ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿರುವುದು ರೈತ ವಿರೋಧಿ ಸರ್ಕಾರ: ಎ.ಎಸ್‌.ಪಾಟೀಲ ನಡಹಳ್ಳಿ

ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ
Published 11 ಏಪ್ರಿಲ್ 2024, 16:17 IST
Last Updated 11 ಏಪ್ರಿಲ್ 2024, 16:17 IST
ಅಕ್ಷರ ಗಾತ್ರ

ಗದಗ: ‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ರೈತ ವಿರೋಧಿ ಸರ್ಕಾರ. ಲೋಕಸಭಾ ಚುನಾವಣೆ ಮುಗಿದ ಮೂರು ತಿಂಗಳ ಬಳಿಕ ಕಾಂಗ್ರೆಸ್‌ ಸರ್ಕಾರ ಪತನಗೊಳ್ಳಲಿದೆ’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಯಾವಾಗೆಲ್ಲ ಕಾಂಗ್ರೆಸ್‌ ಆಡಳಿತದ ಚುಕ್ಕಾಣಿ ಹಿಡಿದಿದೆಯೋ ಆಗೆಲ್ಲ ಬಿಜೆಪಿ ಸರ್ಕಾರ ಪ್ರಕಟಿಸಿದ್ದ ಜನಪ್ರಿಯ ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಹಿತಕಾಯುವ ದೃಷ್ಟಿಯಿಂದ ಕಿಸಾನ್‌ ಸಮ್ಮಾನ್‌ ಯೋಜನೆ ಜಾರಿಗೆ ತಂದಿದ್ದು, ಕೇಂದ್ರ ಸರ್ಕಾರ ವರ್ಷದಲ್ಲಿ ಒಬ್ಬ ರೈತನಿಗೆ ₹6 ಸಾವಿರ ಸಹಾಯಧನ ನೀಡುತ್ತಿತ್ತು. ಅದಕ್ಕೆ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ₹4 ಸಾವಿರ ಸೇರಿಸಿ, ಒಟ್ಟು ₹10 ಸಾವಿರ ನೀಡುತ್ತಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಕೂಡಲೇ ರಾಜ್ಯದಿಂದ ನೀಡುತ್ತಿದ್ದ ₹4 ಸಾವಿರ ಹಣ ನಿಲ್ಲಿಸಿದರು’ ಎಂದು ಹರಿಹಾಯ್ದರು.

‘ಬಿಜೆಪಿ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುತ್ತಿತ್ತು. ಇದರಿಂದ 17 ಲಕ್ಷ ರೈತರಿಗೆ ಪ್ರಯೋಜನ ಆಗಿತ್ತು. ಆದರೆ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಅದನ್ನೂ ನಿಲ್ಲಿಸಿದ್ದಾರೆ. ಬರದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ದಿನಕ್ಕೆ ಕನಿಷ್ಠ ಏಳು ಗಂಟೆ ವಿದ್ಯುತ್‌ ನೀಡುತ್ತಿಲ್ಲ. ಲೋಡ್‌ ಶೆಡ್ಡಿಂಗ್‌ ಹಾವಳಿ ಮಿತಿಮೀರಿದ್ದು, ರೈತರು ತಮ್ಮ ಜಮೀನಿಗೆ ನೀರು ಹಾಯಿಸಲು ನಿರಂತರವಾಗಿ ಒಂದು ಗಂಟೆ ತ್ರೀಫೇಸ್‌ ವಿದ್ಯುತ್‌ ಕೂಡ ಸಿಗುತ್ತಿಲ್ಲ’ ಎಂದು ದೂರಿದರು.

‘ರಾಜ್ಯದಲ್ಲಿ ಹೈನುಗಾರಿಕೆ ಉತ್ತುಂಗಕ್ಕೆ ಏರಲು ರೈತ ಮಹಿಳೆಯರಿಗೆ ನೀಡುತ್ತಿದ್ದ ಪ್ರೋತ್ಸಾಹಧನವೇ ಕಾರಣ. ಬಿಜೆಪಿ ಸರ್ಕಾರದ ಈ ಯೋಜನೆಯಿಂದಾಗಿ ಪ್ರತಿ ರೈತ ಮಹಿಳೆಗೆ ತಿಂಗಳಿಗೆ ಕನಿಷ್ಠ ₹4 ಸಾವಿರ ಸಿಗುತ್ತಿತ್ತು. ಗರಿಷ್ಠ ₹10 ಸಾವಿರ ಪ್ರೋತ್ಸಾಹಧನ ಸಿಗುತ್ತಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ಹಾಲಿನ ಪ್ರೋತ್ಸಾಹಧನಕ್ಕೂ ಕೊಕ್ಕೆ ಹಾಕಿತು. ತೀವ್ರ ಹೋರಾಟದ ಬಳಿಕ ಸರ್ಕಾರ ಒಂದು ತಿಂಗಳ ಪ್ರೋತ್ಸಾಹಧನವನ್ನಷ್ಟೇ ನೀಡಿತು. ಇನ್ನೂ ₹717 ಕೋಟಿ ಬಾಕಿ ಉಳಿಸಿಕೊಂಡಿದೆ’ ಎಂದು ಹೇಳಿದರು.

‘ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅತಿವೃಷ್ಟಿ ಉಂಟಾಗಿತ್ತು. ಅವರು ರಾಜ್ಯದೆಲ್ಲೆಡೆ ಸಂಚರಿಸಿ ತಕ್ಷಣವೇ ಪರಿಹಾರ ಘೋಷಿಸಿದ್ದರು. ಆದರೆ, ಈಗ ರಾಜ್ಯದೆಲ್ಲೆಡೆ ಭೀಕರ ಬರಗಾಲ ಇದೆ. ರಾಜ್ಯ ಸರ್ಕಾರ ರೈತರಿಗೆ ನೆರವಾಗುವ ಬದಲು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತ ಕುಳಿತಿದೆ. ರಾಜ್ಯ ಸರ್ಕಾರ ಘೋಷಿಸಿದ್ದ ₹2 ಸಾವಿರ ಪರಿಹಾರ ಎಲ್ಲ ರೈತರಿಗೂ ಮುಟ್ಟಿಲ್ಲ’ ಎಂದು ಆರೋಪ ಮಾಡಿದರು.

‘ರೈತರ ಮಕ್ಕಳ ಶಿಕ್ಷಣಕ್ಕಾಗಿ ಬಸವರಾಜ ಬೊಮ್ಮಾಯಿ ಅವರು ವಿದ್ಯಾನಿಧಿ ಯೋಜನೆ ಪ್ರಕಟಿಸಿದ್ದರು. ಎಂಟನೇ ತರಗತಿಯಿಂದ ಪಿಎಚ್.ಡಿವರೆಗೆ ಎಲ್ಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗುತ್ತಿತ್ತು. ರಾಜ್ಯದಲ್ಲಿರುವ ರೈತ ವಿರೋಧಿ ಸರ್ಕಾರ ರೈತರು ಮತ್ತು ಅವರ ಮಕ್ಕಳ ಶ್ರೇಯೋಭಿವೃದ್ಧಿಗೆ ತಂದಿದ್ದ ಎಲ್ಲ ಯೋಜನೆಗಳನ್ನು ಸ್ಥಗಿತಗೊಳಿಸುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಹರಿಹಾಯ್ದರು.

‘ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ನಾವಿದ್ದೇವೆ. ಭಾರತ ವಿಶ್ವಗುರು ಆಗುವತ್ತ ದಾಪುಗಾಲು ಇರಿಸುತ್ತಿದೆ. 2013ರಲ್ಲಿ ಭಾರತದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದಿತ್ತು. ಮೋದಿ ಅವರು ಪ್ರಧಾನಿ ಆದ ಬಳಿಕ ಐದನೇ ಸ್ಥಾನಕ್ಕೆ ಬಂದು ನಿಂತಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತದ ಆರ್ಥಿಕತೆ ಮೂರನೇ ಸ್ಥಾನಕ್ಕೆ ಬರುವುದು ಖಚಿತ. ಹಾಗಾಗಿ, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲರೂ ಶ್ರಮಿಸಬೇಕಿದೆ’ ಎಂದು ಮನವಿ ಮಾಡಿದರು.

‘ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತಗಾರ. ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಅವರನ್ನು ಆರಿಸಬೇಕು’ ಎಂದು ಕೇಳಿಕೊಂಡರು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ಮುಖಂಡರಾದ ಎಂ.ಎಸ್‌.ಕರಿಗೌಡ್ರ, ಭಾರತಿ ಅಳವಂಡಿ, ಬಸಣ್ಣ ಇಟಗಿ, ಆರ್‌.ಕೆ.ಚವ್ಹಾಣ್‌, ರಾಜಣ್ಣ ಕುಲಕರ್ಣಿ, ಎಂ.ಎಂ.ಹಿರೇಮಠ, ಅಶೋಕ ಕರೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT