ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ: ಬಿಸಿಲಿನಿಂದ ಬೆಂದಿದ್ದ ಜನಕ್ಕೆ ತಂಪೆರೆದ ವರುಣ

ಜಿಲ್ಲೆಯಾದ್ಯಂತ ಉತ್ತಮ ಮಳೆ: ಜಮೀನುಗಳತ್ತ ಮುಖ ಮಾಡಿದ ರೈತರು– ಕೃಷಿ ಕಾರ್ಯಕ್ಕೆ ಚುರುಕು
Published 19 ಮೇ 2024, 15:43 IST
Last Updated 19 ಮೇ 2024, 15:43 IST
ಅಕ್ಷರ ಗಾತ್ರ

ಮುಂಡರಗಿ: ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಸಂಜೆ ಸಾಧಾರಣ ಮಳೆ ಸುರಿಯಿತು. ಕಳೆದ ಹಲವು ದಿನಗಳಿಂದ ಮಳೆಗಾಗಿ ಹಂಬಲಿಸುತ್ತಿದ್ದ ಜನರ ಮುಖದಲ್ಲಿ ಸಾಧಾರಣವಾಗಿ ಸುರಿದ ಮಳೆಯು ಮಂದಹಾಸ ಮೂಡಿಸಿತು.

ಭಾನುವಾರ ಸಂಜೆ 4ಗಂಟೆಗೆ ಆರಂಭವಾದ ಮಳೆಯು ಸುಮಾರು ಮುಕ್ಕಾಲು ಗಂಟೆಗಳ ಕಾಲ ಸುರಿಯಿತು. ಮಳೆಯ ರಭಸಕ್ಕೆ ಹೂತು ಹೋಗಿದ್ದ ಪಟ್ಟಣದ ಬಹುತೇಕ ಚರಂಡಿಗಳ ಹೂಳೆಲ್ಲಿ ಕಿತ್ತುಹೋಯಿತು. ಪಟ್ಟಣದ ಹೊರವಲಯದ ಖಾಲಿ ನಿವೇಶನಗಳು ಹಾಗೂ ಕಚ್ಚಾ ರಸ್ತೆಗಳು ಮಳೆ ನೀರಿನಿಂದ ಆವೃತ್ತಗೊಂಡವು.

ಶನಿವಾರ ರಾತ್ರಿ ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ಮಳೆ ಸುರಿಯಿತು. ಡಂಬಳ ಹೋಬಳಿಯ ಕೆಲವು ಗ್ರಾಮಗಳಲ್ಲಿ ಉತ್ತಮವಾಗಿ ಮಳೆ ಸುರಿದ ವರದಿಯಾಗಿದೆ. ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ರಸ್ತೆಗಳು ಮಳೆಯ ಕಾರಣದಿಂದ ಕೆಸರು ಗದ್ದೆಗಳಂತಾಗಿವೆ.

ನರೇಗಲ್‌ ವ್ಯಾಪ್ತಿ ಹದವಾದ ಮಳೆ

ನರೇಗಲ್:‌ ಪಟ್ಟಣದ ಹಾಗೂ ಹೋಬಳಿಯ ವ್ಯಾಪ್ತಿಯಲ್ಲಿ ಭಾನುವಾರ ನಸುಕಿನಜಾವ ಹದವಾದ ಮಳೆಯಾಗಿದೆ. ಮಧ್ಯರಾತ್ರಿ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು.

ನಂತರ ಗುಡುಗು, ಸಿಡಿಲು, ಗಾಳಿ ಸಹಿತ ಮಳೆ ಆರಂಭವಾಯಿತು. ಬೆಳಿಗ್ಗೆ 5 ಗಂಟೆ ವರೆಗೆ ಉತ್ತಮ ಮಳೆಯಾಗಿದೆ. ಮಳೆಕಾರಣ ಮಧ್ಯರಾತ್ರಿಯಿಂದ ಬೆಳಗಿನ ವರೆಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲಾಗಿತ್ತು.

ಶನಿವಾರ ಸಂಜೆ ನಿಡಗುಂದಿ ಗ್ರಾಮದ ವ್ಯಾಪ್ತಿಯಲ್ಲಿ ಜೋರಾದ ಮಳೆಯಾಗಿದೆ. ಹೊಲದ ಒಡ್ಡುಗಳು ಒಡೆದು ನೀರು ಹರಿದು ಹೋಗಿದೆ. ಮಳೆಯಿಂದ ಮುಂಗಾರು ಬಿತ್ತನೆಗೆ ಅನಕೂಲವಾಗಲಿದೆ. ಹೋಬಳಿಯಲ್ಲಿ ಆಗುತ್ತಿರುವ ಎರಡನೇ ಮಳೆಯಾದ ಕಾರಣ ರೈತರು ಖುಷಿಯಾಗಿದ್ದಾರೆ.

ವರ್ಷದ ಮೊದಲ ವರ್ಷಧಾರೆ: ಸಂತಸ

ರೋಣ: ಶನಿವಾರ ತಡರಾತ್ರಿಯಿಂದ ಭಾನುವಾರ ಬೆಳಗಿನ ಜಾವದವರೆಗೂ ತಾಲ್ಲೂಕು ಕೇಂದ್ರ ಸೇರಿದಂತೆ ವಿವಿಧ ಭಾಗದಲ್ಲಿ ಸುರಿದ ವರ್ಷದ ಮೊದಲ ವರ್ಷಧಾರೆ ರೈತಾಪಿ ವರ್ಗದಲ್ಲಿ ಹೊಸ ಭರವಸೆ ಮೂಡಿಸಿದೆ.

ಬೆಳಗಿನ ಜಾವದವರೆಗೆ ಸುರಿದ ಮಳೆಯ ಕಾರಣದಿಂದ ಕಾಯ್ದು ಕೆಂಡವಾಗಿದ್ದ ಭೂಮಿ ತಂಪಾಗಿದೆ. ತಾಲ್ಲೂಕಿನ ಹಲವು ಭಾಗದ ಕೆರೆಕಟ್ಟೆಗಳಿಗೆ ನೀರು ಹರಿದು ಬಂದಿದ್ದು, ಜನ, ಜಾನುವಾರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಹೆಸರು ಬಿತ್ತನೆಗೆ ಭೂಮಿ ಹದಗೊಳಿಸಿ ಕಾಯುತ್ತಾ ಕುಳಿತಿದ್ದ ತಾಲ್ಲೂಕಿನ ರೈತ ಸಮೂಹಕ್ಕೆ ಮಳೆ ಭರವಸೆ ಮೂಡಿಸಿದ್ದು, ಹೊಸಳ್ಳಿ– ಜಿಗಳೂರು ಮದ್ಯದ ಹಳ್ಳ ಹರಿದು ಬಂದಿದ್ದು ಬಹುತೇಕ ಕೃಷಿಭೂಮಿಯಲ್ಲಿ ತೇವಾಂಶ ಉಂಟು ಮಾಡಿದೆ. ಮುಂಗಾರಿನ ಪ್ರಮುಖ ಬೆಳೆಯಾದ ಹೆಸರು ಮತ್ತು ಮೆಕ್ಕೆಜೋಳ ಬಿತ್ತನೆಗೆ ರೈತರು ಸಿದ್ದತೆ ಪ್ರಾರಂಭಿಸಿದ್ದಾರೆ.

ರೋಣ ಭಾಗದ ರಾಮಭಟ್ಟರ ಕೆರೆ, ಬಡಿಗೇರ ಕೆರೆ ಸೇರಿದಂತೆ ಹಲವು ಕೆರೆಗಳು ಹಿರೇಹಾಳ, ಕುರಹಟ್ಟಿ, ಹೊಸಳ್ಳಿ ರಸ್ತೆಯ ಇಕ್ಕೆಲಗಳಲ್ಲಿನ ಸಣ್ಣಪುಟ್ಟ ಹಳ್ಳಗಳಲ್ಲಿ ನೀರು ಪ್ರವಹಿಸಿದ್ದು ಕಂಡು ಬಂತು. ಮಳೆಯಿಂದಾಗಿ ನೀರಿನ ಅಭಾವ ಎದುರಿಸುತ್ತಿದ್ದ ದನಕರುಗಳಿಗೂ ನೆಮ್ಮದಿ ಮೂಡಿಸಿದ್ದು ಒಟ್ಟಿನಲ್ಲಿ ರೋಣ ಭಾಗದಲ್ಲಿ ಸುರಿದ ಮಳೆ ಕೃಷಿ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ.

ಹಸಿ ಮಳೆ: ಬಿತ್ತನೆಗೆ ಸಜ್ಜು

ಡಂಬಳ: ತಡರಾತ್ರಿ ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆ ಆಗಿದೆ. ಮಳೆಯ ಪರಿಣಾಮ ರೈತ ಸಮುದಾಯ ಹರ್ಷಗೊಂಡಿದ್ದು, ಜಮೀನುಗಳಿಗೆ ಹೋಗಿ ಭೂಮಿ ಹದವನ್ನು ಖಚಿತಪಡಿಸಿಕೊಂಡಿದ್ದು, ಸಾಮಾನ್ಯವಾಗಿ ಕಂಡುಬಂತು. ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆ ವೇಗವನ್ನು ಪಡೆಯುವ ಸಾಧ್ಯತೆ ಇದೆ.

ಡಂಬಳ ಹೋಬಳಿ ಕೇಂದ್ರ ಸ್ಥಾನ ಸೇರಿದಂತೆ ಹೋಬಳಿ ವ್ಯಾಪ್ತಿಯ ಮೇವುಂಡಿ, ಯಕಲಾಸಪೂರ, ಪೇಠಾಲೂರ, ಜಂತಲಿಶಿರೂರ, ಹಿರೇವಡ್ಡಟ್ಟಿ, ಹಳ್ಳಿಗುಡಿ, ಹಳ್ಳಿಕೇರಿ, ಹಾರೂಗೇರಿ, ಡೋಣಿ, ಅತ್ತಿಕಟ್ಟಿ, ಚಿಕ್ಕವಡ್ಡಟ್ಟಿ, ಕದಾಂಪೂರ ಗ್ರಾಮದಲ್ಲಿ ಉತ್ತಮ ಮಳೆ ಆಗಿದೆ. ಹಲವು ಗ್ರಾಮದಲ್ಲಿ ಸಾಧಾರಣ ಮಳೆ ಆಗಿದೆ.

ಗಜೇಂದ್ರಗಡ: ಉತ್ತಮ ಮಳೆ

ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ತಡರಾತ್ರಿ ಉತ್ತಮ ಮಳೆಯಾಗಿದೆ. ರಾತ್ರಿ 3 ಗಂಟೆ ಸುಮಾರಿಗೆ ರಭಸವಾಗಿ ಸುರಿಯಲು ಆರಂಭವಾದ ಮಳೆ ಅರ್ಧ ಗಂಟೆಗೂ ಅಧಿಕ ಸುರಿಯಿತು. ನಂತರ ಸುಮಾರು ಒಂದು ಗಂಟೆ ಜಿಟಿ ಜಿಟಿ ಮಳೆ ಮುಂದುವರೆಯಿತು. ಗುರುವಾರ ಹಾಗೂ ಶನಿವಾರ ಸುರಿದ ಮಳೆಯಿಂದ ಭೂಮಿ ಹಸಿಯಾಗಿದ್ದು ರೈತರಲ್ಲಿ ಮುಂಗಾರು ಬಿತ್ತನೆಗೆ ಆಶಾಭಾವ ಮೂಡಿಸಿದೆ. ಅಲ್ಲದೆ ಮಳೆಯಿಂದ ತಂಪಾದ ವಾತಾವರಣ ನಿರ್ಮಾಣವಾಗಿದ್ದು ರೈತರು ಕೃಷಿ ಚಟುವಟಿಕೆ ಕೈಗೊಳ್ಳುವಂತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT