ಶನಿವಾರ, ಜನವರಿ 28, 2023
13 °C
ಕಾದಂಬರಿಗೆ ಬೆನ್ನುಡಿ ಬರೆದ ಬಿ.ಟಿ. ಲಲಿತಾನಾಯಕ್

ಶಿಕ್ಷಕನಿಂದ ‘ಸ್ಯಾನಿಟರಿ ಪ್ಯಾಡ್’ ಅಭಿಯಾನ

ಡಾ.ಬಸವರಾಜ ಹಲಕುರ್ಕಿ Updated:

ಅಕ್ಷರ ಗಾತ್ರ : | |

Prajavani

ನರಗುಂದ: ‘ನೊಂದ ನೋವನು ನೋಯದವರು ಎತ್ತ ಬಲ್ಲರು...’ ಎಂದು ಹೇಳಿದ ಅಕ್ಕಮಹಾದೇವಿಯವರ ಮಾತಿಗೆ ವೈರುಧ್ಯವೆಂಬಂತೆ ಮಹಿಳೆಯರು ಪ್ರತಿ ತಿಂಗಳು ಅನುಭವಿಸುವ ಮುಟ್ಟಿನ ನೋವನ್ನು ಪುರುಷ ಶಿಕ್ಷಕರೊಬ್ಬರು ‘ಸ್ಯಾನಿಟರಿ ಪ್ಯಾಡ್’ ಹೆಸರಿನಲ್ಲಿ ಕಾದಂಬರಿಯಾಗಿ ಚಿತ್ರಿಸಿ, ಸ್ಯಾನಿಟರಿ ಪ್ಯಾಡ್ ಎಲ್ಲೆಡೆ ದೊರೆಯುವಂತಾಗಬೇಕು ಎಂಬ ಅಭಿಯಾನಕ್ಕೆ ಮುಂದಾಗಿದ್ದಾರೆ.

ತಾಲ್ಲೂಕಿನ ಬೆನಕನಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕಂಚುಗಾರನಹಳ್ಳಿ ಸತೀಶ (ಕಂಸ) ಈ ಪ್ರಯತ್ನ ಕೈಗೊಂಡವರು.

ಕಾದಂಬರಿ ಲೋಕಾರ್ಪಣೆಗೊಳಿಸಿದ ಬಳಿಕ ಅವರು ಸುತ್ತಲಿನ ಶಾಲೆಗಳಲ್ಲಿ ಅಭಿಯಾನ ನಡೆಸಿದ್ದರು. ಇಂದು ರಾಜ್ಯದ ಕೆಲವೆಡೆ ಇರುವ ಪ್ರಮುಖ ಸಂಘ, ಸಂಸ್ಥೆಗಳು ಈ ಅಭಿಯಾನವನ್ನು ಮುಂದುವರಿಸಿವೆ. ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಘಟಕ ಅಧ್ಯಕ್ಷೆ ಲತಾ ಮುಳ್ಳೂರ ಕೂಡ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿದೆ.

‘ಮಹಿಳೆಯರು ಸ್ಯಾನಿಟರಿ ಪ್ಯಾಡ್ ಬಳಸಿ; ಸೋಂಕು ಉಂಟಾಗದಂತೆ ಕ್ರಮ ವಹಿಸಿ’ ಎಂಬ ಅಭಿಯಾನದ ವಿಡಿಯೊ, ಆಡಿಯೊ ವಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್‌ನಲ್ಲಿ ಹೆಚ್ಚು ಹರಿದಾಡಿದೆ.

ಬಂಡಾಯ ಲೇಖಕಿ ಬಿ.ಟಿ.ಲಲಿತಾನಾಯಕ್ ಅವರು ಈ ಕಾದಂಬರಿಗೆ ಬೆನ್ನುಡಿ ಬರೆದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.

‘ಹಿಂದಿನ ತಲೆಮಾರಿನ ಮಹಿಳೆಯರು ಅನುಭವಿಸಿದ ತೊಂದರೆ, ಕಂಡು ಕೇಳಿದ ಅನುಭವವನ್ನು ಒಟ್ಟುಗೂಡಿಸಿ ಕಾದಂಬರಿ ರಚಿಸಿ, ಅಭಿಯಾನಕ್ಕೆ ಮುಂದಾಗಿದ್ದೇನೆ. ಹಿಂದೆ ಶಾಲಾ, ಕಾಲೇಜುಗಳಲ್ಲಿ ಸ್ಯಾನಿಟರಿ ಪ್ಯಾಡ್‌ ಉಚಿತವಾಗಿ ವಿತರಣೆಯಾಗುತ್ತಿತ್ತು. ಅದು ಮತ್ತೇ ಆರಂಭವಾಗಬೇಕು. ಜತೆಗೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಉಚಿತವಾಗಿ ಅಥವಾ ನಾಣ್ಯ ಹಾಕಿ ತಾವೇ ನೇರವಾಗಿ ತೆಗೆದುಕೊಳ್ಳುವ ವ್ಯವಸ್ಥೆ ಕಲ್ಪಿಸುವಂತಾಗಬೇಕು. ಈ ಕುರಿತಾಗಿ ಅಭಿಯಾನ ರಾಜ್ಯದ ತುಂಬ ನಡೆಯುತ್ತಿದೆ. ಇದಕ್ಕೆ ಸರ್ಕಾರ, ಸಂಘ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರೂ ಸ್ಪಂದಿಸುವುದು ಅಗತ್ಯ’ ಎಂದು ‘ಸ್ಯಾನಿಟರಿ ಪ್ಯಾಡ್’ ಕಾದಂಬರಿ ಲೇಖಕ ಕಂಚುಗಾರನಹಳ್ಳಿ ಸತೀಶ ತಿಳಿಸಿದ್ದಾರೆ.

ಸ್ಯಾನಿಟರಿ ಪ್ಯಾಡ್ ಎಂದಾಕ್ಷಣ ಮಹಿಳೆಯರೇ ಹಿಂದೇಟು ಹಾಕುವಾಗ, ಸತೀಶ ಅವರು ಪುರುಷರಾಗಿ ಕಾದಂಬರಿ ಬರೆದು, ಅಭಿಯಾನ ಆರಂಭಿಸಿದ್ದನ್ನು ಮಹಿಳಾ ಲೋಕ ಸ್ವಾಗತಿಸಿ, ಅಭಿನಂದಿಸಲೇಬೇಕು
ಭುವನೇಶ್ವರಿ ಅಂಗಡಿ, ಶಿಕ್ಷಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.