ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೋಂಟದಾರ್ಯ: ಕೆರೆಗೆ ಮರುಜೀವ ನೀಡಲು ಸಿದ್ಧತೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್ ಮತ್ತು ಸಂಕಲ್ಪ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ ಸಹಯೋಗ
ಲಕ್ಷ್ಮಣ ಎಚ್. ದೊಡ್ಡಮನಿ
Published 6 ಏಪ್ರಿಲ್ 2024, 6:16 IST
Last Updated 6 ಏಪ್ರಿಲ್ 2024, 6:16 IST
ಅಕ್ಷರ ಗಾತ್ರ

ಡಂಬಳ: ಹಲವು ದಶಕಗಳ ಹಿಂದೆ ತೋಂಟದಾರ್ಯ ಜಮೀನಿನಲ್ಲಿಯ ಸಣ್ಣ ಕೆರೆಯು ಜನ–ಜಾನುವಾರುಗಳಿಗೆ ಕಾಮಧೇನು ಆಗಿತ್ತು. ಅದರಲ್ಲಿ ಹೂಳು ತುಂಬಿದ್ದ ಪರಿಣಾಮವಾಗಿ ಹಾಗೂ ಜಾಲಿಕಂಟಿಗಳು ಹೆಮ್ಮರವಾಗಿ ಬೆಳೆದಿದ್ದ ಪರಿಣಾಮವಾಗಿ ಕೆರೆ ಕಣ್ಮರೆಯಾಗುವ ಹಂತಕ್ಕೆ ತಲುಪಿತ್ತು. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಫೌಂಡೇಶನ್ ‘ಗ್ರಾಮ ಸಕ್ಷಮ’ ಯೋಜನೆಯಡಿ ಮತ್ತು ಸಂಕಲ್ಪ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿಯ ಸಹಯೋಗದಲ್ಲಿ ಒಂದು ಎಕರೆ ವಿಸ್ತಾರದ ಕೆರೆಗೆ ಮರುಜೀವ ನೀಡಲಾಗುತ್ತಿದೆ.

‘ಪ್ರಾಣಿ–ಪಕ್ಷಿಗಳು, ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು ನೀರು ವ್ಯರ್ಥವಾಗದಂತೆ ತುಪ್ಪದಂತೆ ಬಳಕೆ ಮಾಡಬೇಕು’ ಎನ್ನುವ ಸಂಕಲ್ಪ ಲಿಂ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರದ್ದಾಗಿತ್ತು. ಅವರೇ ಡಂಬಳ ಗ್ರಾಮದ ತೋಂಟದಾರ್ಯ ಮಠದ ಜಮೀನಿನಲ್ಲಿ ಒಂದು ಸಣ್ಣ ಕೆರೆಯನ್ನೂ ನಿರ್ಮಾಣ ಮಾಡಿಸಿದ್ದರು. ಆದರೆ ಕೆರೆಯಲ್ಲಿ ಹೊಳು ತುಂಬಿಕೊಂಡಿತ್ತು.

‘ಫೌಂಡೇಷನ್‌ನಿಂದ ಒಂದು ಎಕರೆ ವಿಸ್ತಾರದಲ್ಲಿ ಕೆರೆ ನಿರ್ಮಾಣ ಮಾಡಲಾಗುತ್ತಿದೆ. ಅಂದಾಜು 80 ಅಡಿ ಉದ್ದ, 50 ಅಡಿ ಅಗಲ, 10 ಅಡಿ ಆಳದ ಕೆರೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ನಿತ್ಯ 15 ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಸಾಗಿಸಲಾಗುತ್ತಿದೆ’ ಎಂದು ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕೆರೆಯ ಹತ್ತಿರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿ ನಿಲಯ ಮತ್ತು ಹಿಂದುಳಿದ ವರ್ಗದ ಬಾಲಕರ ವಸತಿ ನಿಲಯಗಳಿವೆ. ಈ ಕೆರೆ ನಿರ್ಮಾಣದಿಂದ ವಸತಿ ನಿಲಯಗಳ ಕೊಳವೆಬಾವಿಗಳಿಗೆ ಜೀವ ಬರಲಿದೆ. ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಆಸರೆಯಾಗಲಿದೆ’ ಎಂದು ಜಿ.ವಿ. ಅವರು ತಿಳಿಸಿದರು.

‘ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗುತ್ತಿದೆ. ಕೆರೆ ನಿರ್ಮಾಣವಾದರೆ ಬೇಸಿಗೆ ಸಮಯದಲ್ಲಿ ನೀರಿನ ಕೊರತೆ ಆಗುವುದಿಲ್ಲ. ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಹೀಗಾಗಿ ಎಸ್‍ಬಿಐ ಫೌಂಡೇಷನ್‌ ಕಾರ್ಯ ಮಾದರಿಯಾಗಿದೆ’ ಎನ್ನುತ್ತಾರೆ ಡಂಬಳ ಗ್ರಾಮದ ಬಸವರಾಜ ಹಮ್ಮಿಗಿ ಅವರು.

ತಾಲ್ಲೂಕಿನಲ್ಲಿ 20 ಕೆರೆಗಳ ಅಭಿವೃದ್ಧಿ

‘ಎಸ್‌ಬಿಐ ಫೌಂಡೇಶನ್‌ನ ಆರ್ಥಿಕ ಸಹಾಯದಿಂದ ಸಂಕಲ್ಪ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮುಂಡರಗಿ ತಾಲ್ಲೂಕಿನಲ್ಲಿ ಒಟ್ಟು 20 ಕೆರೆಗಳ ಹೊಳೆತ್ತುವ ಕಾರ್ಯ ನಡೆಯುತ್ತಿದೆ. ಈಗಾಗಲೇ 13 ಕೆರೆಗಳ ಹೂಳೆತ್ತುವ ಕಾರ್ಯ ಪೂರ್ಣಗೊಂಡಿದ್ದು ಇನ್ನೂ 7 ಕೆರೆಗಳ ಹೊಳೆತ್ತುವ ಕಾಮಗಾರಿ ಪ್ರಗತಿಯಲ್ಲಿದೆ. ಡಂಬಳ ಗ್ರಾಮದ ಕೆರೆಗೆ ಅಂದಾಜು ₹ 2 ಲಕ್ಷ ವೆಚ್ಚ ಮಾಡಲಾಗುತ್ತದೆ’ ಎಂದು ಸಂಕಲ್ಪ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿಯ ಸಿಇಒ ಸಿಕಂದರ ಮೀರಾನಾಯಕ ತಿಳಿಸಿದ್ದಾರೆ.

ಎಸ್‍ಬಿಐ ಫೌಂಡೇಷನ್‌ ಮಾಡುವ ಕೆಲಸ ಶಾಶ್ವತವಾಗಿ ಉಳಿಯಲಿದೆ. ಗ್ರಾಮ ಪ‍ಂಚಾಯಿತಿಯಿಂದ ಅಗತ್ಯ ನೆರವು ನೀಡಲಾಗುವುದು
-ಶೀವಲೀಲಾ ದೇವಪ್ಪ ಬಂಡಿಹಾಳ, ಡಂಬಳ ಗ್ರಾಮ ಪಂಚಾಯತಿ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT