ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಹೃದಯ ‘ರಿದಂ’ ಬದಲಾದರೆ ಆಪತ್ತು

ಜಿಮ್‌ಗಳಲ್ಲಿ ಎಂದಿನಂತೆ ಬೆವರಿಳಿಸುತ್ತಿರುವ ಯುವಜನತೆ
Last Updated 7 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಗದಗ: ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಹಠಾತ್‌ ನಿಧನದ ನಂತರ ಕೆಲವೆಡೆ ಜಿಮ್‌ಗೆ ಹೋಗುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಆದರೆ, ಗದಗ ಜಿಲ್ಲೆಯಲ್ಲಿ ಅಂತಹ ಸನ್ನಿವೇಶ ನಿರ್ಮಾಣ ಆಗಿಲ್ಲ. ಫಿಟ್‌ನೆಸ್ ಕಾಳಜಿಯುಳ್ಳ ಯುವಕರು, ವಯಸ್ಕರು ಈಗಲೂ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ದೇಹವನ್ನು ಹುರಿಗೊಳಿಸುತ್ತಿದ್ದಾರೆ.

ಅಸಮರ್ಪಕ ಜೀವನಶೈಲಿ ಹಾಗೂ ಹೃದ್ರೋಗ ಹಿನ್ನಲೆ ಇರುವ ಕುಟುಂಬದವರನ್ನು ಹೊರತುಪಡಿಸಿದರೆ ಜಿಮ್‌ನಲ್ಲಿ ಹೈ ಇಂಟೆನ್ಸಿಟಿ ವರ್ಕೌಟ್‌ ಮಾಡುವ ಎಲ್ಲರಿಗೂ ತೊಂದರೆ ಆಗುವುದಿಲ್ಲ ಎಂಬುದು ಜಿಮ್‌ ತರಬೇತುದಾರರು ಹಾಗೂ ಹೃದ್ರೋಗ ತಜ್ಞರ ಅಭಿಪ್ರಾಯವಾಗಿದೆ.

‘ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಿಧನ ಪ್ರತಿಯೊಬ್ಬ ಕನ್ನಡಿಗನಿಗೂ ತೀವ್ರ ದುಃಖ ತರಿಸಿದೆ. ಅವರು ನಾಡಿನ ಲಕ್ಷಾಂತರ ಯುವಕರಿಗೆ ಫಿಟ್‌ನೆಸ್‌ ಐಕಾನ್‌ ಆಗಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ಅವರಂತೆ ಟ್ರಿಪ್ಪಲ್‌ ಕಿಕ್‌ ಮಾಡುವವರು ಮತ್ತೊಬ್ಬರಿಲ್ಲ. ಅಪ್ಪು ಅವರು ಹೆವಿ ವೇಯ್ಟ್‌ ಲಿಫ್ಟಿಂಗ್‌ ಮಾಡುತ್ತಿರಲಿಲ್ಲ. ಜಿಮ್ನಾಸ್ಟಿಕ್‌ ಹಾಗೂ ಕಿಕ್‌ ಬಾಕ್ಸಿಂಗ್‌ ಅವರಿಗೆ ಅಚ್ಚುಮೆಚ್ಚಾಗಿತ್ತು. ಇವುಗಳ ಮೂಲಕವೇ ತಮ್ಮ ದೇಹವನ್ನು ಫಿಟ್‌ ಆಗಿ ಇರಿಸಿಕೊಂಡಿದ್ದರು. ಆದರೆ, ಹೈ ಇಂಟೆನ್ಸಿಟಿ ವರ್ಕೌಟ್‌ ಮಾಡಿದ್ದರಿಂದಲೇ ಅವರಿಗೆ ಕಾರ್ಡಿಯಾಕ್‌ ಅರೆಸ್ಟ್‌ ಆಯಿತು ಎಂದು ಕೆಲವು ಮಾಧ್ಯಮಗಳಲ್ಲಿ ತಪ್ಪಾದ ವಿಶ್ಲೇಷಣೆ ನಡೆಯಿತು. ಇದರಿಂದಾಗಿ, ಜಿಮ್‌ನ ಗಂಧ ಅರಿಯದ ಕೆಲವರು ಮಾತ್ರ ನಮ್ಮತ್ತ ಅನುಮಾನದ ದೃಷ್ಟಿ ಬೀರುತ್ತಿದ್ದಾರೆ’ ಎನ್ನುತ್ತಾರೆ ಗದುಗಿನ ಖಾನ್‌ ಫಿಟ್‌ನೆಸ್‌ನ ಮಾಲೀಕ ಇಸ್ಮಾಯಿಲ್‌ ಖಾನ್‌.

‘ಜಿಮ್‌ಗೆ ಒಬ್ಬರನ್ನು ದಾಖಲಿಸಿಕೊಳ್ಳುವ ಮುನ್ನ ಅವರ ಕುಟುಂಬದ ಆರೋಗ್ಯ ಹಿನ್ನಲೆ ತಿಳಿದುಕೊಳ್ಳುತ್ತೇವೆ. ಅವರ ದೇಹ ಪ್ರಕೃತಿಗೆಹೊಂದುವಂತೆ ತರಬೇತಿ ನೀಡುತ್ತೇವೆ. ಹಾಗಾಗಿ, ನಮ್ಮ ಜಿಮ್‌ನಲ್ಲಿ ಈವರೆಗೆ ಯಾರಿಗೂ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಪ್ರತಿಯೊಬ್ಬರ ಆರೋಗ್ಯವೂ ಅವರ ಜೀವನಶೈಲಿ ಅವಲಂಬಿಸಿರುತ್ತದೆ. ಆದ್ದರಿಂದ ಜಿಮ್‌ನಲ್ಲಿ ತರಬೇತುದಾರರ ಮಾರ್ಗದರ್ಶನ ಪಡೆದು ಮುನ್ನಡೆದರೆ ಯಾವುದೇ ಸಮಸ್ಯೆ ಇಲ್ಲ’ ಎನ್ನುತ್ತಾರೆ ಅವರು.

ಹೃದಯದ ಆರೋಗ್ಯ ಅರಿತು ವರ್ಕೌಟ್‌ ಮಾಡಿ

‘ದೇಹವನ್ನು ಹುರಿಗೊಳಿಸುವ ಹುಮ್ಮಸ್ಸಿನಲ್ಲಿ ಹೈ ಇಂಟೆನ್ಸಿಟಿ ವರ್ಕೌಟ್‌ ಮಾಡಿದರೂ ಆರೋಗ್ಯವಂತ ಕುಟುಂಬದ ಹಿನ್ನಲೆ ಇರುವ ವ್ಯಕ್ತಿಗಳಿಗೆ ಯಾವುದೇ ಸಮಸ್ಯೆ ಇಲ್ಲ’ ಎನ್ನುತ್ತಾರೆ ಹೃದ್ರೋಗ ತಜ್ಞ ಡಾ. ಶಂಭು ಪುರದ.

ಆದರೆ, ರಿಸ್ಕ್‌ ಫ್ಯಾಕ್ಟರ್‌ ಇರುವ ವ್ಯಕ್ತಿಗಳು ಅತಿಯಾದ ವ್ಯಾಯಾಮ ಮಾಡಿದರೆ ಮಾತ್ರ ಕಾರ್ಡಿಯಾಟಿಕ್‌ ಆರೆಸ್ಟ್‌ ಆಗುವ ಸಾಧ್ಯತೆಗಳು ಹೆಚ್ಚು ಎಂದು ಅವರು ಎಚ್ಚರಿಸುತ್ತಾರೆ.

‘ಕುಟುಂಬದಲ್ಲಿ ಯಾರಿಗಾದರೂ ಹೃದ್ರೋಗ ಸಮಸ್ಯೆ ಇದ್ದರೆ ಅಂತವರು ಜಾಗ್ರತೆ ವಹಿಸಬೇಕು. ಇಸಿಜಿ, ಎಕೋ ಸ್ಕ್ಯಾನ್‌ ಮಾಡಿಸುವ ಮೂಲಕ ತಮ್ಮ ಹೃದಯದ ಆರೋಗ್ಯದ ಸ್ಥಿತಿ ತಿಳಿದುಕೊಂಡು, ಅದಕ್ಕನುಗುಣವಾಗಿ ವರ್ಕೌಟ್‌ ಮಾಡಬೇಕು’ ಎಂದು ಸಲಹೆ ನೀಡಿದರು.

‘ಹೃದ್ರೋಗ ಸಮಸ್ಯೆ ಇದ್ದವರು ಅತಿಯಾದ ವರ್ಕೌಟ್‌ ಮಾಡಿದರೆ ಹೃದಯದ ರಿದಂ ಬದಲಾಗುತ್ತದೆ. ಹೃದಯದ ಬಡಿತ ಸಾಮಾನ್ಯಕ್ಕಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚಾಗಿ ಹೃದಯಾಘಾತ ಸಂಭವಿಸುತ್ತದೆ. ತಕ್ಷಣಕ್ಕೆ ಇವರಿಗೆ ಇಸಿಜಿ, ಶಾಕ್‌ ಟ್ರೀಟ್‌ಮೆಂಟ್‌ ಕೊಡದಿದ್ದರೆ ಕಾರ್ಡಿಯಾಕ್‌ ಅರೆಸ್ಟ್‌ ಆಗಿ ಸಾವು ಸಂಭವಿಸುತ್ತದೆ’ ಎನ್ನುತ್ತಾರೆ ಅವರು.

***

ಉತ್ತಮ ಆರೋಗ್ಯಕ್ಕೆ ಯೋಗ ಅತ್ಯುತ್ತಮ. ಇಲ್ಲಿ ದೇಹಕ್ಕೆ ಹೆಚ್ಚು ಆಯಾಸ ಆಗುವುದಿಲ್ಲ. ಹಾಗೆಯೇ, ಯೋಗದಲ್ಲಿ ಪ್ರಾಣಾಯಾಮ, ಧ್ಯಾನ, ಓಂಕಾರ, ಭ್ರಾಮರಿಗಳಿರುವುದರಿಂದ ದೇಹ ಮತ್ತು ಮನಸ್ಸಿಗೆ ಉಲ್ಲಾಸದಾಯಕ

- ಡಾ. ಶಂಭು ಪುರದ, ಹೃದ್ರೋಗ ತಜ್ಞ, ಜಿಮ್ಸ್‌

***

ಅತಿಯಾದ ವ್ಯಾಯಾಮದಿಂದ ಆಯಾಸವಾಗುತ್ತದೆ. ವರ್ಕೌಟ್‌ ಮಾಡುವುದಕ್ಕೂ ಮುನ್ನ ಲಘು ವ್ಯಾಯಾಮ ಮಾಡಿ ದೇಹ ಹಗುರಾಗಿಸಿಕೊಳ್ಳಬೇಕು. ವಾರಪೂರ್ತಿ ವರ್ಕೌಟ್‌ ಮಾಡುವ ಬದಲು ಎರಡು ದಿನ ಬಿಡುವು ಕೊಡಬೇಕು

- ರಿಚರ್ಡ್‌, ಅಥ್ಲೆಟಿಕ್‌ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT