ಬಸವರಾಜ. ಹಲಕುರ್ಕಿ
ನರಗುಂದ: ರಾಜ್ಯದಲ್ಲಿ ಬೆರಳೆಣೆಕೆಯ 16 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪಟ್ಟಣದ ಸರ್ಕಾರಿ ಎಂಜನಿಯರಿಂಗ್ ಕಾಲೇಜು ಕೂಡಾ ಒಂದು ಬೃಹತ್ ಕಟ್ಟಡ ಹೊಂದಿದ್ದರೂ ಮೂಲಸೌಕರ್ಯ ಸೇರಿದಂತೆ ಶೈಕ್ಷಣಿಕ ಸಮಸ್ಯೆಗಳ ಮಧ್ಯೆ ಕುಂಟುತ್ತಾ ಸಾಗಿದೆ.
2022ರಲ್ಲಿ ಉದ್ಘಾಟನೆಗೊಂಡ ಈ ಕಟ್ಟಡ ಕಳೆದ ಶೈಕ್ಷಣಿಕ ವರ್ಷದಿಂದ ಅಧಿಕೃತವಾಗಿ ಆರಂಭಗೊಂಡಿದೆ. ಆದರೆ ಎರಡು ಕೋರ್ಸ್‌ಗಳು ಮಾತ್ರ ಆರಂಭವಾಗಿದ್ದು, 87 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಹೆಚ್ಚು ಕೋರ್ಸ್ ಆಶರಂಭವಾದರೆ ಇನ್ನೂ ಹೆಚ್ಚು ಮಕ್ಕಳು ಇಲ್ಲಿ ಅವಕಾಶ ಪಡೆಯಬಹುದು.
25 ಎಕರೆ ಜಾಗೆ: ಪಟ್ಟಣದ ರೋಣ ರಸ್ತೆಯಲ್ಲಿ 3 ಕಿ.ಮೀ ದೂರದಲ್ಲಿ 25 ಎಕರೆ ಜಾಗ ಖರೀದಿಸಿ ಕಾಲೇಜು ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿತ್ತು. 2017 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಾಗಿದ್ದ ಶಾಸಕ ಬಿ.ಆರ್.ಯಾವಗಲ್ ಅವ ಒತ್ತಾಸೆಯಂತೆ ಉತ್ತರ ಕರ್ನಾಟಕದ ಅದರಲ್ಲಿಯೂ ಗದಗ ಜಿಲ್ಲೆಯ ನರಗುಂದಕ್ಕೆ ಕಾಲೇಜು ತಂದಿದ್ದರು. ಮೊದಲ ಹಂತದಲ್ಲಿ ₹ 58 ಕೋಟಿ ಬಿಡುಗಡೆಯಾಯಿತು.
ನಂತರ ಶಾಸಕರಾದ ಸಿ.ಸಿ.ಪಾಟೀಲ ಅವರ ನಿರಂತರ ಕಾಳಜಿಯಿಂದ ಉತ್ತಮ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಐದು ವರ್ಷದ ನಂತರ ಕಟ್ಟಡ ಉದ್ಘಾಟನೆಗೊಂಡಿತು. .ಆರಂಭದಲ್ಲಿ ಆರ್ಟೀಫಿಸಿಯಲ್ ಇಂಟಿಲಿಜೆನ್ಸ್ ಮತ್ತು ಡಾಟಾ ಸೈನ್ಸ್, ಕಂಪ್ಯೂಟರ್ ಸೈನ್ಸ್ ಕೋರ್ಸ್ ಆರಂಭಗೊಂಡು ತಲಾ 60 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿತ್ತು.
ಅದರಲ್ಲಿ ಒಟ್ಟು 87 ವಿದ್ಯಾರ್ಥಿಗಳು ಪ್ರವೇಶ ಪಡೆದರು. ಈಗ ಮೂರನೇ ಸೆಮಿಸ್ಟರ್ ಗೆ ಅದೇ ವಿದ್ಯಾರ್ಥಿಗಳು ಮುಂದುವರೆಯುತ್ತಾರೆ. ಆದರೆ ಹೊಸ ವಿದ್ಯಾರ್ಥಿಗಳು ಬಂದರೂ ಒಟ್ಟು 240 ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಆದರೆ ಬೃಹತ್ ಕಟ್ಟಡ ಹಾಗೂ ಸೌಲಭ್ಯ ಇದ್ದರೂ ಹೊಸ, ಹೊಸ ಕೋರ್ಸ್‌ಗಳು ಇರದಿರುವುದು ಕಲಿಯಬೇಕು ಎಂಬ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ಇಲ್ಲದಂತಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
ವಸತಿ ನಿಲಯ ಕಟ್ಟಡ ಹೆಚ್ಚಲಿ: ಈಗ ಎರಡು ವಸತಿ ನಿಲಯಗಳ ಕಟ್ಟಡಗಳಿವೆ. ಅವುಗಳಲ್ಲಿ ತಲಾ 72 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಪಡೆಯಲು ಅವಕಾಶ ಇದೆ. ಆದ್ದರಿಂದ ಮತ್ತೇ ಹೊಸ ವಸತಿ ನಿಲಯಗಳ ಕಟ್ಟಡ ನಿರ್ಮಾಣಗೊಳ್ಳಬೇಕಿದೆ. ಆಗ ಎಲ್ಲ ಕಾಲೇಜುಗಳಂತೆ ಉತ್ತಮ ಕಾಲೇಜು ಆಗುವುದರಲ್ಲಿ ಸಂದೇಹವಿಲ್ಲ.
‘25 ಎಕರೆ ವಿಶಾಲ ಪ್ರದೇಶ ಇರುವುದರಿಂದ 1 ಸಾವಿರ ಗಿಡಗಳನ್ನು ಅರಣ್ಯ ಇಲಾಖೆ, ಮತ್ತೊಂದು ಸಾವಿರ ಗಿಡಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಬೆಳೆಸಲಾಗುತ್ತಿದೆ. ಇದರಿಂದ ಕಾಲೇಜಿನ ಆವರಣ ಹಸಿರುಮಯವಾಗಿದೆ. ದೊಡ್ಡ ಕಟ್ಟಡವಿದ್ದರೂ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲದೇ ಬಿಕೋ ಎನ್ನುತ್ತದೆ’ ಎನ್ನುತ್ತಾರೆ ಎಂಜಿನಿಯರಿಂಗ್ ವಿದ್ಯಾರ್ಥಿ ಕಿರಣ.ಪಿ.
ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಪ್ರವೇಶ ಶುಲ್ಕ ಕಡಿಮೆ, ಶಿಷ್ಯವೇತನಕ್ಕೆ ಅವಕಾಶ ಅರಣ್ಯ ಇಲಾಖೆಯಿಂದ ಹಸರೀಕರಣಕ್ಕೆ ಸಹಕಾರ
ಕಾಲೇಜು ಆರಂಭವಾಗಿ ಒಂದು ವರ್ಷವಾಗಿದೆ. ಈಗ ಎರಡು ಕೋರ್ಸ್ ಲಭ್ಯ ಇವೆ. ಇನ್ನೂರೆಡು ಕೋರ್ಸ್ ಆರಂಭಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಹೆಚ್ಚಿನ ಕೋರ್ಸ್ ಬಂದರೆ ಅನುಕೂಲ ವಾಗಲಿದೆ'ಸಿದ್ದನಗೌಡ ಪಾಟೀಲ ಪ್ರಾಚಾರ್ಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್
ಪಟ್ಟಣಕ್ಕೆ ದೂರ ಪಟ್ಟಣಕ್ಕೆ 3 ಕಿ.ಮೀ ದೂರದ ರೋಣ ರಸ್ತೆಯಲ್ಲಿ ಎಂಜಿನಿಯರಿಂಗ್ ಕಾಲೇಜು ಇದ್ದು ಯಾವುದೇ ಜನ ವಸತಿ ಅಂಗಡಿ ಮಾರುಕಟ್ಟೆ ಸುಳಿವು ಇಲ್ಲ. ಇದರಿಂದ ವಿದ್ಯಾರ್ಥಿಗಳು ಸಣ್ಣ ಸಾಮಗ್ರಿ ಪಡೆಯಲು ಮೂರು ಕಿ.ಮೀ ಬರಬೇಕು. ವಿದ್ಯಾರ್ಥಿನಿಯರು ತೀವ್ರ ಪರದಾಡಬೇಕಿದೆ. ಇಲ್ಲವಾದರೇ ರೋಣ ಮಾರ್ಗವಾಗಿ ತೆರಳುವ ಬಸ್‌ಗಳನ್ನೇ ಕಾಯಬೇಕು. ರೋಣ ರಸ್ತೆಯಿಂದ ಕಾಲೇಜಿಗೆ ಮತ್ತೇ 300 ಮೀಟರ್ ನಡೆದುಕೊಂಡು ಹೋಗಬೇಕು. ಆದರೇ ಆ ರಸ್ತೆ ಸಂಪೂರ್ಣ ಕೆಸರು ಮಯವಾಗಿದೆ. ಮಳೆ ಬಂತೆಂದರೆ ಅಯೋಮಯ ಎಂಬಂತಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಅತಿಥಿ ಉಪನ್ಯಾಸಕರೇ ಆಧಾರ. ಪ್ರಾಚಾರ್ಯರೊಬ್ಬರೇ ಸರ್ಕಾರದಿಂದ ನೇಮಕಗೊಂಡ ಪೂರ್ಣಕಾಲಿಕ ಸಿಬ್ಬಂದಿಯಾಗಿದ್ದಾರೆ. ಕಳೆದ ವರ್ಷದಿಂದ 8 ಜನ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ವರ್ಷ ಮತ್ತೆ 10 ಜನ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಇದರಿಂದ ನೀರಿಕ್ಷಿತ ಪಾಠ ಪ್ರವಚನ ಪಡೆಯಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.