ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೌಕರಿಗೆ ರಾಜೀನಾಮೆ ನೀಡಿದವನ ಕೈ ಹಿಡಿದ ರೇಷ್ಮೆ ಕೃಷಿ: ₹10 ಲಕ್ಷಕ್ಕೂ ಅಧಿಕ ಲಾಭ

Last Updated 27 ಜನವರಿ 2023, 7:26 IST
ಅಕ್ಷರ ಗಾತ್ರ

ಗಜೇಂದ್ರಗಡ: ಕೃಷಿಯಲ್ಲಿ ಯಶಸ್ಸು ಕಾಣುವುದು ಅಷ್ಟು ಸುಲಭವಲ್ಲ. ನಿರಂತರ ಪರಿಶ್ರಮ ಇದ್ದರೆ ಯಾವುದು ಅಸಾಧ್ಯವೂ ಅಲ್ಲ. ರೇಷ್ಮೆ ಕೃಷಿಯನ್ನೇ ನಂಬಿ, ಶ್ರದ್ಧೆಯಿಂದ ಕೆಲಸ ಮಾಡುವ ಮೂಲಕ ಯಶಸ್ಸು ಕಂಡಿದ್ದಾರೆ ತಾಲ್ಲೂಕಿನ ನಾಗರಸಕೊಪ್ಪ ಗ್ರಾಮದ ಮುತ್ತಣ್ಣ ಬಸಪ್ಪ ಸೊಬರದ.

2006ರಲ್ಲಿ ಕೆ.ಎಸ್‌.ಆರ್.ಟಿ.ಸಿ ನೌಕರಿಗೆ ಸೇರಿದ್ದ ಇವರು, ಹೆಚ್ಚು ಆಸಕ್ತಿ ಹೊಂದಿದ್ದು ಮಾತ್ರ ಕೃಷಿ ಕ್ಷೇತ್ರದಲ್ಲಿ. ಹೀಗಾಗಿ 2008ರಲ್ಲಿ ನೌಕರಿಗೆ ರಾಜೀನಾಮೆ ನೀಡಿ, ಇಂದಿನವರೆಗೂ ಸಂಪೂರ್ಣವಾಗಿ ಕೃಷಿಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಯಶಸ್ವಿ ಕೃಷಿಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತಮ್ಮ 10 ಎಕರೆ ಜಮೀನಿನಲ್ಲಿ ಕಳೆದ 7 ವರ್ಷಗಳಿಂದ 3 ಎಕರೆಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಇದು 25 ದಿನಗಳ ಬೆಳೆಯಾಗಿದ್ದು, ಎಲ್ಲ ಕೃಷಿಗಿಂತ ಸುಲಭ ಹಾಗೂ ಲಾಭದಾಯಕವಾಗಿದೆ. ಹೀಗಾಗಿ ಸಹೋದರರಾದ ಈರಣ್ಣ ಹಾಗೂ ಸಿದ್ದಣ್ಣ ಅವರೊಂದಿಗೆ ಸೇರಿ ರೇಷ್ಮೆ ಬೆಳೆ ಹೆಚ್ಚು ಆದ್ಯತೆ ನೀಡಿದ್ದಾರೆ. ಬೇರೆಯವರ 20 ಎಕರೆ ಭೂಮಿಯನ್ನು ಲಾವಣಿ ಪಡೆದು, ಮಿಶ್ರ ಬೇಸಾಯ ಮಾಡುತ್ತಿದ್ದಾರೆ.

‘ರಾಮದುರ್ಗದಿಂದ 300 ರೇಷ್ಮೆ ಹುಳುಗಳನ್ನು ತಂದು, 3 ತಿಂಗಳಿಗೆ ಎರಡು ರೇಷ್ಮೆ ಫಸಲು ಪಡೆಯುತ್ತೇವೆ. ರೇಷ್ಮೆ ಹುಳುಗಳ ಖರೀದಿ, ನಿರ್ವಹಣೆಗೆ ಸುಮಾರು ₹50 ಸಾವಿರ ಖರ್ಚಾಗುತ್ತದೆ. 22ರಿಂದ 25 ದಿನಗಳ ಕಾಲ ವ್ಯವಸ್ಥಿತವಾಗಿ ರೇಷ್ಮೆ ಹುಳುಗಳನ್ನು ಜೋಪಾನ ಮಾಡಿದರೆ ಪ್ರತಿ ಬಾರಿ 3 ಕ್ವಿಂಟಲ್ ರೇಷ್ಮೆ ಇಳುವರಿ ತೆಗೆಯಬಹುದು. ರೇಷ್ಮೆ ಗೂಡುಗಳಿಗೆ ರಾಮನಗರದಲ್ಲಿ ಉತ್ತಮ ಬೆಲೆ ಸಿಗುತ್ತದೆ’ ಎನ್ನುತ್ತಾರೆ ಪ್ರಗತಿಪರ ರೈತ ಮುತ್ತಣ್ಣ ಸೊಬರದ.

₹10 ಲಕ್ಷಕ್ಕೂ ಅಧಿಕ ಲಾಭ

ಪ್ರಗತಿಪರ ರೈತ ಮುತ್ತಣ್ಣ ಸೊಬರದ ಅವರು ರೇಷ್ಮೆ ಬೆಳೆ ಅಷ್ಟೆ ಅಲ್ಲದೆ, ಹೈನಾಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. 15 ದೇಸೀ ಹಸುಗಳನ್ನು ಸಾಕಿ ವಾರ್ಷಿಕ ₹10 ಲಕ್ಷಕ್ಕೂ ಅಧಿಕ ಲಾಭ ಗಳಿಸುತ್ತಿದ್ದಾರೆ. ಇವರ ಸಾಧನೆಗೆ 2021ರಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಲ್ಲಿ ‘ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ’ ಪ್ರಶಸ್ತಿ, 2022ರಲ್ಲಿ ರೇಷ್ಮೆ ಇಲಾಖೆಯಿಂದ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿ ಲಭಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT