ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ನಗರಸಭೆ ಕಾರಿಡಾರ್‌ನಲ್ಲಿ ಮೂತ್ರ ವಿಸರ್ಜಿಸಿದ ಶ್ರೀರಾಮಸೇನೆ ಕಾರ್ಯಕರ್ತರು!

ಶೌಚಾಲಯಗಳ ಸ್ಥಾಪನೆಗೆ ಆಗ್ರಹ
Last Updated 24 ನವೆಂಬರ್ 2021, 3:49 IST
ಅಕ್ಷರ ಗಾತ್ರ

ಗದಗ: ಗದಗ–ಬೆಟಗೇರಿಅವಳಿ ನಗರದಲ್ಲಿರುವ ಸಾರ್ವಜನಿಕ ಮೂತ್ರಾಲಯಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಮಂಗಳವಾರ ಗದಗ–ಬೆಟಗೇರಿ ನಗರಸಭೆ ಕಾರಿಡಾರ್‌ ಹಾಗೂ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡಿ ಹೊಸ ರೀತಿಯಲ್ಲಿ ಪ್ರತಿಭಟಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹಾಗೂ ಗದಗ ಶಾಸಕ ಎಚ್‌.ಕೆ.ಪಾಟೀಲ ಸಾರ್ವಜನಿಕರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫರಾಗಿದ್ದಾರೆ ಎಂದು ಅವರ ವಿರುದ್ಧ ಘೋಷಣೆ ಕೂಗಿದರು.

‘ಅವಳಿ ನಗರದಲ್ಲಿ ಸಾರ್ವಜನಿಕ ಮೂತ್ರಾಲಯಗಳ ಸ್ಥಿತಿ ತೀರಾ ಕೆಟ್ಟದಾಗಿದೆ. ನಗರದ ಕೆಲವೆಡೆ ಇದ್ದ ಮೂತ್ರಾಲಯಗಳನ್ನು ಕೆಡವಲಾಗಿದೆ. ಸಮಸ್ಯೆ ಬಗೆಹರಿಸದಿದ್ದರೆ ನಗರಸಭೆ ಆವರಣದಲ್ಲಿ ಮೂತ್ರವಿಸರ್ಜನೆ ಮಾಡಿ ಪ್ರತಿಭಟಿಸಲಾಗುವುದು ಎಂದು ಅಧಿಕಾರಿಗಳಿಗೆ ವಾರದ ಹಿಂದೆಯೇ ಎಚ್ಚರಿಸಲಾಗಿತ್ತು. ಅಧಿಕಾರಿಗಳು ಸ್ಪಂದಿಸದ ಕಾರಣ ಪ್ರತಿಭಟನೆ ಅನಿವಾರ್ಯವಾಯಿತು’ ಎಂದು ಶ್ರೀರಾಮ ಸೇನೆ ಧಾರವಾಡ ವಿಭಾಗೀಯ ಸಂಚಾಲಕ ರಾಜು ಖಾನಪ್ಪನವರ ಹೇಳಿದರು.

ಪ್ರತಿಭಟನೆ ವೇಳೆ ಸ್ಥಳದಲ್ಲಿ ಸಾಕಷ್ಟು ಮಂದಿ ಪೊಲೀಸರು ಇದ್ದರೂ ಪ್ರತಿಭಟನಕಾರರು ನಗರಸಭೆ ಆವರಣದ ವಿವಿಧೆಡೆ ಮೂತ್ರವಿಸರ್ಜನೆ ಮಾಡಿದರು.

ದಲಿತ ಸಂಘಟನೆಗಳ ಒಕ್ಕೂಟ ಖಂಡನೆ: ಶ್ರೀರಾಮ ಸೇನೆ ನಡೆಸಿದ ಈ ಪ್ರತಿಭಟನೆಯನ್ನು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

‘ಶ್ರೀರಾಮ ಸೇನೆಯವರು ಮೂತ್ರ ವಿಸರ್ಜಿಸಿ ಪ್ರತಿಭಟಿಸಿ ಪೌರಕಾರ್ಮಿಕರನ್ನು, ಅಸಭ್ಯ ವರ್ತನೆ ತೋರಿ ದಲಿತರನ್ನು ಅವಮಾನಿಸಿದ್ದಾರೆ. ಹುಯ್ದು ಹೋಗಿರುವ ಮೂತ್ರವನ್ನು ಸ್ವಚ್ಛಗೊಳಿಸುವುದು ಇಲ್ಲಿನ ಪೌರಕಾರ್ಮಿಕರೇ ಹೊರತು; ಅಧಿಕಾರಿ ವರ್ಗ ಅಲ್ಲ. ಈ ರೀತಿಯ ಉದ್ಧಟತನ ತೋರಿದ ಸಂಘಟನೆಯ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮುಖಂಡರಾದ ಶರೀಫ ಬಿಳೇಯಲಿ, ಮುತ್ತು ಬಿಳೇಯಲಿ ಒತ್ತಾಯಿಸಿದ್ದಾರೆ.

‘ಪ್ರತಿಭಟನಕಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಸಂಘಟನೆ ಒಕ್ಕೂಟ ಮನವಿ ನೀಡಿದೆ. ಆದರೆ, ಪ್ರಕರಣ ದಾಖಲಿಸಿಲ್ಲ. ಪ್ರಕರಣ ದಾಖಲಿಸಿದರೆ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT