ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಅಂಗಳದೊಳಗೆ ಸ್ಫೂರ್ತಿಯ ಗುಚ್ಛ!

ಶಿಕ್ಷಣ, ಬದುಕು, ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಅಕ್ಷರಗಳು
Last Updated 6 ಆಗಸ್ಟ್ 2021, 3:25 IST
ಅಕ್ಷರ ಗಾತ್ರ

ಗದಗ: ಒಂದು ಸ್ಫೂರ್ತಿದಾಯಕ ಮಾತಿಗೆ ಒಬ್ಬ ವ್ಯಕ್ತಿಯ ಜೀವನವನ್ನೇ ಬದಲಿಸುವ ಶಕ್ತಿ ಇದೆ. ಅಂತೆಯೇ,
ಒಬ್ಬ ಸೂಕ್ಷ್ಮ ಮನಸ್ಸಿನ ವ್ಯಕ್ತಿಯ ಜೀವನದಲ್ಲಿ ಉತ್ಸಾಹ ಹಾಗೂ ಸಾಧಿಸುವ ಕೆಚ್ಚು ತುಂಬಲು ಪ್ರೇರಣಾತ್ಮಕ ಬರಹಗಳು ಶಕ್ತಿಮದ್ದಿನಂತೆ ಕೆಲಸ ಮಾಡುತ್ತವೆ.

ಹಸಿರು ಸಿರಿಯ ನಡುವೆ ಕಂಗೊಳಿಸುವ ಗದುಗಿನ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಗಳ ಶಾಲಾ ಆವರಣದ ತುಂಬೆಲ್ಲವೂ ಇಂತಹ ನೂರಾರು ಪ್ರೇರಣಾದಾಯಕ ಸಾಲುಗಳು ತುಳುಕುತ್ತಿವೆ. ಆವರಣಕ್ಕೆ ಹೊಸದಾಗಿ ಕಾಲಿಡುವವರು ಆ ಸಾಲುಗಳನ್ನು ಕುತೂಹಲದ ಕಣ್ಣಿನಿಂದ ನೋಡುವುದಷ್ಟೇ ಅಲ್ಲ; ಅದರ ಭಾವಸ್ಫೂರ್ತಿಯನ್ನು ಎದೆಗಿಳಿಸಿಕೊಂಡು ಕ್ಷಣಕಾಲ ರೋಮಾಂಚನಗೊಳ್ಳುತ್ತಾರೆ. ಆ ಕ್ಷಣಕ್ಕಾದರೂ ಅವರ ಎದೆಯೊಳಗೆ ಉತ್ಸಾಹದ ಬುಗ್ಗೆ ಮೇಲೆಳುತ್ತದೆ.

ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ, ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ, ಅಲ್ಬರ್ಟ್‌ ಐನ್‌ಸ್ಟಿನ್‌ ಸೇರಿದಂತೆ ಹಲವಾರು ಚಿಂತಕರು, ವಿಜ್ಞಾನಿಗಳು, ದಾರ್ಶನಿಕರ ಸ್ಫೂರ್ತಿಯ ಮಾತುಗಳನ್ನು ಫಲಕದ ಮೇಲೆ ಬರೆಯಿಸಿ ಶಾಲಾ ಆವರಣದೆಲ್ಲೆಡೆ
ಅಳವಡಿಸಲಾಗಿದೆ. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿರುವ ಬರಹಗಳ ಮೇಲೆ ದಿನನಿತ್ಯ ಕಣ್ಣಾಡಿಸುವ ಮಕ್ಕಳು, ಕಾಲೇಜು ವಿದ್ಯಾರ್ಥಿಗಳ ಮನದಲ್ಲಿ ಸಾಧನೆಯ ಬೆಳಕು ಪ್ರತಿಕ್ಷಣವೂ ಪ್ರಜ್ವಲಿಸುತ್ತಿರಬೇಕು ಎಂಬುದು ಶಾಲಾ ಆಡಳಿತ ಮಂಡಳಿಯ ಆಶಯವಾಗಿದೆ.

ಪ್ರೇರಣಾದಾಯಕ ಸಾಲುಗಳನ್ನು ಓದಿ ಸಾಧನೆಯ ಕಿಚ್ಚು ಹೊತ್ತಿಸುವುದರ ಜತೆಗೆ ಮಕ್ಕಳಲ್ಲಿ ನೈತಿಕ ಮನೋಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಲು ನೆರವಾಗುವಂತಹ ಫಲಕಗಳನ್ನೂ ಇಲ್ಲಿ ಅಳವಡಿಸಲಾಗಿದೆ. ಬದುಕಿನಲ್ಲಿ ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಸಹೃದಯಿಯಾಗಿ ಬಾಳುವುದರ ಜತೆಗೆ, ದೇಶದ ಉನ್ನತಿಗೆ ನೆರವಾಗಲು ತನ್ನದೇ
ಕಾಣ್ಕೆ ನೀಡಬೇಕು ಎಂಬ ಸ್ಫೂರ್ತಿದಾಯಕ ಸಂದೇಶಗಳೂ ಇಲ್ಲಿವೆ.

ದೇಸಿ ಬರಹಗಳ ಸೊಗಸು

ವಿನಯ್‌ ಚಿಕ್ಕಟ್ಟಿ ಐಸಿಎಸ್‌ಇ ಶಾಲಾ ಆವರಣದ ಮುಂಬದಿಯಲ್ಲಿ ಅಳವಡಿಸಿರುವ ಉತ್ತರ ಕರ್ನಾಟಕ ಶೈಲಿಯ ಬರಹಗಳು ಮನಕ್ಕೆ ಆಪ್ತ ಅನುಭವ ನೀಡುತ್ತವೆ.

‘ಇದ್ದ ಅಡಗಿ ನನಗ ತಿನಿಸಿ, ನಂಗ ಹಸಿವಿಲ್ಲ ಯಪ್ಪ ಅಂತಿ, ನಾ ಮನ್ಯಾಗ ಇಲ್ಲಂದ್ರ ಹೋಳಗಿ ಮಾಡಲ್ಲ ಅಂತಿ, ನಾ ಎಷ್ಟು ದಪ್ಪಗಿದ್ರು ಸೊರಗಿ ನೋಡ್‌ ಯಪ್ಪ ಅಂತಿ, ಅವ್ವಾ ನೀ ಭಾಳ ಸುಳ್ಳು ಹೇಳತಿ...’ ಹೀಗೆ ತಾಯಿ– ಮಗನ ನಡುವಿನ ಬಾಂಧವ್ಯ, ಕಕ್ಕುಲಾತಿ ಬಿಂಬಿಸುವ ಬರಹಗಳು ಸಾಕಷ್ಟಿದ್ದು ಮನಕ್ಕೆ ಮುದನೀಡುತ್ತವೆ. ಸಂಬಂಧಗಳ ಹೂರಣದ ಬಗ್ಗೆಯೂ ಚಿಂತನೆಗೆ ಹಚ್ಚುತ್ತವೆ.

ಬದಲಾವಣೆಯ ಆಶಯ

‘ಸ್ಫೂರ್ತಿದಾಯಕ ಮಾತುಗಳಿಗೆ ಕಿವಿಕೊಡುವವರ ಸೂಕ್ಷ್ಮ ಮನಸ್ಸಿನವರ ಸಂಖ್ಯೆ ಇಂದು ಕಡಿಮೆ ಆಗಿದೆ. ಕೆಲವರಾದರೂ ಅವುಗಳಿಂದ ಪ್ರೇರಣೆಗೊಳ್ಳಲಿ ಎಂಬ ಉದ್ದೇಶದಿಂದ ಪ್ರೇರಣೆಯ ಸಾಲುಗಳನ್ನು ಬರೆಯಿಸಲಾಗಿದೆ. ಇವುಗಳನ್ನು ಓದಿದ ಕೆಲವು ಪೋಷಕರು ನಮ್ಮನ್ನು ನೋಡಿಯೇ ಬರೆದಂತಿದೆ ಎಂದು ಹೇಳಿದಾಗ ಖುಷಿ ಎನಿಸುತ್ತದೆ. ಪ್ರೇರಣೆಯ ನದಿ ನಿರಂತರವಾಗಿ ಹರಿಯಬೇಕು ಎಂಬುದು ನಮ್ಮ ಉದ್ದೇಶ’ ಎನ್ನುತ್ತಾರೆ ಚಿಕ್ಕಟ್ಟಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಸ್‌.ವೈ.ಚಿಕ್ಕಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT