ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರೆಗೆ ನೀರು: ಹಲವು ಗ್ರಾಮಗಳು ಜಲಾವೃತ

Last Updated 11 ಆಗಸ್ಟ್ 2019, 9:03 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕಿನ ತುಂಗಭದ್ರಾ ನದಿಗೆ ಶುಕ್ರವಾರ ಮಧ್ಯರಾತ್ರಿ ಹಾಗೂ ಶನಿವಾರ ಬೆಳಗಿನ ಜಾವ ಭಾರಿ ಪ್ರಮಾಣದ ನೀರು ಹರಿದು ಬಂದಿರುವುದರಿಂದ ತಾಲ್ಲೂಕಿನ ಹಳೆಸಿಂಗಟಾಲೂರ ಹಾಗೂ ವಿಠಲಾಪುರ ಗ್ರಾಮಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಗುಮ್ಮಗೋಳ ಹಾಗೂ ಬಿದರಳ್ಳಿ ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ.

ಶಾಸಕ ರಾಮಣ್ಣ ಲಮಾಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ತಹಶೀಲ್ದಾರ್ ಡಾ.ವೆಂಕಟೇಶ ನಾಯಕ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಎಸ್.ಎಸ್.ಕಲ್ಮನಿ, ಬಿಇಒ ಎಸ್.ಎನ್.ಹಳ್ಳಿಗುಡಿ ಮೊದಲಾದವರು ಶನಿವಾರ ಪ್ರವಾಹ ಪೀಡಿತ ಗ್ರಾಮಗಳಿಗೆ ತೆರಳಿ ಅಗತ್ಯ ಕ್ರಮಗಳನ್ನು ಕೈಗೊಂಡರು.

ನದಿ ನೀರು ಹಳೆಸಿಂಗಟಾಲೂರ ಗ್ರಾಮವು ನಡುಗಡ್ಡೆಯಾಗಿತ್ತು. 35ಜನರು ನೀರಿನಲ್ಲಿ ಸಿಲುಕಿಕೊಂಡಿದ್ದರು. ಅಧಿಕಾರಿಗಳು ತಕ್ಷಣ ಕೊರ್ಲಹಳ್ಳಿ ಗ್ರಾಮದಿಂದ ಎರಡು ತೆಪ್ಪಗಳನ್ನು ತರಿಸಿ ಸಂತ್ರಸ್ತರನ್ನು ರಕ್ಷಿಸಲು ತೆರಳಿದರು.

ಹಳೆಸಿಂಗಟಾಲೂರ ಪ್ರತಿ ವರ್ಷ ಪ್ರವಾಹದಿಂದ ಬಾಧಿತವಾಗುತ್ತದೆ. ಆ ಸಮಯದಲ್ಲಿ ಮನೆಗಳನ್ನು ನಿರ್ಮಾಣದ ಭರವಸೆ ಸಿಗುತ್ತದೆ. ಆದರೆ ಈವರೆಗೂ ಈಡೇರಿಲ್ಲ. ಮನೆನಿರ್ಮಿಸಿಕೊಡುವವರೆಗೂ ಗ್ರಾಮವನ್ನು ಬಿಟ್ಟು ಬರುವುದಿಲ್ಲ ಎಂದು ಗ್ರಾಮಸ್ಥರು ಹಟ ಹಿಡಿದರು.

ಒಂದು ವರ್ಷದೊಳಗೆ ಹಳೆಸಿಂಗಟಾಲೂರ ಗ್ರಾಮಸ್ಥರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಶಾಸಕ ರಾಮಣ್ಣ ಲಮಾಣಿ ಹಾಗೂ ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದರು. ನಂತರ ಗ್ರಾಮಸ್ಥರನ್ನು ಟ್ರಾಕ್ಟರ್‌ ಮೂಲಕ ಸಿಂಗಟಾಲೂರ ಗ್ರಾಮದ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಯಿತು.

ನಂತರ ಶಾಸಕರು ಹಾಗೂ ವಿವಿಧ ಅಧಿಕಾರಿಗಳು ತಾಲ್ಲೂಕಿನ ವಿಠಲಾಪುರ, ಬಿದರಳ್ಳಿ, ಗುಮ್ಮಗೋಳ ಮೊದಲಾದ ನೆರೆಪೀಡಿತ ಗ್ರಾಮಗಳಿಗೆ ತೆರಳಿದರು. ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ಗ್ರಾಮಗಳ ಸ್ಥಳಾಂತರಕ್ಕೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ನೆರೆಪೀಡಿತ ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡರು.

ಪ್ರವಾಹ ಭೀತಿಯನ್ನು ಎದುರಿಸುತ್ತಿರುವ ತಾಲ್ಲೂಕಿನ ಬಿದರಳ್ಳಿ, ಗುಮ್ಮಗೋಳ, ವಿಠಲಾಪುರ ಗ್ರಾಮಗಳು ಸೇರಿದಂತೆ ತಾಲ್ಲೂಕಿನ ಜ್ಯಾಲವಾಡಿಗೆ, ಮುಂಡವಾಡ ಮೊದಲಾದ ಗ್ರಾಮಗಳಲ್ಲಿ ಗಂಜಿ ಹಾಗೂ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ.

ತುಂಗಭದ್ರಾ ನದಿಯಲ್ಲಿ ಅಪಾರ ಪ್ರಮಾಣದ ನೀರು ಬರುತ್ತಿರುವುದರಿಂದ ತಾಲ್ಲೂಕಿನ ಕೊರ್ಲಹಳ್ಳಿ ಹಾಗೂ ಗುಮ್ಮಗೋಳ ಗ್ರಾಮಗಳ ಮುಖ್ಯ ರಸ್ತೆಗಳು ಜಲಾವೃತಗೊಂಡಿವೆ. ರಸ್ತೆ ದಾಟಲು ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುತ್ತಿದ್ದಾರೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಸಿರುವ ಭತ್ತ, ಕಬ್ಬು, ಸೂರ್ಯಕಾಂತಿ ಮೊದಲಾದ ಬೆಳೆಯು ನೀರಿನಲ್ಲಿ ಮುಳುಗಿಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT