ಶುಕ್ರವಾರ, ಮೇ 20, 2022
23 °C
ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ರಸ್ತೆ ತಡೆ

ಸರ್ಕಾರದ ಧೋರಣೆಗೆ ರೈತರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಕೃಷಿ ಕೂಲಿಕಾರರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಶನಿವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತರು, ಕೃಷಿಕರು ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು. ಅವುಗಳನ್ನು ಶಾಸನಗಳನ್ನಾಗಿ ರೂಪಿಸುವ ಪ್ರಯತ್ನವನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ ಮೇಘರಾಜ ಬಾಯಿ, ‘ಬಂಡವಾಳಶಾಹಿಗಳಿಗೆ ಕೈಗೆ ಕೃಷಿ ಹಾಗೂ ಕೃಷಿ ಭೂಮಿಯನ್ನು ಸಾರಾಸಗಟಾಗಿ ಒಪ್ಪಿಸುವ ದುರುದ್ದೇಶದಿಂದ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತರುತ್ತಿದೆಯೇ ಹೊರತು ರೈತರ ಹಿತಕ್ಕಾಗಿ ಅಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಮುತ್ತು ಚೌಡರೆಡ್ಡಿ, ‘ಈ ಕಾಯ್ದೆ ಜಾರಿಯಾದರೆ ದೇಶದ ಆಹಾರ ಭದ್ರತೆ ಮತ್ತು ಸ್ವಾವಲಂಬನೆಗೆ ಧಕ್ಕೆಯಾಗುವ ಅಪಾಯವಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಮಿಕ ಮುಖಂಡರಾದ ಮಹೇಶ ಹಿರೇಮಠ, ಎಂ.ಎಸ್.ಹಡಪದ, ‘ಕೃಷಿ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯ ಭದ್ರ ಬುನಾದಿ. ಆದರೆ, ಕೈಗಾರಿಕೆಗಳು ನಮ್ಮ ದೇಶದ ಅಭಿವೃದ್ಧಿಯ ಭವಿಷ್ಯ. ಇವುಗಳನ್ನು ಖಾಸಗಿಯವರ ಒಡೆತನಕ್ಕೆ ನೀಡಲು ಕೇಂದ್ರ, ರಾಜ್ಯ ಸರ್ಕಾರ ಮುಂದಾಗಿವೆ. ಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನೆ ಮಾಡಿದರೆ ಅವರಿಗೆ ದೇಶದ್ರೋಹಿ ಪಟ್ಟ ಕಟ್ಟಿ ಬೆದರಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಕಿಡಿಕಾರಿದರು.

ರೈತರು ಜಿಲ್ಲಾಧಿಕಾರಿ ಕಚೇರಿ ಆವರಣ ಪ್ರವೇಶಿಸದಂತೆ ಪೊಲೀಸರು ತಡೆಯಲು ಪ್ರಯತ್ನ ಮಾಡಿದರು. ಇದರಿಂದ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪ್ರತಿಭಟನಾಕಾರರಿಗೆ ಜಿಲ್ಲಾಧಿಕಾರಿ ಭೇಟಿಗೆ ಅವಕಾಶ ಮಾಡಿಕೊಡಲಾಯಿತು.

ರೈತರ ಮುಖಂಡ ಬಾಲು ರಾಠೋಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 

ಮಾದೇಗೌಡ ಪಾಟೀಲ, ಮಲಕಾಜಿಗೌಡ ಸಂಕನಗೌಡ, ಹನಮಂತಪ್ಪ ಹುಲ್ಲೂರ, ಸಂಗಣ್ಣ ದಂಡಿನ, ಸಂಕಪ್ಪ ಕುರಟ್ಟಿ, ರಾಮಣ್ಣ ಕುಂಚಿಗೇರಿ, ಹನಮಂತ ಹೊಸಳ್ಳಿ, ರಾಮಣ್ಣ ಸೂಡಿ, ನೇತ್ರಾವತಿ ಲಕ್ಕುಂಡಿ, ರುದ್ರಮ್ಮ ಹಾತಲಗೇರಿ, ಮೈಲಾರಪ್ಪ ಮಾದರ, ಹನಮಂತ ತಾಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು