ಬುಧವಾರ, ಜನವರಿ 22, 2020
18 °C
ಪ್ರಜಾವಾಣಿ ಫೋನ್‌–ಇನ್‌ ಕಾರ್ಯಕ್ರಮ

ಭಯ ಬಿಟ್ಟಾಕಿ; ಡಿಸೆಂಬರ್‌ ನಂತರ ಸ್ಮಾರ್ಟ್‌ ವರ್ಕ್‌ ಮಾಡಿ :ಡಿಡಿಪಿಐ ನಾಗೂರ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ:‘ಕೇವಲ ಅಂಕ ಗಳಿಕೆಯಷ್ಟೇ ಗೆಲುವಿನ ಸೂಚ್ಯಂಕವಲ್ಲ. ಜ್ಞಾನ ಗಳಿಸಲು ಓದಿರಿ. ಒಂದೇ ದಿನ ಎಲ್ಲ ವಿಷಯಗಳನ್ನೂ ಓದಿ ಮುಗಿಸಬೇಕಂತಿಲ್ಲ. ನಿಮಗೆ ಇಷ್ಟವಿರುವ ಮತ್ತು ಕಷ್ಟವಿರುವ ವಿಷಯಗಳನ್ನು ಪಟ್ಟಿ ಮಾಡಿಕೊಂಡು, ಸರಿಯಾದ ಯೋಜನೆ ಹಾಕಿಕೊಂಡು ಓದಿ. ನೆನಪಿಡಿ, ಇಷ್ಟು ದಿನ ಹಾರ್ಡ್‌ವರ್ಕ್‌ ಮಾಡಿದ್ದೀರಿ, ಡಿಸೆಂಬರ್‌ ನಂತರ ಸ್ಮಾರ್ಟ್‌ ವರ್ಕ್ಸ್‌ ಮಾಡಿ. ಭಯ ಬಿಟ್ಟಾಕಿ, ಯಶಸ್ಸು ನಿಮ್ಮ ಕೈಯಲ್ಲೇ ಇದೆ’

ಇದು ಗದಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್‌.ಎಚ್‌ ನಾಗೂರ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನೀಡಿದ ಸಲಹೆ.

ಸೋಮವಾರ ಗದುಗಿನಲ್ಲಿ ನಡೆದ ಪ್ರಜಾವಾಣಿ ‘ಫೋನ್‌–ಇನ್’ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳಿಂದ ಕೇಳಿಬಂದ ಎಲ್ಲ ಪ್ರಶ್ನೆಗಳಿಗೆ ತಾಳ್ಮೆಯಿಂದ ಮತ್ತು ಪ್ರೀತಿಯಿಂದ ಉತ್ತರಿಸಿ, ಆಪ್ತ ಸಮಾಲೋಚಕರಂತೆ ಮಕ್ಕಳ ಎಲ್ಲ ಸಮಸ್ಯೆ, ಗೊಂದಲಗಳನ್ನು ಪರಿಹರಿಸಿದರು.

ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು? ಯಾವ ಸಮಯದಲ್ಲಿ ಓದಿಕೊಂಡರೆ ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ? 625ಕ್ಕೆ 625 ಅಂಕ ಪಡೆಯುವುದು ಹೇಗೆ? 5 ಅಂಕಗಳಿಗೆ ಈ ಬಾರಿ ಯಾವ ಪ್ರಶ್ನೆ ಕೇಳುತ್ತಾರೆ? ಚೆನ್ನಾಗಿ ಓದಿಕೊಂಡರೂ ಎಲ್ಲವೂ ಮರೆತು ಹೋಗುತ್ತಿದೆ ಇದಕ್ಕೆ ಏನು ಮಾಡಬೇಕು? ಹೀಗೆ ವಿದ್ಯಾರ್ಥಿಗಳಿಂದ ತೂರಿಬಂದ ಹಲವು ಪ್ರಶ್ನೆಗಳಿಗೆ ಅವರು ಸಮಾಧಾನವಾಗಿಯೇ ಉತ್ತರಿಸಿದರು. ಪರೀಕ್ಷಾ ಭಯವನ್ನು ವಿದ್ಯಾರ್ಥಿಗಳ ತಲೆಯಿಂದ ತೆಗೆದುಹಾಕಿ, ಕಲಿಕೆ ಎಂದರೆ ಸಹಜ, ಸುಂದರ ಪ್ರಕ್ರಿಯೆ ಎನ್ನುವುದನ್ನು ಮನದಟ್ಟು ಮಾಡಿಸಿದರು.

‘ಸರ್‌ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಒಂದೇ ಸಮನೆ ಶಾಲೆ, ಹೋಂ ವರ್ಕ್‌ ಅಂತ ಅಧ್ಯಯನ ಮಾಡುತ್ತಲೇ ಇರುತ್ತೇವೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಇನ್ನೆಷ್ಟು ಗಂಟೆ ಓದಬೇಕು’ ಎಂದು ಗಜೇಂದ್ರಡ ತಾಲ್ಲೂಕಿನ ವಿದ್ಯಾರ್ಥಿನಿಯೊಬ್ಬಳು ತೀವ್ರ ಚಡಪಡಿಕೆ ವ್ಯಕ್ತಪಡಿಸಿದರು. ಇದಕ್ಕೆ ಡಿಡಿಪಿಐ ಅವರ ಉತ್ತರ ಹೀಗಿತ್ತು. ‘ನೋಡು ಮಗು, ಗಾಬರಿಪಟ್ಟುಕೊಳ್ಳಬೇಡ. ನಿನ್ನ ವಯಸ್ಸಿಗೆ ಈಗ ನೀನು ಓದುತ್ತಿರುವ ಸಮಯವೇ ಹೆಚ್ಚು. ನಿದ್ರೆಗೆಟ್ಟು ಓದಿ ಆರೋಗ್ಯ ಹಾಳುಮಾಡಿಕೊಳ್ಳಬೇಡ, ಆರೋಗ್ಯದ ಕಡೆಗೆ ಗಮನಕೊಡು. ತರಗತಿಯಲ್ಲಿ ಗುರುಗಳು ಹೇಳಿದ್ದನ್ನು ಅಭ್ಯಾಸ ಮಾಡು. ಬರೆದು ಓದುವುದನ್ನು ಅಭ್ಯಾಸ ಮಾಡಿಕೋ, ಕಲಿತಿದ್ದನ್ನು ಸ್ಮರಣೆ ಮಾಡು’ ಎಂದು ಆತಂಕ ದೂರಮಾಡಿದರು.

ಒಂದು ಗಂಟೆ ನಡೆದ ಫೋನ್‌–ಇನ್‌ನಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 150ಕ್ಕೂ ಹೆಚ್ಚು ಕರೆಗಳು ಬಂದವು. ವಿದ್ಯಾರ್ಥಿಗಳು ಮಾತ್ರವಲ್ಲ, ಶಿಕ್ಷಕರು, ಪಾಲಕರು ಸಹಿತ ಕರೆ ಮಾಡಿ ಗೊಂದಲಗಳನ್ನು ಪರಿಹರಿಸಿಕೊಂಡರು. 40 ಕರೆಗಳನ್ನು ಸ್ವೀಕರಿಸಿದ ನಾಗೂರ ಅವರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಮಾತುಗಳನ್ನು ಆಡಿದರು.

ವಿದ್ಯಾರ್ಥಿಗಳಿಂದ ಕೇಳಿಬಂದ ಪ್ರಶ್ನೆಗಳು ಹಾಗೂ ಉಪನಿರ್ದೇಶಕರ ಉತ್ತರ

*ಸಂಗಮೇಶ ವಸ್ತ್ರದ ನರೇಗಲ್‌: ವಿಜ್ಞಾನ ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ?
ಸೂತ್ರಗಳನ್ನು ಪಟ್ಟಿ ಮಾಡಿ, ಓದುವ ಕೊಠಡಿಯ ಗೊಡೆಯ ಮೇಲೆ ಅಂಟಿಸಿ, ಮೇಲಿಂದ ಮೇಲೆ ಸೂತ್ರಗಳನ್ನು ಓದಿ, ಬರೆದು ಅಧ್ಯಯನ ಮಾಡಿ. ಸೂತ್ರ ಆಧರಿಸಿ ಹಲವು ಪ್ರಶ್ನೆಗಳಿಗೆ ಉತ್ತರ ಬಿಡಿಸಬೇಕು. ಆಗ ಮಾತ್ರ ಸೂತ್ರಗಳು ನೆನಪಿನಲ್ಲಿ ಉಳಿಯುತ್ತವೆ.

*ಫಕ್ಕೀರೇಶ, ಎಕ್ಸಲೆಂಟ್‌ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆ; 5 ಅಂಕದ ಯಾವ ಪ್ರಶ್ನೆಗಳು ಬರುತ್ತವೆ?
ಯಾವ ಪ್ರಶ್ನೆಗಳು ಬರುತ್ತವೆ ಎನ್ನುವುದನ್ನು ಹೇಳಲು ಆಗುವುದಿಲ್ಲ. ವಿಜ್ಞಾನ ವಿಷಯದ ಎಲ್ಲ ಅಧ್ಯಾಯಗಳನ್ನು ಓದಬೇಕು. ಫೆ. 17ರಂದು ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದ್ದು, 5 ಅಂಕಗಳ ಪ್ರಶ್ನೆಗಳ ಮಾದರಿಯನ್ನು ಗಮನಿಸಬಹುದು.

*ದೇವರಾಜ ಗದಗ: ಗಣಿತದಲ್ಲಿ ತ್ರಿಭುಜ ವಿಷಯಕ್ಕೆ ಸಂಬಂಧಿಸಿದಂತೆ 4 ಅಂಕದ ಪ್ರಶ್ನೆ ಬರಬಹುದೇ?
ತ್ರಿಭುಜ, ಪ್ರಮೇಯ ಸೇರಿ ಒಟ್ಟು 7 ಅಂಕದ ಪ್ರಶ್ನೆಗಳು ಬರುವ ಸಾಧ್ಯತೆ ಇರುತ್ತದೆ. ವಿಸ್ತೀರ್ಣಗಳು, ಘನಫಲಗಳು, ಶಂಖುವಿನ ಭಿನ್ನಕಗಳ ಮೇಲೆ ಪ್ರಶ್ನೆಗಳು ಇರುತ್ತವೆ. ಒಟ್ಟು ಪ್ರಮೇಯಗಳನ್ನು ಅಧ್ಯಯನ ಮಾಡಿಕೊಂಡು ಪ್ರತಿನಿತ್ಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು.

*ಮುಖ್ಯಶಿಕ್ಷಕ, ಜಕ್ಕಲಿ ಸರ್ಕಾರಿ ಶಾಲೆ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಸಲಹೆಗಳು ಏನು?
ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ 4222 ಮಕ್ಕಳನ್ನು ಗುರುತಿಸಲಾಗಿದೆ. ಇವರಿಗೆ ಮಧ್ಯಾಹ್ನ 3:30ರಿಂದ 5:30ರ ವರೆಗೆ ಕಡ್ಡಾಯವಾಗಿ ತರಗತಿ ನಡೆಸಲು ಸೂಚಿಸಲಾಗಿದೆ. ಈ ಮಕ್ಕಳಿಗೆ ಬರವಣಿಗೆ, ಲೆಕ್ಕ ಮಾಡಿಸುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು, ಕನಿಷ್ಠ ಅಂಕಗಳನ್ನು ಪಡೆದು ತೇರ್ಗಡೆಯಾಗಲು ವಿಶೇಷ ಕಾಳಜಿ ವಹಿಸಬೇಕು.

*ಪ್ರಶಾಂತ ಗಳಪೂಜಿಮಠ ಹಾಲಕೇರಿ: ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಗಣಿತ ವಿಷಯವನ್ನು ಸರಳವಾಗಿ ಕಲಿಸುವ ವಿಧಾನಗಳೇನು?
ಶಾಲೆಯಲ್ಲಿ ನಿಮ್ಮ ಗುರುಗಳು ಈಗಾಗಲೇ ಗಣಿತವನ್ನು ಸರಳವಾಗಿ, ಪ್ರೀತಿಯಿಂದ ಕಲಿಸಿರುತ್ತಾರೆ. ಈಗ ಅದನ್ನು ಅಧ್ಯಯನ ಮಾಡುವ ಸರದಿ ನಿನ್ನದು. ಈ ಬಾರಿ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆಯ ಬ್ಲೂಪ್ರಿಂಟ್‌ ಪ್ರಕಟಗೊಂಡಿಲ್ಲ. ಹೀಗಾಗಿ ಸಮಗ್ರ ಪುಸ್ತಕ ಅಧ್ಯಯನ ಮಾಡಬೇಕು.

*ಪೂರ್ಣಿಮಾ, ಗಜೇಂದ್ರಗಡ ಸರ್ಕಾರಿ ಬಾಲಕಿಯರ ಪ್ರೌಢಶಾಲೆ: 625ಕ್ಕೆ 625 ಅಂಕ ಪಡೆಯುವುದು ಹೇಗೆ?
ಇದು ತುಂಬಾ ಸರಳ. ಮೊದಲು ತಂದೆ ತಾಯಿ, ಗುರುಗಳ ಒತ್ತಾಯಕ್ಕೆ ಓದುವನ್ನು ಬಿಡಬೇಕು. ನಿಮ್ಮ ಓದು ನಿಮಗಾಗಿ ಇರಬೇಕು. ನೀವು ನಿಮಗಾಗಿ ಓದುತ್ತಿದ್ದರೆ 625ಕ್ಕೆ 625 ಅಂಕ ಗಳಿಸಬಹುದು. ಪರೀಕ್ಷೆ ಮುನ್ನ ಪ್ರತಿ ವಿಷಯವನ್ನೂ 10ರಿಂದ 20 ಬಾರಿ ಸಮಗ್ರವಾಗಿ ಓದಬೇಕು. ಎಲ್ಲ ಅನುಮಾನಗಳನ್ನು ಪರಿಹರಿಸಿಕೊಂಡಿರಬೇಕು.

*ಸೀಮಾ ಕೊಪ್ಪಳ, ಕೋಟುಮಚಗಿ, ಅನ್ನಪೂರ್ಣ ಗದಗ: ಗಣಿತ ಯಾಕೆ ಕಬ್ಬಿಣದ ಕಡಲೆಯಾಗಿದೆ?
ಗಣಿತ ವಿಷಯವನ್ನು ಬಹಳಷ್ಟು ಮಕ್ಕಳು ಕಬ್ಬಿಣದ ಕಡಲೆ ಎಂದು ತಿಳಿದುಕೊಂಡಿದ್ದಾರೆ. ಇದು ತಪ್ಪು. ಗಣಿತ ವಿಷಯದಲ್ಲಿನ ಲೆಕ್ಕಗಳನ್ನು ಪದೇ ಪದೆ ಬಿಡಿಸಬೇಕು. ಕಾಟಾಚಾರಕ್ಕೆ ವಿಷಯಗಳನ್ನು ಅಧ್ಯಯನ ಮಾಡಬಾರದು. ಮನಸ್ಸಿಟ್ಟು ಎರಡರಿಂದ ಮೂರು ಬಾರಿ ಓದಿಕೊಂಡು ಅಭ್ಯಾಸ ಮಾಡಬೇಕು. ತಿಳಿಯದ ವಿಷಯಗಳನ್ನು ಗುರುಗಳಿಂದ, ಸ್ನೇಹಿತರಿಂದ ಕೇಳಿ ತಿಳಿದುಕೊಳ್ಳಬೇಕು. ಓದಿ ಬರೆದು, ಅಭ್ಯಾಸ ಮಾಡಿಕೊಳ್ಳಬೇಕು.

*ಶರಣು ತೋಂಟದಾರ್ಯ ಶಾಲೆ ಗದಗ: ಸಮಾಜದ ವಿಜ್ಞಾದಲ್ಲಿ ಇಸವಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ?
ಸಮಾಜ ವಿಜ್ಞಾನದಲ್ಲಿ ಅರಸು ಮನೆತನದ ಇಸವಿಗಳು ಕಾಲಾನುಕ್ರಮದಲ್ಲಿರುತ್ತವೆ. ಇವುಗಳನ್ನು ಕಾಲಾನುಕ್ರಮದಲ್ಲಿ ಬರೆದುಕೊಂಡು, ಓದಿಕೊಂಡು ನೆನಪಿನಲ್ಲಿಟ್ಟುಕೊಳ್ಳಬಹುದು.

*ಅಮೋಘ: ಹಿಂದಿ ಕಲಿಕೆ ಕಷ್ಟವಾಗಿದ್ದು, ಸರಳ ಮಾಡಿಕೊಳ್ಳುವುದು ಹೇಗೆ?
ಮೊದಲು ತಲೆಯಿಂದ ಕಷ್ಟ ಎನ್ನುವುದನ್ನು ತೆಗೆದುಹಾಕಬೇಕು. ಹಿಂದಿ ಶಬ್ದಗಳ ಅರ್ಥ, ಉಚ್ಛಾರವನ್ನು ತಿಳಿದುಕೊಳ್ಳಬೇಕು. ವ್ಯಾಕರಣ ತಿಳಿದುಕೊಂಡು, ನಿಮ್ಮದೇ ಆದ ಭಾಷೆಯಲ್ಲಿ ಸಾದಾ ವಾಕ್ಯಗಳೊಂದಿಗೆ ಮಾತನಾಡಲು ಪ್ರಯತ್ನ ಮಾಡಬೇಕು ಎಂದು ಹಿಂದಿಯಲ್ಲೇ ಉದಾರಹಣೆ ನೀಡಿದರು.

*ಲಕ್ಷ್ಮಿ ರೇವಣಕರ್ ಗದಗ: ಪರೀಕ್ಷೆ ಮಾದರಿ ಬದಲಾಗಿದೆ ಅನ್ನುತ್ತಿದ್ದಾರೆ, ಪರೀಕ್ಷೆಗೆ ಸಮಯವೂ ಕಡಿಮೆ ಇದೆ, ಆತಂಕ ಕಾಡುತ್ತಿದೆ
ಪರೀಕ್ಷಾ ಮಾದರಿ ಬದಲಾಗಿಲ್ಲ. ಪರೀಕ್ಷೆಗೆ ಭಯ ಪಡುವ ಅಗತ್ಯವೂ ಇಲ್ಲ. ಹಾಗೆ ನೋಡಿದರೆ ಈ ವರ್ಷ ಬೋನಸ್‌ ಅಂಕಗಳನ್ನು ನೀಡಲಾಗುತ್ತಿದೆ. 4 ಅಂಕದ ಪ್ರಶ್ನೆಗಳಿಗೆ 5 ಅಂಕ ನೀಡಲಾಗುತ್ತಿದೆ. ಕಠಿಣ ವಿಷಯಗಳನ್ನು ಹೆಚ್ಚು ಅಭ್ಯಾಸ ಮಾಡಿ, ಪರೀಕ್ಷೆಗೆ ಸಿದ್ಧರಾಗಬೇಕು.

*ಸುಷ್ಮಾ ಪಾಟೀಲ ಮುಂಡರಗಿ: ಪಠ್ಯದ ಹೊರತಾಗಿ ಪ್ರಶ್ನೆಪತ್ರಿಕೆಯಲ್ಲಿ ಯಾವ ಪ್ರಶ್ನೆ ಇರುತ್ತದೆ?
ಪಠ್ಯದ ಹೊರತು ಬೇರೆ ಏನನ್ನೂ ಕೇಳುವುದಿಲ್ಲ. ಹೀಗಾಗಿ ಪಠ್ಯಪುಸ್ತಕವನ್ನು ಹತ್ತಾರು ಬಾರಿ ಸಮಗ್ರವಾಗಿ ಅಧ್ಯಯನ ಮಾಡಬೇಕು. ಹೀಗೆ ಮಾಡುವವರು 100ಕ್ಕೆ 100 ಅಂಕ ಗಳಿಸುತ್ತಾರೆ.

*ಉಮೇಶ ಕಲ್ಮಠ ಹೊಳೆಆಲೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂದರೆ ಭಯವಾಗುತ್ತದೆ
ಆತ್ಮವಿಶ್ವಾಸವಿಲ್ಲದಿದ್ದರೆ ಭಯವಾಗುತ್ತದೆ. ಗುರುಗಳು ಹೇಳಿದ ಪಾಠವನ್ನು ಸರಿಯಾಗಿ ಅರ್ಥಮಾಡಿಕೊಂಡು, ಜಾಣರಾಗುವ ಬಯಕೆ ಇಲ್ಲದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಭಯ ಇರುತ್ತದೆ. ಪರೀಕ್ಷೆಯನ್ನು ಯುದ್ಧ ಎಂದು ಭಾವಿಸದೇ, ಇದೊಂದು ಪ್ರವಾಸ, ಆಟದ ಮೈದಾನ ಎಂದುಕೊಂಡು ಪರೀಕ್ಷೆಗೆ ಹಾಜರಾಗಬೇಕು. ಅಂದಾಗ ಓದಿದ ವಿಷಯಗಳು ಪರೀಕ್ಷೆಯಲ್ಲಿ ನೆನಪಿಗೆ ಬರುತ್ತದೆ.

*ಮೇಘಾ ಯಲವಗಿ ಅಬ್ಬಿಗೇರಿ: ಇಂಗ್ಲಿಷ್‌ ಪರೀಕ್ಷೆಯ ಅವಧಿಯನ್ನು 3ಗಂಟೆಗೆ ಹೆಚ್ಚಿಸಿರುವುದು ಏಕೆ?
ಇಂಗ್ಲಿಷ್‌ ವಿಷಯವನ್ನು ಬರೆಯಲು ಹೆಚ್ಚಿನ ಸಮಯ ಬೇಕು ಎಂದು ಹಲವು ವಿದ್ಯಾರ್ಥಿಗಳು ಸಚಿವರಿಗೆ ಮನವಿ ಮಾಡಿದ್ದರಿಂದ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪರೀಕ್ಷಾ ಅವಧಿಯನ್ನು ಹೆಚ್ಚಿಸಲಾಗಿದೆ.

ಫೋನ್‌ ಇನ್‌ ನಿರ್ವಹಣೆ: ಜೋಮನ್‌ ವರ್ಗೀಸ್‌, ಅರುಣಕುಮಾರ ಹಿರೇಮಠ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು