ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಗದಗ ಜಿಲ್ಲೆಗೆ ಗ್ರೇಡ್‌ ‘ಸಿ’

‘ಫಲ’ ಕೊಡದ ಶೈಕ್ಷಣಿಕ ಕಾರ್ಯಕ್ರಮಗಳು: ಫಲಿತಾಂಶದಲ್ಲಿ ನಿರಾಸೆ
Last Updated 11 ಆಗಸ್ಟ್ 2020, 4:10 IST
ಅಕ್ಷರ ಗಾತ್ರ

ಗದಗ: ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು ಗ್ರೇಡ್‌ ‘ಸಿ’ ಪಡೆದುಕೊಂಡಿದ್ದು, ಫಲಿತಾಂಶ ಹೆಚ್ಚಿಸಲು ಜಿಲ್ಲೆಯ ಶಿಕ್ಷಣ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಿದ್ದ ಯಾವ ಶೈಕ್ಷಣಿಕ ಕಾರ್ಯಕ್ರಮಗಳೂ ‘ಫಲ’ ನೀಡಿಲ್ಲ. ಎಸ್ಸೆಸ್ಸೆಲ್ಸಿ ಫಲಿತಾಂಶದ ಜತೆಗೆ ಶೈಕ್ಷಣಿಕ ಕಾರ್ಯಕ್ರಮಗಳ ಫಲಿತಾಂಶ ಕೂಡ ನಿರಾಸೆ ಮೂಡಿಸಿದೆ.

ಜಿಲ್ಲೆಯ ಒಟ್ಟು ಫಲಿತಾಂಶದಲ್ಲಿ ಗದಗ ನಗರ ಗ್ರೇಡ್‌ ‘ಬಿ’ ಪಡೆಯುವ ಮೂಲಕ ಉತ್ತಮ ಪ್ರಗತಿ ದಾಖಲಿಸಿದೆ. ಉಳಿದಂತೆ ಗದಗ ಗ್ರಾಮೀಣ, ಶಿರಹಟ್ಟಿ, ರೋಣ, ನರಗುಂದ, ಮುಂಡರಗಿ ತಾಲ್ಲೂಕುಗಳು ಫಲಿತಾಂಶದಲ್ಲಿ ‘ಸಿ’ ಗ್ರೇಡ್‌ ಪಡೆದುಕೊಂಡಿವೆ.

ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಾಧನೆ

ರೋಣ ತಾಲ್ಲೂಕಿನ ಇಟಗಿಯ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಫರ್ಹಾನ್‌ ಕಳಕಾಪುರ 609, ನರಗುಂದ ತಾಲ್ಲೂಕಿನ ಬೆನಕನಕೊಪ್ಪದ ಮೊರಾರ್ಜಿ ಶಾಲೆಯ ಪ್ರೀತಿ ಬಸನಗೌಡ ಶಿರೂರ 608, ಹುಲಕೋಟಿಯ ಕೆ.ಎಚ್‌.ಪಾಟೀಲ ಬಾಲಕಿಯರ ಸರ್ಕಾರಿ ಶಾಲೆಯ ಶ್ವೇತಾ ಹಿಟಬುತ್ತಿ 604 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯ ‘ಟಾಪ್‌ ತ್ರೀ’ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇವರೆಲ್ಲರೂ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು.

ಫಲ ನೀಡದ ಯೋಜನೆಗಳು

ಈ ಹಿಂದಿನ ಡಿಡಿಪಿಐ ನಾಗೂರ ಅವರು ಪರಿಚಯಿಸಿದ್ದ ಎಲ್ಲ ಕಾರ್ಯಕ್ರಮಗಳು ಉತ್ತಮವಾಗಿದ್ದರೂ, ಅವು ಉತ್ತಮ ಫಲ ಕೊಟ್ಟಿಲ್ಲ. ವರ್ಷಪೂರ್ತಿ ನಡೆದ ಮಕ್ಕಳ ಫೋನ್‌ ಇನ್‌ ಕಾರ್ಯಕ್ರಮ ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ರೂಪಿಸಿದ್ದ ‘ಓದಿನ ಮನೆ’ ಪರಿಕಲ್ಪನೆ ಕೂಡ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಮೇಲೆತ್ತಲು ನೆರವಾಗಿಲ್ಲ.

‘ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ನೋಡಿದಾಗ ಶಿಕ್ಷಕರ ತೊಡಗಿಸಿಕೊಳ್ಳುವಿಕೆ ಸರಿಯಿಲ್ಲವೆಂದು ಕಾಣಿಸುತ್ತದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರುವ ಮುತುವರ್ಜಿ ವಹಿಸಬೇಕು. ಪೂರ್ಣ ಪ್ರಮಾಣದಲ್ಲಿ ತಯಾರಾಗಿ ಶಾಲೆಗೆ ಹೋಗಬೇಕು. ಶಿಕ್ಷಕರ ಮನಃಸ್ಥಿತಿ ಬದಲಾಯಿಸಿಕೊಳ್ಳಬೇಕು. ವೃತ್ತಿಯನ್ನು ಗೌರವಿಸಬೇಕು’ ಎಂದು ಇಲ್ಲಿನ ಸಾರ್ವಜನಿಕರು ಗಂಭೀರ ಆರೋಪ ಮಾಡಿದರು.

‘ಈ ಬಾರಿಯ ಫಲಿತಾಂಶ ಖುಷಿ ಕೊಟ್ಟಿಲ್ಲ. ಗದಗ ಜಿಲ್ಲೆ ಗ್ರೇಡ್‌ ‘ಬಿ’ನಲ್ಲಿ ಇರುತ್ತದೆ ಎಂದು ಭಾವಿಸಿದ್ದೆವು. ನಮ್ಮ ನಿರೀಕ್ಷೆ ಹುಸಿಯಾಗಿದೆ. ವಾಯವ್ಯ ಕರ್ನಾಟಕದ ಜಿಲ್ಲೆಗಳಾದ ಹಾವೇರಿ, ಬೆಳಗಾವಿ, ಗದಗ, ಚಿಕ್ಕೋಡಿ, ಧಾರವಾಡ, ಬಾಗಲಕೋಟೆ, ವಿಜಯಪುರ ಬಾಟಂ ಸೆವೆನ್‌ನಲ್ಲಿ ಇವೆ. ಮುಂದಿನ ವರ್ಷ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಈಗಿನಿಂದಲೇ ಯೋಜನೆ ರೂಪಿಸಲಾಗುವುದು’ ಎಂದು ಗದಗ ಜಿಲ್ಲೆ ಡಿಡಿಪಿಐ ಜಿ.ಎಂ.ಬಸವಲಿಂಗಪ್ಪ ತಿಳಿಸಿದರು.

ಜಿಲ್ಲೆಯಲ್ಲಿ ಈ ಬಾರಿ 13,964 ಮಂದಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ರೋಣ ತಾಲ್ಲೂಕಿನ ಕನಕದಾಸ ಎಜುಕೇಷನ್‌ ಸಮಿತಿ ಪ್ರೌಢಶಾಲೆ ಶೂನ್ಯ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾಗಿದ್ದ ಏಳು ಮಂದಿ ವಿದ್ಯಾರ್ಥಿಗಳಲ್ಲಿ ಒಬ್ಬರೂ ಉತ್ತೀರ್ಣರಾಗಿಲ್ಲ.

ಕೋವಿಡ್ ಸಮಯವೆಂದು ಭಯವಾಗಲಿಲ್ಲ...

ನರಗುಂದ ತಾಲ್ಲೂಕಿನ ಬೆನಕನಕೊಪ್ಪ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಪ್ರೀತಿ ಬಸನಗೌಡ ಶಿರೂರ ಪರೀಕ್ಷೆಯಲ್ಲಿ ಶೇ 97.28 (608) ಅಂಕ ಪಡೆಯುವ ಮೂಲಕ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.

‘ಫಲಿತಾಂಶ ತಿಳಿದು ಖುಷಿಯಾಯಿತು. ಪ್ರತಿದಿನ ಆರು ತಾಸು ಓದುತ್ತಿದ್ದೆ. ಕೊರೊನಾ ಲಾಕ್‌ಡೌನ್‌ ಸಮಯವನ್ನು ಸದುಪಯೋಗ ಮಾಡಿಕೊಂಡೆ. ರಜಾ ಅವಧಿಯಲ್ಲೂ ಶಿಕ್ಷಕರು ಮಕ್ಕಳೊಂದಿಗೆ ಸಂಪರ್ಕದಲ್ಲಿ ಇದ್ದರು. ವಾಟ್ಸ್‌ಆ್ಯಪ್‌ ಗ್ರುಪ್‌ ರಚಿಸಿ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು. ಕಿರು ಪರೀಕ್ಷೆ ನಡೆಸುತ್ತಿದ್ದರು. ಪ್ರಶ್ನೆಪತ್ರಿಕೆ ಬಿಡಿಸಲು ಹೇಳುತ್ತಿದ್ದರು. ಕೋವಿಡ್‌ ಸಮಯದಲ್ಲಿ ಪರೀಕ್ಷೆ ಬರೆಯಲು ಭಯ ಅನ್ನಿಸಲಿಲ್ಲ. ಶಿಕ್ಷಕರು ಮತ್ತು ಪೋಷಕರ ಸಹಕಾರದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು’ ಎಂದು ಹೇಳಿದಳು ಪ್ರೀತಿ.

ಲಾಕ್‌ಡೌನ್‌ ರಜೆ ಅನುಕೂಲವಾಯ್ತು...

‘ಈ ಬಾರಿಯ ಪರೀಕ್ಷೆಯಲ್ಲಿ ಶೇ 96.64 (604) ಅಂಕ ಲಭಿಸಿರುವುದು ಖುಷಿ ಕೊಟ್ಟಿದೆ. ನಮ್ಮ ಶಾಲೆಯ ಶಿಕ್ಷಕರುಯಾವುದೇ ಕಾರಣಕ್ಕೂ ಪರೀಕ್ಷೆ ರದ್ದಾಗುವುದಿಲ್ಲ ಅಂತ ಮೊದಲೇ ಹೇಳಿದ್ದರು. ಹಾಗಾಗಿ, ನಿರಂತರವಾಗಿ ಅಭ್ಯಾಸ ಮಾಡುತ್ತಾ ಬಂದೆ. ಶಿಕ್ಷಕರು ಶಾಲಾ ವಿದ್ಯಾರ್ಥಿಗಳ ವಾಟ್ಸ್‌ಆ್ಯಪ್‌ ಗ್ರುಪ್‌ ರಚಿಸಿ ಪ್ರತಿದಿನ ಪ್ರಶ್ನೆಪತ್ರಿಕೆ ಬಿಡಿಸಲು ನೀಡುತ್ತಿದ್ದರು. ಪ್ರತಿ ಭಾನುವಾರ ಕಿರು ಪರೀಕ್ಷೆ ನಡೆಸುತ್ತಿದ್ದರು. ಕೊರೊನಾ ಲಾಕ್‌ಡೌನ್‌ ರಜೆಯಿಂದ ನಮ್ಮ ಓದಿಗೆ ಇನ್ನೂ ಅನುಕೂಲವಾಯಿತು. ಆತ್ಮವಿಶ್ವಾಸ ತುಂಬಿ ಪ್ರೋತ್ಸಾಹಿಸಿದ ಶಿಕ್ಷಕರಿಂದಲೇ ನಾನು ಈ ಸಾಧನೆ ಮಾಡಿದೆ’ ಎಂದು ಕೆ.ಎಚ್‌.ಪಾಟೀಲ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ವೇತಾ ಹಿಟಬುತ್ತಿ ಹೇಳಿದಳು.

ಈಕೆ ಕನ್ನಡ ಮಾಧ್ಯಮ ವಿಭಾಗದಲ್ಲಿ ಜಿಲ್ಲೆಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT