ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಹೆರಿಗೆ ಆಸ್ಪತ್ರೆ ಸ್ಥಳಾಂತರ ವಿರೋಧ

ಜಯ ಕರ್ನಾಟಕ ಸಂಘಟನೆ ಸದಸ್ಯರಿಂದ ಪ್ರತಿಭಟನೆ
Last Updated 20 ಮೇ 2022, 5:14 IST
ಅಕ್ಷರ ಗಾತ್ರ

ಗದಗ: ನಗರದ ಹೃದಯ ಭಾಗದಲ್ಲಿದ್ದ ದಂಡಪ್ಪ ಮಾನ್ವಿ ಹೆರಿಗೆ ಆಸ್ಪತ್ರೆಯನ್ನು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸ್ಥಳಾಂತರಿಸುವುದನ್ನು ವಿರೋಧಿಸಿ ಜಯ ಕರ್ನಾಟಕ ಸಂಘಟನೆ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

‘ಜಿಲ್ಲೆಯ ಜನರಿಗೆ ಅನುಕೂಲ ಆಗಲೆಂದು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹೆರಿಗೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗಿತ್ತು. ಇದರಿಂದ ಜಿಲ್ಲೆಯ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಿಗೆ ಚಿಕಿತ್ಸೆ ಸಲೀಸಾಗಿ ಲಭಿಸುತ್ತಿತ್ತು. ನಿತ್ಯ 50-60 ಹೆರಿಗೆಗಳು ಈ ಆಸ್ಪತ್ರೆಯಲ್ಲಿ ಆಗುತ್ತಿದ್ದವು. ಬೇರೆ ಊರಿನಿಂದ ಬರುವ ಜನರಿಗೆ ಹತ್ತಿರದಲ್ಲೇ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಇದ್ದವು. ಆದರೆ, ಇಷ್ಟು ಅನುಕೂಲಕರ ಜಾಗದಲ್ಲಿದ್ದ ಆಸ್ಪತ್ರೆಯನ್ನು ಏಕಾಏಕಿ ಸ್ಥಳಾಂತರಿಸುತ್ತಿರುವುದು ಹಲವು ಅನುಮಾನಗಳನ್ನು ಮೂಡಿಸುತ್ತಿದೆ’ ಎಂದು ಪ್ರತಿಭಟನಕಾರರು ಕಿಡಿಕಾರಿದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ ಮಾತನಾಡಿ, ‘ಸುಸಜ್ಜಿತ ಹೆರಿಗೆ ಆಸ್ಪತ್ರೆಯಲ್ಲಿದ್ದ ಎಲ್ಲ ವೈದ್ಯಕೀಯ ಉಪಕರಣಗಳು ಮತ್ತು ವಸ್ತುಗಳನ್ನ ಜಿಮ್ಸ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಹಾಗಿದ್ದರೆ, ಜಿಮ್ಸ್‌ಗೆ ಬಂದ ಅನುದಾನ ಎಲ್ಲಿ ಹೋಯಿತು?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದಂಡಪ್ಪ ಮಾನ್ವಿ ಸರ್ಕಾರಿ ಹೆರಿಗೆ ಆಸ್ಪತ್ರೆ ಸುತ್ತ ಬಹಳಷ್ಟು ಖಾಸಗಿ ಆಸ್ಪತ್ರೆಗಳಿವೆ. ಅವುಗಳ ಲಾಬಿಗೆ ಮಣಿದು, ಆಸ್ಪತ್ರೆ ಸ್ಥಳಾಂತರ ಮಾಡುತ್ತಿದ್ದಾರೆ’ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

‘ಯಾವುದೇ ಕಾರಣಕ್ಕೂ ಆಸ್ಪತ್ರೆಯನ್ನು ಜಿಮ್ಸ್‌ಗೆ ಸ್ಥಳಾಂತರಿಸಬಾರದು. ಜತೆಗೆ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಜಿಲ್ಲೆಯ ಜನತೆಗೆ ಅನುಕೂಲ ಕಲ್ಪಿಸಿಕೊಡಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಲ್ಲೇದ, ವೈದ್ಯಕೀಯ ಅಧೀಕ್ಷಕ ಡಾ. ಮ್ಯಾಗೇರಿ ಮನವಿ ಸ್ವೀಕರಿಸಿದರು.

ಸಂಘಟನೆಯ ಬಾಷಾಸಾಬ್‌ ಮಲ್ಲಸಮುದ್ರ , ರಫೀಕ್‌ ತೋರಗಲ್‌, ನಾಗರಾಜ ಕ್ಷತ್ರೀಯ, ಗಣೇಶ ಹುಬ್ಬಳ್ಳಿ, ಬಸಯ್ಯ ನಂದಿಗೋಳಮಠ, ಬಾಲರಾಜ ಅರಬರ, ಅಬ್ಬು ರಾಟಿ, ಬಾಬು ಬಾಕಳೆ, ವಿಕಾಸ ಕ್ಷೀರಸಾಗರ, ಮೇಘರಾಜ ಮೇಲ್ಮನಿ, ದಾದು, ರಶೀದಾ ನದಾಫ್‌, ರಫೀಕ್‌ ಧಾರವಾಡ, ಚಂದ್ರು ಕಾನಾಪೂರ, ಅಲ್ತಾಫ್ ಸೊಡಿ, ಹಜರತ್ ಲಕ್ಷ್ಮೇಶ್ವರ, ಮಂಜು ತಳವಾರ, ಆಶೀಫ್‌ ಬಳ, ಪ್ರಶಾಂತ ವರವಿ, ಶಿವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT