆ. ನೀವೂ ಒಪ್ಪಿದ್ದೀರಿ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿʼ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ‘ಗ್ಯಾರಂಟಿಗಳ ಕುರಿತು ಅಪಹಾಸ್ಯ ಮಾಡಿದ್ದ ಮೋದಿಯವರೆ ತಮ್ಮ ಹೆಸರಿನ ಮುಂದೆ ಗ್ಯಾರಂಟಿ ಅಂಟಿಸಿಕೊಂಡಿದ್ದೀರಿ. ನಾಚಿಕೆ ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಮಾಜಿ ಸಂಸದ ಆರ್.ಎಸ್.ಪಾಟೀಲ, ಮುಖಂಡರಾದ ಸಲೀಂ ಅಹಮ್ಮದ್, ಜಿ.ಎಸ್.ಗಡ್ಡದದೇವರಮಠ, ರಾಮಣ್ಣ ಲಮಾಣಿ, ಸಿದ್ದಪ್ಪ ಬಂಡಿ, ರುದ್ರಪ್ಪ ಲಮಾಣಿ, ಬಿ.ಆರ್.ಯವಾಗಲ್, ರಾಮಕೃಷ್ಣ ದೊಡ್ಡಮನಿ, ಆರ್.ಶಂಕರ, ಮಿಥುನ್‌ ಪಾಟೀಲ, ಡಿ.ಆರ್.ಪಾಟೀಲ, ರೂಪಾ ಅಂಗಡಿ, ಎಚ್.ಎಸ್.ಸೋಂಪುರ, ಚಂಬಣ್ಣ ಚವಡಿ, ಗೀತಾ ದೊಡ್ಡಮನಿ ಇದ್ದರು.

ವಿಷ ಬೀಜ ಬಿತ್ತುತ್ತಿರುವ ಬಿಜೆಪಿ– ಜಿಎಸ್‌ಪಿ ಕಿಡಿ

‘ದೇಶದಲ್ಲಿ ಕಳೆದ 75 ವರ್ಷಗಳಿಂದ ಎಲ್ಲರೂ ಒಂದಾಗಿ ಸಹೋದರತೆಯಿಂದ ಬದುಕು ನಡೆಸಿಕೊಂಡು ಬಂದಿದ್ದೇವೆ. ಆದರೆ ಬಿಜೆಪಿಯವರು ಎಲ್ಲರ ಮನಸ್ಸಿನಲ್ಲಿ ಜಾತಿ ಧರ್ಮದ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ’ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ ಹರಿಹಾಯ್ದರು. ‘ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಉತ್ತರ ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಮಾತು ಮಾತಿಗೆ ತಾಕತ್ತು ಧಮ್‌ ಇದೆ ಎನ್ನುತ್ತಿದ್ದ ಅವರನ್ನು ಜನರು ಮನೆಗೆ ಕಳಿಸುತ್ತಾರೆʼ ಎಂದರು. ‘ನೀರಾವರಿ ಯೋಜನೆಗಳನ್ನು ಬರೀ ಯಲಬುರ್ಗಾ ಕೊಪ್ಪಳಕ್ಕೆ ತೆಗೆದುಕೊಂಡು ಹೋಗಬೇಡಿ. ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಲು ಕೆರೆ ತುಂಬಿಸುವ ಕೆಲಸ ಮಾಡಬೇಕುʼ ಎಂದು ವೇದಿಕೆ ಮೇಲಿದ್ದ ಬಸವರಾಜ ರಾಯರಡ್ಡಿ ಅವರಿಗೆ ಹೇಳಿದರು.

‘ಕೊಟ್ಟ ಭರವಸೆ ಈಡೇರಿಸಿದ್ದೀರಾ ಎಂದು ಮೋದಿಗೆ ಪ್ರಶ್ನಿಸಿ’

‘ಹತ್ತು ವರ್ಷಗಳಿಂದ ನರೇಂದ್ರ ಮೋದಿ ಪ್ರಧಾನಿ ಆಗಿದ್ದಾರೆ. ಮತ್ತೊಮ್ಮೆ ಪ್ರಧಾನಿ ಆಗುವ ಬಯಕೆಯಿಂದ ಮತ ಕೇಳಲು ಜನರ ಮುಂದೆ ಬರುತ್ತಿದ್ದಾರೆ. ಅವರು ನಿಮ್ಮ ಬಳಿ ಬಂದಾಗ 10 ವರ್ಷಗಳಲ್ಲಿ ನೀವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೀರಾ ಎಂದು ಪ್ರಶ್ನಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಗೆ ಕರೆ ನೀಡಿದರು.

‘ವಿದೇಶದಲ್ಲಿ ಸಾಕಷ್ಟು ಕಪ್ಪುಹಣವಿದ್ದು ಅದನ್ನು ತೆಗೆದುಕೊಂಡು ಬಂದು ಪ್ರತಿಯೊಬ್ಬರ ಅಕೌಂಟ್‌ಗೆ ₹15 ಲಕ್ಷ ಹಾಕುವುದಾಗಿ ಮೋದಿ ಹೇಳಿದ್ದರು. ಪ್ರತಿವರ್ಷ ಎರಡು ಲಕ್ಷ ಉದ್ಯೋಗ ಸೃಷ್ಟಿ ರೈತರ ಆದಾಯ ದುಪ್ಪಟ್ಟು ಅಗತ್ಯ ವಸ್ತುಗಳ ಬೆಲೆ ಇಳಿಕೆ ಡಾಲರ್‌ ಎದುರು ರೂಪಾಯಿ ಮೌಲ್ಯ ಹೆಚ್ಚಳ ಹೀಗೆ ಅನೇಕ ಭರವಸೆಗಳನ್ನು ನೀಡಿದ್ದ ಮೋದಿ ಯಾವುದನ್ನೂ ಈಡೇರಿಸಲಿಲ್ಲ. ಈಗ ಮತ್ತೇ ಸುಳ್ಳುಗಳನ್ನು ಹೇಳುತ್ತಿರುವ ಮೋದಿಗೆ ವೋಟ್‌ ಕೊಡುತ್ತೀರಾ’ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚ ಗ್ಯಾರಂಟಿ ಮೂಲಕ ರಾಜ್ಯದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿದ್ದಾರೆ. ನಿಮ್ಮ ಈ ಕಾರ್ಯ ನೋಡಿ ನರೇಂದ್ರ ಮೋದಿ ನೆಲ ನಡುಗುತ್ತಿದೆ.
ಎಚ್‌.ಕೆ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

‘ಕೇಂದ್ರ ಸರ್ಕಾರ ರಾಜ್ಯ ಬರಬೇಕಾದ ತೆರಿಗೆ ಪಾಲಿನಲ್ಲಿ ಅನ್ಯಾಯ ಮಾಡಿತು. ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ನಯಾಪೈಸೆ ಬಿಡುಗಡೆ ಮಾಡಲಿಲ್ಲ. ನಮ್ಮ ನ್ಯಾಯಯುತ ಹಣ ಪಡೆಯಲು ಸುಪ್ರೀಂ ಕೋರ್ಟ್‌ ಕದ ತಟ್ಟಬೇಕಾಯಿತು. ಒಂದು ವೇಳೆ ನಾವು ನ್ಯಾಯಾಲಯಕ್ಕೆ ಹೋಗದಿದ್ದರೆ ಕೇಂದ್ರ ಸರ್ಕಾರದವರು ನಮ್ಮನ್ನು ಕ್ಯಾರೇ ಎನ್ನುತ್ತಿರಲಿಲ್ಲ. ರಾಜ್ಯದಲ್ಲಿ ಸಂಪನ್ಮೂಲ ಕ್ರೋಡೀಕರಿಸಿ ಬರ ಪರಿಸ್ಥಿತಿ ನಿಭಾಯಿಸಿದ್ದೇವೆ. 24 ಲಕ್ಷ ಮಂದಿ ರೈತರಿಗೆ ₹2 ಸಾವಿರದಂತೆ ₹640 ಕೋಟಿ ಕೊಟ್ಟಿದ್ದೇವೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನಮ್ಮ ಮೇಲೆ ಕೆಂಗೆಣ್ಣು ಬೀರಿದೆ. ಪ್ರಧಾನಿ ಮೋದಿ ಅವರಿಗೆ ಚುನಾವಣೆಗಳು ಬಂದಾಗ ಮಾತ್ರ ಕರ್ನಾಟಕ ನೆನಪಾಗುತ್ತದೆ. ನಮ್ಮ ರಾಜ್ಯವನ್ನು ಕಡಗಣಿಸಿದ ಪಕ್ಷಕ್ಕೆ ಯಾವುದೇ ಕಾರಣಕ್ಕೂ ವೋಟು ಹಾಕಬೇಡಿ’ ಎಂದು ಮನವಿ ಮಾಡಿದರು.

ಗಜೇಂದ್ರಗಡದ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ನಡೆದ ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದದೇವರಮಠ ಅವರ ಪರವಾಗಿ ಏರ್ಪಡಿಸಿದ್ದ ಬೃಹತ್ ಚುನಾವಣಾ ಸಭೆಯಲ್ಲಿ ನೆರೆದಿದ್ದ ಜನರು

ಗಜೇಂದ್ರಗಡದ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ನಡೆದ ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದದೇವರಮಠ ಅವರ ಪರವಾಗಿ ಏರ್ಪಡಿಸಿದ್ದ ಬೃಹತ್ ಚುನಾವಣಾ ಸಭೆಯಲ್ಲಿ ನೆರೆದಿದ್ದ ಜನರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT