ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯದ ಹರಿಕಾರ ದೂದಪೀರಾಂ

Published 21 ಏಪ್ರಿಲ್ 2024, 6:21 IST
Last Updated 21 ಏಪ್ರಿಲ್ 2024, 6:21 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಇತಿಹಾಸ ಪ್ರಸಿದ್ಧ ಲಕ್ಷ್ಮೇಶ್ವರದಲ್ಲಿ ಅನೇಕ ಮಹಾತ್ಮರು ಜನಿಸಿ ಹೋಗಿದ್ದಾರೆ. ಅವರಲ್ಲಿ ಭಾವೈಕ್ಯದ ಹರಿಕಾರರು ಎಂದೇ ಹೆಸರುವಾಸಿ ಆಗಿರುವ ದೂದಪೀರಾಂ ಮಹಾತ್ಮರು ಒಬ್ಬರು.

18ನೇ ಶತಮಾನದಲ್ಲಿ ಬಾಗ್ದಾದ್ ನಗರದಿಂದ ದೆಹಲಿಗೆ ಬಂದ ಸಂತ ದೂದಪೀರಾಂರು ಅಲ್ಲಿ ಜ್ಞಾನಾರ್ಜನೆ  ಮಾಡಿ, ನಂತರ ಅಲ್ಲಿಂದ ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬರುತ್ತಾರೆ. ಒಮ್ಮೆ ಲಕ್ಷ್ಮೇಶ್ವರದ ನಿವಾಸಿಯೊಬ್ಬರು ಹುಬ್ಬಳ್ಳಿಗೆ ಹೋದಾಗ ಇವರನ್ನು ಭೇಟಿ ಆಗಿ ದರ್ಶನಾಶೀರ್ವಾದ ಪಡೆದು ಅವರ ಆಧ್ಯಾತ್ಮ ಶಕ್ತಿಗೆ ಮನಸೋಲುತ್ತಾರೆ. ಮತ್ತು ಲಕ್ಷ್ಮೇಶ್ವರಕ್ಕೆ ಬರುವಂತೆ ವಿನಂತಿಸಿಕೊಳ್ಳುತ್ತಾರೆ. ಭಕ್ತನ ಮನವಿಗೆ ಸ್ಪಂದಿಸಿ ದೂದಪೀರಾಂರವರು ಲಕ್ಷ್ಮೇಶ್ವರಕ್ಕೆ ಬರುತ್ತಾರೆ.

ಪಟ್ಟಣಕ್ಕೆ ಬಂದ ನಂತರ ಅವರು ಇಲ್ಲಿನ ಜನರಲ್ಲಿನ ಅಜ್ಞಾನ, ಅಂಧಕಾರಗಳನ್ನು ಹೊಡೆದೋಡಿಸುವ ಸಲುವಾಗಿ ಪ್ರತಿದಿನ ಉಪನ್ಯಾಸಗಳನ್ನು ಮಾಡುತ್ತಾರೆ. ಜನರ ಮೈಮೇಲೆ ಬರುತ್ತಿದ್ದ ದೆವ್ವ, ಭೂತಗಳನ್ನು ತಮ್ಮ ತಪಸ್ಸಿನ ಶಕ್ತಿಯಿಂದ ದೂರ ಮಾಡಿ ಅವರನ್ನು ಉದ್ಧಾರ ಮಾಡಿದರು. ಇವರ ಬೋಧನೆಗೆ ಮನಸೋತ ಸಾವಿರಾರು ಜನರು ಇವರ ಶಿಷ್ಯರಾಗುತ್ತಾರೆ. ಹಿಂದೂ-ಮುಸ್ಲಿಂ ಎನ್ನದೇ ಎಲ್ಲ ಜಾತಿ ಜನರು ದೂದಪೀರಾಂ ಅವರ ಹತ್ತಿರಕ್ಕೆ ಬಂದು ಗುಣ ಹೊಂದುತ್ತಾರೆ. ಲಕ್ಷ್ಮೇಶ್ವರದಲ್ಲಿಯೇ ವಿಧಿವಶರಾದ ನಂತರ ಅವರಿಗಾಗಿ ನಂತರ ಶಿಷ್ಯರು ಗದ್ದುಗೆ ನಿರ್ಮಿಸಿ, ಅದೇ ಇಂದು ದೂದಪೀರಾಂ ದರ್ಗಾ ಎಂದು ಪ್ರಸಿದ್ಧಿ ಪಡೆದಿದೆ.

ಉರುಸ್ ಇಂದಿನಿಂದ ಏ. 21 ಮತ್ತು 22ರಂದು ದೂದಪೀರಾಂ ಅವರ 135ನೇ ಉರುಸ್ ಕಾರ್ಯಕ್ರಮ ಜರುಗಲಿದೆ. ಲೋಕಸಭಾ ಚುನಾವಣೆ ಕಾರಣ ಸರಳವಾಗಿ ಉರುಸ್ ಆಚರಿಸಲು ದರ್ಗಾ ಸಮಿತಿ ನಿರ್ಧರಿಸಿದೆ. 21ರಂದು ಗಂಧ (ಸಂದಲ್ ಮುಬಾರಕ್) ಮತ್ತು 22ರಂದು ಉರುಸು ಮುಭಾರಕ್ ಜರುಗಲಿದೆ. ದೂದಪೀರಾಂ ದರ್ಗಾ ಕಮೀಟಿ ಹಾಗೂ ಅಂಜುಮನ್ ಎ-ಇಸ್ಲಾಂ ಕಮೀಟಿ ಸದಸ್ಯರು ಸಿದ್ಧತೆ ನಡೆಸಿದ್ದಾರೆ. ದರ್ಗಾಕ್ಕೆ ಬರುವ ಭಕ್ತರಿಗಾಗಿ ಸಮಿತಿಯವರು ಯಾತ್ರಿ ನಿವಾಸ ಕಟ್ಟಿಸಿದ್ದಾರೆ. ಅಲ್ಲಿ ನೀರಿನ ವ್ಯವಸ್ಥೆಯೂ ಇದೆ. ಜನರ ವಸತಿಗಾಗಿ ಶಾದಿಮಹಲ್‍ನಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಸಧ್ಯ ದರ್ಗಾದ ಪಕ್ಕದಲ್ಲಿಯೇ ಮತ್ತೊಂದು ಯಾತ್ರಿ ನಿವಾಸ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಹಿಂದೂ ಮುಸ್ಲಿಂರ ಸಹಕಾರದಿಂದ ಉರುಸ್ ನಡೆಯುತ್ತಿದ್ದು ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಅಧಿಕಗೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT