ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಎಲ್ಲೆಡೆ ಖಾಕಿ ಕಣ್ಗಾವಲು

ಸುಮ್‌ ಸಮ್ನೆ ಅಡ್ಡಾಡಿದರೆ ವಾಹನಗಳು ವಶಕ್ಕೆ; ಎಫ್‌ಐಆರ್‌ ಜತೆಗೆ ದಂಡವೂ ಬೀಳುತ್ತೆ
Last Updated 10 ಮೇ 2021, 5:50 IST
ಅಕ್ಷರ ಗಾತ್ರ

ಗದಗ: ಕೊರೊನಾ ಸೋಂಕು ಹರಡುವ ಸರಪಳಿ ತುಂಡರಿಸಲು ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಅವು ಸೋಮವಾರದಿಂದ ಜಾರಿಗೆ ಬರಲಿವೆ. ಅನಗತ್ಯ ಓಡಾಟ, ಅಂತರ ಜಿಲ್ಲಾ ಸಂಚಾರ ನಿರ್ಬಂಧ ಸೇರಿದಂತೆ ಹಲವು ಕಠಿಣ ನಿಯಮಗಳ ಅನುಷ್ಠಾನಕ್ಕೆ ಗದಗ ಜಿಲ್ಲಾ ಪೊಲೀಸ್‌ ಇಲಾಖೆ ಅಗತ್ಯದ ಸಿದ್ಧತೆ ಮಾಡಿಕೊಂಡಿದೆ.

‘ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್‌ ಮಾಡಿಕೊಳ್ಳಲಾಗಿದೆ. ಜಿಲ್ಲೆ ಪ್ರವೇಶಕ್ಕೆ ಅವಕಾಶವಿರುವ ಆರು ಪಾಯಿಂಟ್‌ಗಳಲ್ಲಿ ಅಂತರ ಜಿಲ್ಲಾ ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಎಮರ್ಜೆನ್ಸಿ ಹೊರತು ಪಡಿಸಿ, ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ತಿಳಿಸಿದ್ದಾರೆ.

ವಾಹನಗಳ ಓಡಾಟಕ್ಕೆ ಬ್ರೇಕ್‌: ಮೇ 10ರಿಂದ ಮೇ 24ರವರೆಗೆ ನಗರದ ಒಳಭಾಗದಲ್ಲಿನ ವಾಹನ ಸಂಚಾರಕ್ಕೂ ಕೆಲವೊಂದು ನಿಯಮಗಳನ್ನು ರೂಪಿಸಲಾಗಿದೆ. ಅದರಂತೆ ಬ್ಯಾಂಕ್ ಸಿಬ್ಬಂದಿ, ಅಗತ್ಯ ಸೇವೆ ಒದಗಿಸುವ ಕೆಲವು ಸರ್ಕಾರಿ ಇಲಾಖೆಗಳ ಸಿಬ್ಬಂದಿಯ ವಾಹನಗಳನ್ನು ಹೊರತುಪಡಿಸಿ ಅನ್ಯರು ವಾಹನ ಬಳಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ಗಾಡಿಗಳನ್ನು ತೆಗೆದುಕೊಂಡು ಊರು ತುಂಬ ಅಡ್ಡಾಡಿದರೆ ಪೊಲೀಸರು ಗಾಡಿಗಳನ್ನು ಸೀಜ್‌ ಮಾಡುತ್ತಾರೆ. ಪ್ರಕರಣ ದಾಖಲಿಸಿ ದಂಡ ಕೂಡ ವಿಧಿಸುತ್ತಾರೆ.

‘ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ನಡೆದುಕೊಂಡು ಹೋಗಿಯೇ ಅಗತ್ಯ ವಸ್ತುಗಳನ್ನು ಖರೀದಿ ಮಾಡಬೇಕು. ಯಾರು ವಾಹನಗಳ ಬಳಕೆ ಮಾಡಬಹುದು ಎಂಬುದನ್ನು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. ಅದರ ಅನ್ವಯ ಪೊಲೀಸರು ಅವರಿಗೆ ವಿನಾಯಿತಿ ನೀಡುತ್ತಾರೆ. ಉಳಿದವರು ವಾಹನ ಬಳಸುವಂತಿಲ್ಲ. ಇಲಾಖೆ ವತಿಯಿಂದ ಯಾರಿಗೂ ಪಾಸುಗಳನ್ನು ನೀಡಿಲ್ಲ’ ಎಂದು ಎಸ್‌‍ಪಿ ಯತೀಶ್‌ ಎನ್‌. ತಿಳಿಸಿದ್ದಾರೆ.

ಲಾಕ್‌ಡೌನ್‌ ಬಂದೋಬಸ್ತ್‌ಗೆ ಜಿಲ್ಲೆಯಲ್ಲಿರುವ ಎಲ್ಲ ಪೊಲೀಸ್‌ ಸಿಬ್ಬಂದಿಯನ್ನೂ ಬಳಕೆ ಮಾಡಿಕೊಳ್ಳಲಾಗುವುದು. ಅಂತರ ಜಿಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚಿನ ನಿಗಾ ಇಡಲಾಗುವುದು.
ಯತೀಶ್‌ ಎನ್‌., ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT