ಶಿರಹಟ್ಟಿ (ಗದಗ): ‘ರಾಜ್ಯದಲ್ಲಿನ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಸುರಕ್ಷತೆಗೆ ಪ್ರತಿ 30 ಕಿ.ಮೀ.ಗೆ ಒಬ್ಬರಂತೆ 1,500 ಮಂದಿ ಮೈಲುಗೂಲಿಗಳನ್ನು ನೇಮಕ ಮಾಡಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
‘ರಸ್ತೆಯಲ್ಲಿ ನೀರು ನಿಂತರೆ ತಕ್ಷಣ ಹೊರಹಾಕುವುದು, ಗುಂಡಿ ಬಿದ್ದರೆ ಮುಚ್ಚುವುದು, ಒತ್ತುವರಿ ಆಗದಂತೆ ನಿಗಾ ವಹಿಸುವುದು ಅವರ ಕೆಲಸ. ಇದು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಮೈಲುಗೂಲಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
‘ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಆಗುತ್ತಿರುವ ಕಾರಣ ರಸ್ತೆಗಳು ಹಾಳಾಗಿವೆ. ಮೊದಲ ಹಂತದಲ್ಲಿ ರಸ್ತೆಗಳ ದುರಸ್ತಿಯನ್ನು ಮಾಡಿ, ನಂತರ ಹೊಸ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.