ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಠ್ಯದಲ್ಲಿ ವೀರಶೈವ ಪದ ಕೈಬಿಟ್ಟಿರುವುದು ಸರಿಇದೆ: ತೋಂಟದ ಸಿದ್ಧರಾಮ ಸ್ವಾಮೀಜಿ

Published 1 ಜುಲೈ 2024, 16:29 IST
Last Updated 1 ಜುಲೈ 2024, 16:29 IST
ಅಕ್ಷರ ಗಾತ್ರ

ಗದಗ: ‘ರಾಜ್ಯ ಪಠ್ಯಕ್ರಮದ 9ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ‘ವಿಶ್ವಗುರು ಬಸವಣ್ಣನವರು: ಸಾಂಸ್ಕೃತಿಕ ನಾಯಕ’ ಎಂಬ ಶೀರ್ಷಿಕೆ ಅಡಿಯಲ್ಲಿ ಬಸವಣ್ಣನವರನ್ನು ಕುರಿತು ಬರೆಯಲಾದ ಪರಿಚಯದ ವಿಷಯ ಸೂಕ್ತವಾಗಿದೆ. ಪಠ್ಯದಲ್ಲಿ ವೀರಶೈವ ಪದ ಕೈಬಿಟ್ಟಿರುವುದಕ್ಕೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯವರು ವ್ಯಕ್ತಪಡಿಸಿದ ತಕರಾರಿಗೆ ಯಾವುದೇ ಅರ್ಥವಿಲ್ಲ’ ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಶ್ರೀಗಳು, ‘ಬಸವಣ್ಣನವರು ಮಹಾಮಾನವತಾವಾದಿ,ಶ್ರೇಷ್ಠ ಸಮಾಜ ಸುಧಾರಕರು. ಇಂತಹ ಮಹಾನ್ ಪುರುಷರನ್ನು ವರ್ಣ ಮತ್ತು ವರ್ಗಭೇದವನ್ನು ಪ್ರತಿಪಾದಿಸುವ ಶೈವ-ವೀರಶೈವಕ್ಕೆ ಕಟ್ಟಿಹಾಕುವುದು ಸರಿಯಾದ ಕ್ರಮವಲ್ಲ. ಹಾಗಾಗಿ, ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಮಾಡಬಾರದು’ ಎಂದು ಕೋರಿದ್ದಾರೆ.

‘ಬಸವಣ್ಣನವರು ಐತಿಹಾಸಿಕ ವ್ಯಕ್ತಿ. ಅವರನ್ನು ಧರ್ಮಗುರು ಎಂದು ಒಪ್ಪದ, ಬಸವಣ್ಣನವರನ್ನು ತಮ್ಮ ಶಿಷ್ಯ-ಭಕ್ತ ಎಂದು ಹೇಳಿಕೊಳ್ಳುವ, ಪೌರಾಣಿಕ ಮತ್ತು ಕಾಲ್ಪನಿಕ ವ್ಯಕ್ತಿಗಳಿಂದ ತಮ್ಮ ಮೂಲವನ್ನು ಗುರುತಿಸಿಕೊಳ್ಳುವ ವ್ಯಕ್ತಿಗಳ ಅಭಿಪ್ರಾಯಕ್ಕೆ ಸರ್ಕಾರ ಮನ್ನಣೆ ನೀಡಬಾರದು. ವೀರಶೈವ ಶಿವಾಚಾರ್ಯ ಸಂಸ್ಥೆಯ ಕೋರಿಕೆಯಂತೆ ಸರ್ಕಾರ ಬಸವಣ್ಣನವರನ್ನು ಕುರಿತು ಈಗಿರುವ ಪಠ್ಯವಿಷಯವನ್ನು ಬದಲಿಸಲು ನಿರ್ಧರಿಸಿದರೆ ನಾಡಿನ ಅಸಂಖ್ಯಾತ ಬಸವಾಭಿಮಾನಿಗಳ ವಿರೋಧ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

‘ಬಸವಣ್ಣನವರು ಅರಿವನ್ನೇ ಗುರುವಾಗಿಸಿಕೊಂಡವರು. ಶರಣರ ವಚನಗಳ ಅಧ್ಯಯನದಿಂದ ಬಸವಣ್ಣನವರಿಂದಲೇ ಸಾಮಾಜಿಕ ಸಮಾನತೆ ಮತ್ತು ಆತ್ಮೋನ್ನತಿಗಾಗಿ ಇಷ್ಟಲಿಂಗದ ಪರಿಕಲ್ಪನೆ ಮೂಡಿಬಂದಿರುವುದು ಸ್ಪಷ್ಟವಾಗುತ್ತದೆ. ವಸ್ತುಸ್ಥಿತಿ ಹೀಗಿದ್ದರೂ ಈ ವಿಚಾರವನ್ನು ವಿರೋಧಿಸುವುದರ ಹಿಂದೆ ಐತಿಹಾಸಿಕವಲ್ಲದ ಪೌರಾಣಿಕ ವ್ಯಕ್ತಿಗಳನ್ನು ಬಸವಣ್ಣನವರಿಗೆ ಗುರುವಾಗಿಸುವ ತಂತ್ರಗಾರಿಕೆ ಇದೆ. ರಾಜ್ಯ ಸರ್ಕಾರ ಇಂಥ ತಂತ್ರಗಾರಿಕೆಗೆ ಮಣಿಯಬೇಕಿಲ್ಲ’ ಎಂದು ಹೇಳಿದ್ದಾರೆ. 

‘ಬಸವಣ್ಣನವರ ಕುರಿತು ಈಗಿರುವ ಪಠ್ಯದಲ್ಲಿ ಯಾವುದೇ ಅವೈಜ್ಞಾನಿಕ ಮತ್ತು ಅವೈಚಾರಿಕ ವಿಷಯಗಳಿಲ್ಲ. ಬಸವಾದಿ ಶರಣರ ಪರಂಪರೆಗೆ ವಿರುದ್ಧವಾದ ವಿಚಾರಗಳೂ ಇಲ್ಲ. ವಚನಗಳು ಹಾಗೂ ಧಾರ್ಮಿಕ ಮಹಾಪುರುಷರ ಬಗ್ಗೆ ಅಧ್ಯಯನವಿಲ್ಲದ ರಾಜಕಾರಣಿಗಳು ರಾಜಕೀಯ ಉದ್ದೇಶದಿಂದ ಏನೇನೋ ಹೇಳಿಕೆ ನೀಡುತ್ತಿರುತ್ತಾರೆ. ಅವರು ಈ ವಿಷಯದಲ್ಲಿ ಮೂಗುತೂರಿಸುವ ಆವಶ್ಯಕತೆ ಇಲ್ಲ. ಈ ಹಿನ್ನೆಲೆಯಲ್ಲಿ ಅತ್ಯಂತ ಯೋಗ್ಯರೀತಿಯಲ್ಲಿ ಪರಿಷ್ಕೃತವಾಗಿರುವ ಪಠ್ಯವನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು. ಒಂದು ವೇಳೆ ಬದಲಿಸಿದರೆ ಅದು ಇತಿಹಾಸ ಮತ್ತು ಆತ್ಮಸಾಕ್ಷಿಗೆ ವಿರೋಧವಾಗುತ್ತದೆ’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT