‘ಅಸಾಂಕ್ರಾಮಿಕ ರೋಗಗಳ ಕುರಿತಾಗಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಆರೋಗ್ಯ ಇಲಾಖೆಯಿಂದ ಬಿರುಸಿನಿಂದ ನಡೆಯುತ್ತಿವೆ’ ಎನ್ನುತ್ತಾರೆ ಡಿಎಚ್‌ಒ ಡಾ. ಎಸ್.ಎಸ್.ನೀಲಗುಂದ. ‘30 ವರ್ಷ ಮೇಲ್ಪಟ್ಟ ಎಲ್ಲರೂ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳುವಂತೆ ಸೂಚಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಗೃಹ ಆರೋಗ್ಯ ಕಾರ್ಯಕ್ರಮ ಕೂಡ ಬರಲಿದ್ದು ಮನೆಮನೆಗೆ ಹೋಗಿ ತಪಾಸಣೆ ಔಷಧೋಪಚಾರ ನೀಡುವ ಉದ್ದೇಶ ಹೊಂದಲಾಗಿದೆ’ ಎನ್ನುತ್ತಾರೆ ಅವರು. ಚಿಕಿತ್ಸೆಗಿಂತ ರೋಗ ಬಾರದಂತೆ ಎಚ್ಚರಿಕೆ ವಹಿಸುವುದು ಉತ್ತಮ. ಅದೇರೀತಿ ಉತ್ತಮ ಜೀವನಶೈಲಿ ಆಹಾರ ಪದ್ದತಿ ಹೊಂದಬೇಕು. ಎಲ್ಲರಿಗಿಂತ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ತರುಣರು ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ತಾಯಿ ಆರೈಕೆಗೆ ವಿಶೇಷ ಯೋಜನೆ
‘ಜಿಲ್ಲೆಯ ಹೆರಿಗೆ ಆಸ್ಪತ್ರೆಗಳಲ್ಲಿ ತಾಯಿ ಆರೈಕೆಗಾಗಿ ‘ಕೇರ್ ಗೀವರ್ಸ್’ ಎಂಬ ವಿಶೇಷ ಯೋಜನೆ ರೂಪಿಸಲಾಗುತ್ತಿದೆ’ ಎಂದು ಟಿಎಚ್‌ಒ ಡಾ. ಪ್ರೀತ್ ಖೋನ ತಿಳಿಸಿದ್ದಾರೆ. ‘ಅಂದರೆ ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ಬರುವವರಿಗೆ ಆರೋಗ್ಯ ಜಾಗೃತಿ ಮೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸಹಜ ಹೆರಿಗೆಗೆ ಮನಒಲಿಸುವುದು ಸಹಜ ಹೆರಿಗೆಯ ಅನುಕೂಲಗಳು ಹೆರಿಗೆ ನಂತರ ಅನುಸರಿಸಬೇಕಾದ ಕ್ರಮಗಳು ಎರಡನೇ ಮಗು ಹೊಂದಲು ಮಾಡಿಕೊಳ್ಳಬೇಕಾದ ಪೂರ್ವಯೋಜನೆ ಬಗ್ಗೆ ಸಮಾಲೋಚಕರು ಮಾಹಿತಿ ನೀಡುತ್ತಾರೆ’ ಎಂದರು.