ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ಖರೀದಿ ಕೇಂದ್ರ ತೆರೆಯಲು ಆಗ್ರಹ

ರೈತರ ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ಹೋರಾಟ– ಸೊಬರದಮಠ ಎಚ್ಚರಿಕೆ
Last Updated 3 ಸೆಪ್ಟೆಂಬರ್ 2021, 4:25 IST
ಅಕ್ಷರ ಗಾತ್ರ

ಗದಗ: ‘ಸರ್ಕಾರ ಮುಂದಿನ 15 ದಿನಗಳಲ್ಲಿ ಶಾಶ್ವತ ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸದಿದ್ದರೆ ರಾಜ್ಯದಾದ್ಯಂತ ಹೋರಾಟ ಆರಂಭಿಸಲಾಗುವುದು’ ಎಂದು ರೈತ ಸೇನಾ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಎಚ್ಚರಿಸಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ರೈತರು ಬೆಳೆಯುವ ಎಲ್ಲ ಬೆಳೆಗಳಿಗೂ ಉತ್ತಮ ಬೆಲೆ ದೊರಕಿಸಿಕೊಡಲು ಅನುಕೂಲವಾಗುವಂತೆ ವರ್ಷಪೂರ್ತಿ ಕಾರ್ಯಾಚರಿಸುವ ಶಾಶ್ವತ ಖರೀದಿ ಕೇಂದ್ರಗಳನ್ನು ಸರ್ಕಾರ ಸ್ಥಾಪಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಸರ್ಕಾರ ಪ್ರತಿವರ್ಷವೂ ಶೇ 95ರಷ್ಟು ರೈತರು ತಮ್ಮ ಫಸಲನ್ನೆಲ್ಲ ಮಾರಾಟ ಮಾಡಿದ ಬಳಿಕ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆಯುತ್ತಿದೆ. ಇದರಿಂದಾಗಿ ರೈತರಿಗೆ ಅನುಕೂಲ ಆಗುತ್ತಿಲ್ಲ. ಸರ್ಕಾರ ಈ ವರ್ಷ ಹೆಸರು ಬೆಳೆಗೆ ₹7,270 ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ, ಈಗಲೂ ಎಪಿಎಂಸಿಯಲ್ಲಿ ₹6,000ಕ್ಕೆ ಖರೀದಿ ಮಾಡಲಾಗುತ್ತಿದೆ. ಇದರಿಂದಾಗಿ ರೈತರಿಗೆ ಪ್ರತಿ ಕ್ವಿಂಟಲ್‍ಗೆ ₹1 ಸಾವಿರದಿಂದ ₹1,200ರವರೆಗೆ ಹಾನಿಯಾಗುತ್ತಿದೆ. ಇದರ ಹಿಂದೆ ಅಧಿಕಾರಿಗಳು, ರಾಜಕಾರಣಿಗಳು ಶಾಮೀಲಾಗಿದ್ದು, ರೈತರಿಗೆ ದೊಡ್ಡ ಮಟ್ಟದಲ್ಲಿ ಮೋಸ ಆಗುತ್ತಿದೆ’ ಎಂದು ಆರೋಪಿಸಿದರು.

‘ದಲ್ಲಾಳಿಗಳು ರೈತರಿಂದ ಖರೀದಿಸಿದ ಹೆಸರನ್ನೇ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ರೈತರ ಹೆಸರಿನಲ್ಲಿ ಮಾರಾಟ ಮಾಡಿ, ಲಾಭ ಗಳಿಸುತ್ತಾರೆ. ಸಣ್ಣ ಅಂಗಡಿಯಲ್ಲಿ ಒಂದು ಟೇಬಲ್, ಒಂದು ಪುಸ್ತಕ ಇಟ್ಟುಕೊಂಡು ವಹಿವಾಟು ನಡೆಸುವ ದಲ್ಲಾಳಿ ಫಸಲಿನ ಋತುವಿನಲ್ಲಿ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಳ್ಳುತ್ತಾನೆ. ಆದರೆ, ರೈತ ಮಾತ್ರ ಅದೇ ದಲ್ಲಾಳಿ ಬಳಿ ಸಾಲ ಪಡೆದು, ಸಾಲಗಾರನಾಗುತ್ತಿದ್ದಾನೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಆ.31ರಂದು ರಾಜ್ಯಪಾಲರನ್ನು ಭೇಟಿ ಮಾಡಿ, ಮಹದಾಯಿ ಸಮಸ್ಯೆಗಳನ್ನು ಬಗೆಹರಿಸಲು ಮಧ್ಯಪ್ರವೇಶಿಸುವಂತೆ ಕೋರಿದ್ದೇವೆ. ಅದೇರೀತಿ, ಮಹದಾಯಿ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ 11 ಮಂದಿಯಲ್ಲಿ ಎಲ್ಲರಿಗೂ ಪರಿಹಾರ ಸಿಕ್ಕಿಲ್ಲ. ಅವರನ್ನೇ ಅವಲಂಬಿಸಿದ್ದ ಕುಟುಂಬಕ್ಕೆ ತಕ್ಷಣವೇ ಪರಿಹಾರ ಒದಗಿಸಿಕೊಡಲು ನೆರವಾಗುವಂತೆ ರಾಜ್ಯಪಾಲರನ್ನು ಒತ್ತಾಯಿಸಿದ್ದೇವೆ’ ಎಂದು ಹೇಳಿದ ಅವರು, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಆದ್ದರಿಂದ ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಕೋರಲಾಗಿದೆ’ ಎಂದು ಹೇಳಿದರು.

‘ಈಗ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಂದೆ ನೀರಾವರಿ ಮಂತ್ರಿಗಳಾಗಿದ್ದರು. ಮೇಲಾಗಿ ಕಳಸಾ–ಬಂಡೂರಿ, ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅವರಾದರೂ ಈ ಬಗ್ಗೆ ವಿಶೇಷ ಗಮನ ಹರಿಸಿ, ರಾಜ್ಯಕ್ಕೆ ಹಂಚಿಕೆಯಾಗಿರುವ ಕುಡಿಯುವ ನೀರಿನ ಬಳಕೆ ಬಗ್ಗೆ ಕಾಮಗಾರಿ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ರೈತ ಸೇನಾ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಪಿ. ಜೋಗಣ್ಣವರ, ರೋಣ ತಾಲ್ಲೂಕು ಅಧ್ಯಕ್ಷ ಮುತ್ತಣ್ಣ ಕುರಿ ಇದ್ದರು.

ಶೇ 75ರಷ್ಟು ಕಾಮಗಾರಿ ಕಳಪೆ: ಆರೋಪ

‘ಮಲಪ್ರಭಾ ಬಲದಂಡೆ ಕಾಲುವೆ ಯೋಜನೆ ವ್ಯಾಪ್ತಿಯಲ್ಲಿ ಕಟ್ಟಕಡೆಯ ರೈತನ ಜಮೀನಿಗೂ ನೀರು ಸಿಗುವಂತಾಗಲು ಸರ್ಕಾರ ಕಾಲುವೆಗಳ ಕಾಂಕ್ರೀಟಿಕರಣಕ್ಕೆ ₹1,900 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದು, ಕಾಮಗಾರಿ ನಡೆಸುತ್ತಿದೆ. ಇದರಲ್ಲೂ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ. ಶೇ 75ರಷ್ಟು ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT