ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದಿನ ದೀವಿಗೆ ಬೆಳಗಿಸಿದ ಮಹಾಗುರು: ಅಂತರಂಗದ ಗುರುವಿಗೆ ಸಿದ್ಧರಾಮ ಶ್ರೀಗಳ ನುಡಿನಮನ

Last Updated 21 ಅಕ್ಟೋಬರ್ 2020, 3:45 IST
ಅಕ್ಷರ ಗಾತ್ರ

ಗದಗ: ‘ಪ್ರತಿಭಾವಂತರನ್ನು ಗುರುತಿಸಿ, ಅವರಿಗೆ ಯೋಗ್ಯ ಅವಕಾಶಗಳನ್ನು ಕಲ್ಪಿಸಿಕೊಡುವ ಕೈಂಕರ್ಯವನ್ನು ಜೀವನದುದ್ದಕ್ಕೂ ಮಾಡಿಕೊಂಡು ಬಂದಿದ್ದ ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ ನೇರ ನುಡಿಯ ಸಹೃದಯಿ ವ್ಯಕ್ತಿಯಾಗಿದ್ದರು’ ಎಂದು ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮಿ ನೆನಪಿಸಿಕೊಂಡರು.

ತೋಂಟದ ಸಿದ್ಧಲಿಂಗ ಸ್ವಾಮೀಜಿ ಲಿಂಗೈಕ್ಯರಾಗಿ ಎರಡು ವರ್ಷಗಳು ಕಳೆದಿದ್ದು, ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ನಡೆದ ‘ಅರಿವಿನ ಮನೆ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಶ್ರೀಗಳ ಜತೆಗಿನ ಒಡನಾಟದ ಅನುಭವವನ್ನು ಹಂಚಿಕೊಂಡರು.

‘ಅಧ್ಯಾಪಕನಾಗುವ ಗುರಿ ಇರಿಸಿಕೊಂಡಿದ್ದ ನನ್ನನ್ನು ಶ್ರೀಗಳು ನಾಗನೂರು ಮಠದ ಉತ್ತರಾಧಿಕಾರಿ ಮಾಡಲು ಸಾಕಷ್ಟು ಪ್ರಯತ್ನ ಮಾಡಿದರು. ಆದರೆ, ನನಗೆ ಯಾವುದೇ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವ ಮನಸ್ಸು ಇರಲಿಲ್ಲ. ನಿರಂತರವಾಗಿ ಅಧ್ಯಯನ ಮಾಡಿಕೊಂಡು ಮಕ್ಕಳಿಗೆ ಪಾಠ, ಪ್ರವಚನ ಮಾಡುವ ಆಸೆ ಇತ್ತು. ಹಾಗಾಗಿ, ಮಠದ ಜವಾಬ್ದಾರಿ ಹೊತ್ತುಕೊಳ್ಳಲು ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿದ್ದೆ. ಆದರೂ, ಅವರು ಉತ್ತರಾಧಿಕಾರಿ ಆಗುವಂತೆ ಒತ್ತಾಯಿಸಿದರು. ಅವರ ಒತ್ತಾಯಕ್ಕೆ ಮಣಿದು 30 ವರ್ಷಗಳ ಕಾಲ ಮಠದ ಸೇವೆ ಮಾಡಿದೆ’ ಎನ್ನುತ್ತಾರೆ ಅವರು.

‘ಜವಾಬ್ದಾರಿಗಳಿಂದ ಬಿಡುಗಡೆ ಹೊಂದಿ, ಓದು– ಬರಹದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ನಿರ್ಧಾರ ತಳೆದಿದ್ದರಿಂದ, ಅಕ್ಟೋಬರ್‌ 21ರಂದು ನಾಗನೂರು ಮಠಕ್ಕೆ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ನಡೆಯುವುದಿತ್ತು. ಆದರೆ, 2018ರ ಅ.20ರಂದು ನಾನು ಗದುಗಿಗೆ ಬರುವ ಸನ್ನಿವೇಶ ನಿರ್ಮಾಣವಾಯಿತು. ಪೂಜ್ಯರು ಲಿಂಗೈಕ್ಯರಾದರು. ಬಹಳ ವಿಚಿತ್ರವಾದ ಸನ್ನಿವೇಶಗಳು ನನ್ನ ಜೀವನದಲ್ಲಿ ನಡೆದು ಹೋದವು. ನಾನು ಯಾವುದರಿಂದ ಮುಕ್ತ ಆಗಬೇಕು ಎಂದು ಬಯಸಿದ್ದೆನೋ, ಮತ್ತೆ ಹೊಸ ಜವಾಬ್ದಾರಿಯನ್ನು ಕೊಟ್ಟು ಶ್ರೀಗಳು ಲಿಂಗೈಕ್ಯರಾದರು. ಎಲ್ಲವನ್ನೂ ನಾನು ನಡೆಸುತ್ತೇನೆ ಎಂಬ ಭಾವದಿಂದ ನಾನು ಇಲ್ಲಿಗೆ ಬರಲಿಲ್ಲ. ಅವರ ಶಕ್ತಿ, ಆಶೀರ್ವಾದದಿಂದಲೇ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಬರುತ್ತಿದೆ’ ಎಂದು ಹೇಳಿದರು.

‘ಪ್ರತಿಯೊಬ್ಬ ವ್ಯಕ್ತಿ ಕೂಡ ಅಧ್ಯಯನಶೀಲನಾಗಬೇಕು ಎಂದು ಶ್ರೀಗಳು ಹೇಳುತ್ತಿದ್ದರು. ಸ್ವಾಧ್ಯಾಯ ಸ್ವಾಮೀಜಿಗಳಿಗೆ ಅತ್ಯವಶ್ಯಕ. ಓದುವುದನ್ನು ಎಂದಿಗೂ ಬಿಡಬಾರದು ಎಂದು ಆಗ್ರಹಿಸುತ್ತಿದ್ದರು. ಓದುವುದನ್ನು ರೂಢಿಸಿಕೊಂಡರೆ ಬದುಕು ಬದಲಾಗುತ್ತದೆ ಎಂದು ಹೇಳುತ್ತಿದ್ದರು. ಮಠಕ್ಕೆ ಬಂದವರಿಗೆ ಕಲ್ಲುಸಕ್ಕರೆ ಜತೆಗೆ ಓದಲು ಪುಸ್ತಕಗಳನ್ನೂ ನೀಡುತ್ತಿದ್ದರು. ಓದುವ ಅಭಿರುಚಿಯನ್ನು ಬೆಳೆಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದರು. ಅವರಿಗೆ ಸಾಹಿತಿಗಳು, ಬರಹಗಾರರು, ಕಲಾವಿದರು, ಅಧ್ಯಯನಪ್ರೀತಿ ಇರುವವರನ್ನು ಕಂಡರೆ ತುಂಬ ಪ್ರೀತಿ ಇತ್ತು’ ಎಂದು ಹೇಳಿದರು.

ಮಹಾಮನೆ ಹೊಟ್ಟೆ ತುಂಬಿಸಿದರೆ; ಅರಿವಿನ ಮನೆ ನೆತ್ತಿ ತುಂಬಿಸುತ್ತದೆ. ಹಾಗಾಗಿ, ಶ್ರೀಗಳಿಗೆ ಅರಿವಿನ ಮನೆ ಬಹಳ ಪ್ರಿಯವಾಗಿತ್ತು. ಅರಿವೇ ಮೋಕ್ಷ. ಇಹ–ಪರದಲ್ಲೂ ಸುಖ ನೀಡುವುದು ಓದು ಮಾತ್ರ ಎಂದು ನಂಬಿ; ಅದರಂತೆ ನಡೆದ ಶ್ರೀಗಳು ಅಂದು ಹಚ್ಚಿದ ಓದಿನ ಹಣತೆ ಇಂದಿಗೂ ಕೋಟ್ಯಂತರ ಹೃದಯಗಳಲ್ಲಿ ಬೆಳಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT