ಮಂಗಳವಾರ, ಮಾರ್ಚ್ 28, 2023
29 °C
ಶರಣ ಹೂಗಾರ ಮಾದಯ್ಯನವರ ಜಯಂತಿ

‘ಕಾಯಕಕ್ಕೆ ದೈವತ್ವ ತಂದುಕೊಟ್ಟ ಶರಣರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ರಾಜಕೀಯ ವ್ಯವಸ್ಥೆಯಲ್ಲಿ ಶುದ್ಧತೆ, ಪ್ರಾಮಾಣಿಕತೆ ಮತ್ತು ಕಾಯಕನಿಷ್ಠೆ ಬರಬೇಕಾದರೆ ಎಲ್ಲರೂ ಶರಣರ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.

ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ತೋಂಟದಾರ್ಯ ಮಠದಲ್ಲಿ ಶಿಕ್ಷಕ ದಿನಾಚರಣೆ ಅಂಗವಾಗಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಾದಿ ಶರಣರ ಜೀವನ ಮತ್ತು ಅವರ ವಿಚಾರಗಳನ್ನು ಜಾನಪದದ ಅನೇಕ ಪ್ರಕಾರಗಳಲ್ಲಿ ಕಾಣಬಹುದಾಗಿದೆ. ಇವು ಶರಣರ ಜೀವನ ಮತ್ತು ಮೌಲ್ಯಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿವೆ. ಕಾಯಕದಲ್ಲಿ ಮೇಲು ಕೀಳು ಎಂಬುದಿಲ್ಲ ಎಂಬ ತತ್ವ ಸಾರಿದ ಶರಣರು ಕಾಯಕಕ್ಕೆ ದೈವತ್ವ ತಂದುಕೊಟ್ಟಿದ್ದಾರೆ. ಅಂತವರ ಸಾಲಿನಲ್ಲಿ ಹೂಗಾರ ಮಾದಯ್ಯನವರು ಶ್ರೇಷ್ಠರಾಗಿದ್ದಾರೆ’ ಎಂದು ತಿಳಿಸಿದರು.

ಶರಣ ಹೂಗಾರ ಮಾದಯ್ಯನವರ ಕುರಿತು ಗದುಗಿನ ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ. ಎಸ್.ಯು.ಸಜ್ಜನಶೆಟ್ಟರ ಉಪನ್ಯಾಸ ನೀಡಿದರು.

‘12ನೇ ಶತಮಾನದ 770 ಅಮರಗಣಂಗಳಲ್ಲಿ ಒಬ್ಬರಾದ ಹೂಗಾರ ಮಾದಯ್ಯನವರು ಬೆಳವಲ ನಾಡಿನ ಐಹೊಳೆ ಪರಿಸರದ ಶಿವದೇವಾಲಯಕ್ಕೆ ತಂದೆಯೊಂದಿಗೆ ಹೂಪತ್ರೆಗಳನ್ನು ನೀಡುವ ಕಾಯಕದಲ್ಲಿ ನಿರತರಾಗಿದ್ದರು. ನಂತರ ಮಡದಿ ಮಾದೇವಿಯೊಂದಿಗೆ ಕಲ್ಯಾಣಕ್ಕೆ ಬಂದು ನೆಲೆಸುತ್ತಾರೆ. ಸಕಳೇಶ ಮಾದರಸರಿಂದ ಲಿಂಗದೀಕ್ಷೆಯನ್ನು ಪಡೆದು ಸತ್ಯಶುದ್ಧ ಕಾಯಕದಿಂದ ಬದುಕು ನಿರ್ವಹಿಸಿ ಬಸವಾದಿಶರಣರ ಪ್ರೀತಿಗೆ ಪಾತ್ರರಾಗುತ್ತಾರೆ. ಇವರ ಕಾಯಕನಿಷ್ಠೆ ಅಮೋಘವಾದದ್ದು’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ ಮಾತನಾಡಿ, ‘ಅಧಿಕಾರ ಶಾಶ್ವತವಲ್ಲ. ಅಧಿಕಾರ ಇದ್ದಾಗ ಮಾಡುವ ಜನಪರ ಕೆಲಸಗಳು ಶಾಶ್ವತ. ಪ್ರಾಮಾಣಿಕತೆ, ಬದ್ಧತೆಯಿಂದ ನಿರ್ವಹಿಸುವ ಕಾರ್ಯಗಳು ಕಾಯಕಕ್ಕೆ ಸಮಾನ’ ಎಂದು ತಿಳಿಸಿದರು.

ಗದಗ ಜಿಲ್ಲಾ ಹೂಗಾರ ಸಮಾಜ ಸೇವಾ ಸಂಘ ಅಧ್ಯಕ್ಷ ಉಮೇಶ ಎಂ. ಹೂಗಾರ ಮಾತನಾಡಿದರು.

ಈಚೆಗೆ ಲಿಂಗೈಕ್ಯರಾದ ಶರಣ ವೀರಣ್ಣ ಮುಳ್ಳಾಳ, ಕಮಲಾಕ್ಷಿ ರಾಚಪ್ಪ ಮಿಣಜಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು.

ಶಿವರಾಂ ಬಂಡೇಮೇಗಳ ನಿರೂಪಿಸಿದರು. ಗೌರಕ್ಕ ಬಡಿಗಣ್ಣವರ, ವೀರಣ್ಣ ಗೊಡಚಿ, ವಿಜಯಕುಮಾರ ಹಿರೇಮಠ, ಶಿವರಾಮ ಬಂಡೇಮೇಗಳ, ಶಶಿಧರ ಬೀರನೂರ, ಪ್ರಕಾಶ ಅಸುಂಡಿ, ಪ್ರಭು ಗಂಜಿಹಾಳ, ರತ್ನಕ್ಕ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು