ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡ | ಚಿರತೆ ದಾಳಿ: ಇಬ್ಬರು ಯುವಕರಿಗೆ ಗಾಯ

Published 7 ಫೆಬ್ರುವರಿ 2024, 9:59 IST
Last Updated 7 ಫೆಬ್ರುವರಿ 2024, 9:59 IST
ಅಕ್ಷರ ಗಾತ್ರ

ಗಜೇಂದ್ರಗಡ (ಗದಗ ಜಿಲ್ಲೆ): ಚಿರತೆ ದಾಳಿ ನಡೆಸಿದ ಪರಿಣಾಮ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಜಿಗೇರಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಉದಯಕುಮಾರ್ ಶರಣಪ್ಪ ನೀಡಶೆಸಿ (18) ಗಾಯಗೊಂಡ ಯುವಕ.

ಉದಯಕುಮಾರ್‌ ಅವರು ಹೊಲದಲ್ಲಿ ಬಾಳೆ ಗೊನೆ ಕೀಳಲು ಹೋದಾಗ ಬುಧವಾರ ಬೆಳಿಗ್ಗೆ 10.45ರ ಸುಮಾರಿಗೆ ಚಿರತೆ ದಾಳಿ ಮಾಡಿದೆ. ಸಹ ಕಾರ್ಮಿಕ ಮಂಜುನಾಥ ಕಿರುಚಾಡಿ, ಕಲ್ಲು ಒಗೆದ ಪರಿಣಾಮ ಚಿರತೆ ಓಡಿ ಹೋಗಿದೆ.

ವಿಷಯ ತಿಳಿದು ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಗಜೇಂದ್ರಗಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

‘ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ’ ಎಂದು ಡಾ.ಅನಿಲಕುಮಾರ ತೋಟದ ತಿಳಿಸಿದ್ದಾರೆ.

‘ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಪದೇ ಪದೇ ಚಿರತೆ ಕಾಣಿಸಿಕೊಳ್ಳುವುದರ ಜೊತೆಗೆ ದಾಳಿ ನಡೆಸುತ್ತಿದೆ. ಪ್ರಾರಂಭದಲ್ಲಿ ಜಾನುವಾರುಗಳು ದಾಳಿಗೆ ಒಳಗಾಗುತ್ತಿದ್ದವು. ಆದರೆ ಈಗ ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದು ತಾಲ್ಲೂಕಿನ ಜನತೆಯಲ್ಲಿ ಭಯ ಮೂಡಿಸಿದೆ’ ಎಂದು ಜಿಗೇರಿ ಗ್ರಾಮದ ಜನರು ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಮುಂದೆ ಅಳಲು ತೋಡಿಕೊಂಡರು.

ಮತ್ತೊಬ್ಬ ಕುರಿಗಾಹಿ ಮೇಲೆ ಚಿರತೆ ದಾಳಿ: ಜಿಗೇರಿ ಗ್ರಾಮದ ಉದಯಕುಮಾರ್ ಮೇಲೆ ಚಿರತೆ ದಾಳಿ ನಡೆಸಿದ ಕೆಲ ಸಮಯದ ಅಂತರದಲ್ಲಿ ಅದೇ ಗ್ರಾಮದ ಕುರಿಗಾಹಿ ಉಮೇಶ ದೇವಪ್ಪ ಜಿಗಳೂರ (28) ಎಂಬ ಯುವಕನ ಮೇಲೆ ಚಿರತೆ ದಾಳಿ ನಡೆದಿದೆ.

ಚಿರತೆಯು ಉಮೇಶ ಅವರ ಕಾಲಿಗೆ ಕಚ್ಚಿ ಗಾಯಗೊಳಿಸಿದೆ. ಆತನಿಗೆ ಗಜೇಂದ್ರಗಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

‘ಹಲವು ದಿನಗಳಿಂದ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ, ಅವರ ನಿರ್ಲಕ್ಷ್ಯದಿಂದಾಗಿ ಜನ, ಜಾನುವಾರುಗಳ ಮೇಲೆ ಚಿರತೆ ದಾಳಿ ಮುಂದುವರಿದಿದೆ’ ಎಂದು ದಾಳಿಗೆ ಒಳಗಾದ ಉಮೇಶ ಜಿಗಳೂರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT