ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ: ಮೂಲ ಸೌಲಭ್ಯ ವಂಚಿತ ಗ್ರಾಮಗಳು

ಸಮಸ್ಯೆಗಳ ತಾಣವಾದ ಅಡರಕಟ್ಟಿ ಗ್ರಾ.ಪಂ ವ್ಯಾಪ್ತಿಯ ಲಂಬಾಣಿ ತಾಂಡಾ
Published 17 ಏಪ್ರಿಲ್ 2024, 4:59 IST
Last Updated 17 ಏಪ್ರಿಲ್ 2024, 4:59 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ತಾಲ್ಲೂಕಿನ ಅಡರಕಟ್ಟಿ ಗ್ರಾಮ ಪಂಚಾಯ್ತಿಯು ಮೂಲ ಸೌಲಭ್ಯಗಳಿಲ್ಲದೆ ನರಳುತ್ತಿದೆ.

ಪಂಚಾಯ್ತಿ ವ್ಯಾಪ್ತಿಗೆ ಅಡರಕಟ್ಟಿ, ಕೊಂಡಿಕೊಪ್ಪ ಮತ್ತು ಹರದಗಟ್ಟಿ ಗ್ರಾಮಗಳು ಒಳಪಡುತ್ತವೆ. ಅಡರಕಟ್ಟಿ ಗ್ರಾಮದಲ್ಲಿ ಬಹುತೇಕ ಎಲ್ಲ ಕಡೆ ಸಿಸಿ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸಲಾಗಿದೆ. ಆದರೆ ಇದೇ ಪಂಚಾಯ್ತಿ ವ್ಯಾಪ್ತಿಯ ಕೊಂಡಿಕೊಪ್ಪ ಮತ್ತು ಹರದಗಟ್ಟಿ ಗ್ರಾಮಗಳು ಮಾತ್ರ ಹಲವು ಸಮಸ್ಯೆಗಳಿಂದ ಮುಕ್ತವಾಗಿಲ್ಲ.

ಲಕ್ಷ್ಮೇಶ್ವರ ಕಡೆಯಿಂದ ಮಂಜಲಾಪುರ ಮೂಲಕ ಅಡರಕಟ್ಟಿ ಗ್ರಾಮದ ಹೊರವಲಯದಲ್ಲಿ ಹರಿಯುವ ಲಂಡಿಹಳ್ಳ ನೂರಾರು ಎಕರೆ ಬಿತ್ತನೆ ಭೂಮಿಯನ್ನು ಆಪೋಶನ ಪಡೆದಿದೆ. ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುತ್ತದೆ. ಈ ಸಮಯದಲ್ಲಿ ನೀರು ರೈತರ ಹೊಲಗಳಿಗೆ ನುಗ್ಗಿ ಅನಾಹುತ ಸೃಷ್ಟಿಸುತ್ತದೆ. ಹಳ್ಳದ ನೀರಿನಿಂದಾಗಿ ನೂರಾರು ಎಕರೆ ಭೂಮಿ ಸಂಪೂರ್ಣ ಜವುಳು ಬಿದ್ದಿದ್ದು ರೈತರಿಗೆ ಭಾರೀ ನಷ್ಟ ಉಂಟಾಗಿದೆ.

ತಿಪ್ಪೆಗಳ ದರ್ಶನ: ಅಡರಕಟ್ಟಿ ಗ್ರಾಮದಲ್ಲಿ ಹಾಯ್ದು ಹೋಗಿರುವ ಲಕ್ಷ್ಮೇಶ್ವರ ರಸ್ತೆಗುಂಟ ತಿಪ್ಪೆಗಳನ್ನು ಹಾಕಲಾಗಿದೆ. ಸದಾಕಾಲ ತಿಪ್ಪೆಗಳಿಂದ ಗಬ್ಬು ವಾಸನೆ ಬರುತ್ತಲೇ ಇರುತ್ತದೆ. ಇದು ಮಳೆಗಾಲದಲ್ಲಿ ಮತ್ತಷ್ಟು ಹೆಚ್ಚಾಗುತ್ತದೆ. ಅಲ್ಲದೆ ಈ ಭಾಗದಲ್ಲಿ ಬಯಲು ಶೌಚ ಪದ್ಧತಿ ಇನ್ನೂ ಇದೆ. ಇದರಿಂದಾಗಿ ಯಾವಾಗಲೂ ಹೊಲಸು ವಾಸನೆ ಇರುತ್ತದೆ.

ಕೊಂಡಿಕೊಪ್ಪ ಲಂಬಾಣಿ ತಾಂಡಾ ಮಾತ್ರ ಹಲವು ಸಮಸ್ಯೆಗಳ ಆಗರವಾಗಿದೆ. ಇಡೀ ತಾಂಡಾದಲ್ಲಿ ಎಲ್ಲಿ ಹುಡುಕಿದರೂ ಒಂದಿಂಚು ಸುಸಜ್ಜಿತ ರಸ್ತೆಯಾಗಲಿ, ಚರಂಡಿಯಾಗಲಿ ಕಾಣ ಸಿಗುವುದಿಲ್ಲ. ಮಳೆಗಾಲದಲ್ಲಿ ಇಡೀ ತಾಂಡಾದಲ್ಲಿ ನೀರು ತುಂಬಿಕೊಳ್ಳುತ್ತದೆ. ತಾಂಡಾದಿಂದ ಕೊಂಡಿಕೊಪ್ಪ ಊರಿಗೆ ಹೋಗುವ ಪ್ರಮುಖ ರಸ್ತೆ ಸಂಪೂರ್ಣ ಹಾಳಾಗಿದ್ದು ತಾಂಡಾದ ಮಕ್ಕಳಿಗೆ ಗ್ರಾಮದಲ್ಲಿನ ಸರ್ಕಾರಿ ಶಾಲೆಗೆ ಹೋಗಿ ಬರಲು ತೊಂದರೆ ಆಗುತ್ತಿದೆ.

ಇಲ್ಲಿ ರಸ್ತೆ ಮತ್ತು ಚರಂಡಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ’ ಎಂದು ತಾಂಡಾದ ನಿವಾಸಿ ಮಂಜುನಾಥ ಲಮಾಣಿ ಹೇಳಿದರು.

ಬಂದ್ ಆಗಿವೆ ಶುದ್ಧ ನೀರಿನ ಘಟಕಗಳು: ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅವುಗಳಲ್ಲಿ ಎರಡು ಬಂದ್ ಆಗಿವೆ. ಹೀಗಾಗಿ ಶುದ್ಧ ನೀರಿಗೆ ಆಗಾಗ ತತ್ವಾರ ಉಂಟಾಗುತ್ತದೆ.

ಪಂಚಾಯ್ತಿ ವ್ಯಾಪ್ತಿಯ ಹರದಗಟ್ಟಿ ಗ್ರಾಮದಲ್ಲಿನ ಚರಂಡಿಗಳು ಕೊಳಚೆಯಿಂದ ತುಂಬಿಕೊಂಡಿವೆ. ಗಲೀಜಿನಿಂದಾಗಿ ಗ್ರಾಮದಲ್ಲಿ ಸೊಳ್ಳೆಗಳ ಕಾಟವೂ ವಿಪರೀತವಾಗುತ್ತಿದೆ.

‘ನರೇಗಾ ಮತ್ತು ಹದಿನೈದನೇ ಹಣಕಾಸಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ನಿಂಗಪ್ಪ ಪ್ಯಾಟಿ ಹೇಳಿದರು.

‘ರಸ್ತೆ ಬದಿಯಲ್ಲಿ ತಿಪ್ಪೆ ಹಾಕುವವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಆದಷ್ಟು ಬೇಗನೇ ಅಲ್ಲಿಂದ ತಿಪ್ಪೆ ತೆರವುಗೊಳಿಸಲಾಗುವುದು’ ಎಂದು ಪಿಡಿಒ ಸವಿತಾ ಸೋಮಣ್ಣವರ ತಿಳಿಸಿದರು.

ಬಂದ್ ಆಗಿರುವ ಅಡರಕಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶುದ್ಧ ನೀರಿನ ಘಟಕ
ಬಂದ್ ಆಗಿರುವ ಅಡರಕಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶುದ್ಧ ನೀರಿನ ಘಟಕ
ಎರಡು ದಿನಗಳ ಹಿಂದೆ ಸುರಿದ ಮಳೆಗೆ ಲಕ್ಷ್ಮೇಶ್ವರ ತಾಲ್ಲೂಕು ಅಡರಕಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಂಡಿಕೊಪ್ಪ ತಾಂಡಾದಲ್ಲಿ ನಿಂತಿದ್ದ ಮಳೆ ನೀರು
ಎರಡು ದಿನಗಳ ಹಿಂದೆ ಸುರಿದ ಮಳೆಗೆ ಲಕ್ಷ್ಮೇಶ್ವರ ತಾಲ್ಲೂಕು ಅಡರಕಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಂಡಿಕೊಪ್ಪ ತಾಂಡಾದಲ್ಲಿ ನಿಂತಿದ್ದ ಮಳೆ ನೀರು

ಹಳ್ಳದ ನೀರು ಹೊಲಗಳಿಗೆ ನುಗ್ಗದಂತೆ ವ್ಯವಸ್ಥೆ ಮಾಡುವಂತೆ ಗ್ರಾಮ ಪಂಚಾಯ್ತಿ ಪುರಸಭೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಹಾಗೆಯೇ ಇದೆ

–ಕುಮಾರ ಚಕ್ರಸಾಲಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ

ನಮ್ಮ ಪಂಚಾಯ್ತಿ ಸಣ್ಣದು. ಸರ್ಕಾರದಿಂದ ಅನುದಾನ ಬಂದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತೇವೆ -ಪ್ರೇಮಕ್ಕ ಮಾನಪ್ಪ ಲಮಾಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT