ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಶೂನ್ಯ: ಎರಡೂ ಪಕ್ಷದವರಿಂದ ಲೂಟಿ

ರಾಷ್ಟ್ರೀಯ ಪಕ್ಷಗಳ ವಿರುದ್ಧ ಜೆಡಿಎಸ್‌ ಮುಖಂಡ ವೆಂಕನಗೌಡ ಗೋವಿಂದಗೌಡ್ರ ಆರೋಪ
Last Updated 28 ಜನವರಿ 2023, 6:28 IST
ಅಕ್ಷರ ಗಾತ್ರ

ಗದಗ: ‘ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿವೆ. ಜಿಲ್ಲೆಯ ಅಭಿವೃದ್ಧಿಗೆ ಎರಡೂ ಪಕ್ಷಗಳ ನಾಯಕರ ಕೊಡುಗೆ ಶೂನ್ಯ. ಎರಡೂ ಪಕ್ಷಗಳ ನಾಯಕರು ಹಣವನ್ನು ಲೂಟಿ ಮಾಡಿದ್ದಾರೆ. ಹೊರಗಿನಿಂದ ಬಂದವರಿಗೆ ಗದಗ ಒಂದು ಹಳ್ಳಿಯಂತೆ ಗೋಚರಿಸುತ್ತದೆ’ ಎಂದು ಜೆಡಿಎಸ್‌ ಮುಖಂಡ ಹಾಗೂ ಗದಗ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ವೆಂಕನಗೌಡ ಗೋವಿಂದಗೌಡ್ರ ಹರಿಹಾಯ್ದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಗದಗ ಜಿಲ್ಲೆ ಅಭಿವೃದ್ಧಿಗೆ ಅಷ್ಟು ಸಾವಿರ ಕೋಟಿ ಹಣ ತಂದಿದ್ದೇವೆ, ಬಿಡುಗಡೆ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ರಾಷ್ಟ್ರೀಯ ಪಕ್ಷಗಳ ಮುಖಂಡರು, ಜಿಲ್ಲೆಯ ಯಾವ ರಸ್ತೆಗಳು, ಒಳಚರಂಡಿ ವ್ಯವಸ್ಥೆ, ನೀರಾವರಿ ಯೋಜನೆಗಳು ಸುಧಾರಿಸಿವೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.

‘ಹೊಂಬಳ ನಾಕಾ ಬಳಿಯ ಮೇಲ್ಸೇತುವೆ ಆರು ವರ್ಷವಾದರೂ ಪೂರ್ಣಗೊಳ್ಳದ ಕಾರಣ ಜನರು ತೊಂದರೆಗೊಳಗಾಗಿದ್ದಾರೆ. ಬಿಜೆಪಿಗರು ಗದಗ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ನೂರಾರು ಕೋಟಿ ಅನುದಾನ ಕೊಟ್ಟಿದ್ದಾರೆ ಎಂದು ಹೇಳಿ, ನಗರದಲ್ಲಿ ಸಮಾರಂಭ ಮಾಡಿದರು. ಅವರು ಈವರೆಗೆ ಈ ಬಗ್ಗೆ ಫ್ಲೆಕ್ಸ್, ಬ್ಯಾನರ್‌ಗೆ ಖರ್ಚು ಮಾಡಿದ ಹಣದಲ್ಲಿ ಹೊಸ ಬಸ್ ನಿಲ್ದಾಣದ ರಸ್ತೆ ಸುಧಾರಿಸುತ್ತಿತ್ತು’ ಎಂದು ವ್ಯಂಗ್ಯವಾಡಿದರು.

‘ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಜನತೆಗೆ ನ್ಯಾಯ ಸಿಕ್ಕಿಲ್ಲ. ಇದರಿಂದಾಗಿ ಜನ ಬದಲಾವಣೆ ಬಯಸಿದ್ದು, ರಾಜ್ಯದಲ್ಲಿ ಜೆಡಿಎಸ್ 123 ಸ್ಥಾನಗಳ ಗುರಿ ತಲುಪಿ, ಎಚ್‌.ಡಿ.ಕುಮಾರಸ್ವಾಮಿ ಅವರು ಮತ್ತೇ ಮುಖ್ಯಮಂತ್ರಿಯಾಗುವುದು ನಿಶ್ಚಿತ’ ಎಂದು ಹೇಳಿದರು.

‘ಜಿಲ್ಲೆಯನ್ನು ಪಕ್ಷ ಸಂಘಟನೆಯನ್ನು ಚುರುಕುಗೊಳಿಸಲು ವಿವಿಧ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ. ಗದಗ ಕ್ಷೇತ್ರದಲ್ಲಿ ಕನಿಷ್ಠ 40 ಸಾವಿರ ಜನರನ್ನು ಪಕ್ಷಕ್ಕೆ ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ. ಈ ಸಂಬಂಧ ಶೀಘ್ರದಲ್ಲೇ ಅಭಿಯಾನ ಆರಂಭಿಸಲಾಗುವುದು. ಗದಗ ಕ್ಷೇತ್ರದಲ್ಲಿ ಜೆಡಿಎಸ್ ಅನ್ನು ಗೆಲ್ಲಿಸಿದರೆ, ಜನರೊಂದಿಗೆ ಚರ್ಚಿಸಿ, ಅಭಿಪ್ರಾಯ ಸಂಗ್ರಹಸಿ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆ ರೂಪಿಸಲಾಗುವುದು’ ಎಂದು ಭರವಸೆ ನೀಡಿದರು.

‘ಗದಗ ನಗರದಲ್ಲಿ ಜಿಸಿಎಲ್‌ ಶುರುವಾದರೆ ಚುನಾವಣೆ ಸಮೀಸುತ್ತಿದೆ ಅಂತಲೇ ಅರ್ಥ. ಅದೇರೀತಿ, ಕಾಂಗ್ರೆಸ್‌ನವರು ವಿವಿಧ ಕ್ರೀಡೆಗಳನ್ನು ಆಡಿಸುತ್ತಾರೆ. ಕ್ರೀಡೆ ಎಂಬುದು ಎರಡು ಪಕ್ಷಗಳ ಚುನಾವಣಾ ಆಟವಾಗಿದೆಯೇ ಹೊರತು, ನೈಜವಾಗಿ ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿಲ್ಲ’ ಎಂದು ದೂಷಿಸಿದರು.

‘ಜನರೇ ಹೋಗಿ ಅನಿಲ್‌ ಮೆಣಸಿನಕಾಯಿ ಅವರನ್ನು ಗದಗ ಕ್ಷೇತ್ರಕ್ಕೆ ಕರೆದುಕೊಂಡು ಬಂದಿದ್ದಾರಂತೆ. ಹಾಗಾದರೆ, ಬಿಜೆಪಿಯಲ್ಲಿ ಅಭ್ಯರ್ಥಿಗಳಿಗೆ ಅಷ್ಟೊಂದು ಬರವಿತ್ತೇ? ಚುನಾವಣೆಗೆ ನಿಲ್ಲಿಸಲು ಜನ ಅಲ್ಲಿಗೆ ಹೋಗಿ ಬರುವುದಾದರೆ, ಅವರನ್ನು ಗೆಲ್ಲಿಸಿದ ನಂತರ ಹುಡುಕುವುದಾದರೂ ಹೇಗೆ’ ಎಂದು ಲೇವಡಿ ಮಾಡಿದರು.

‘ಗದಗ ಮತಕ್ಷೇತ್ರದಿಂದ ಗೆದ್ದು ಹೋದವರೂ ಬೆಂಗಳೂರು ಸೇರುತ್ತಾರೆ. ಸೋತವರೂ ಬೆಂಗಳೂರು ಸೇರುತ್ತಾರೆ. ಒಬ್ಬರು ಇಂಪೋರ್ಟ್, ಮತ್ತೊಬ್ಬರು ಎಕ್ಸ್‌ಪೋರ್ಟ್. ಇವರ ನಡುವೆ ಜನ ತಮ್ಮ ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಬೇಕು’ ಎಂದು ಪ್ರಶ್ನಿಸಿದರು.

ಚುನಾವಣೆ ಸಂದರ್ಭದಲ್ಲಿ ಸಕ್ರಿಯವಾಗಿರುವ ಸೇವಾ ತಂಡಗಳು ಅವಳಿ ನಗರದ ಜನತೆಗೆ ನಗರಸಭೆಯಲ್ಲಿ ಸಕಾಲದಲ್ಲಿ ಫಾರಂ-3, ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಸಿಗುವಂತೆಯೂ ಕೆಲಸ ಮಾಡಲಿ ಎಂದು ಹೇಳಿದರು.

ಜೆಡಿಎಸ್ ಗದಗ ತಾಲ್ಲೂಕು ಅಧ್ಯಕ್ಷ ಬಸವರಾಜ ಅಪ್ಪಣ್ಣವರ, ಪಕ್ಷದ ಜಿಲ್ಲಾ ವಕ್ತಾರ ರಮೇಶ ಕಲಬುರಗಿ, ಮುಖಂಡರಾದ ಫ್ರಾನ್ಸಿಸ್ ಕನ್ಹಯ್ಯ, ಎಲ್.ಆರ್.ಕಿತ್ತೂರ, ಹಾಜಿಅಲಿ ಕೊಪ್ಪಳ, ಶಿರಾಜ ಕರಡಿ, ಪ್ರಫುಲ್ ಪುಣೇಕರ ಇದ್ದರು.

ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಜನಪರ ಚಿಂತನೆ ಹೊಂದಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು
ವೆಂಕನಗೌಡ ಗೋವಿಂದಗೌಡ್ರ, ಜೆಡಿಎಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT