ಬುಧವಾರ, ಅಕ್ಟೋಬರ್ 28, 2020
18 °C
ಆಂಜನೇಯ ಪ್ರತಿಪಾದನೆ

ಪ್ರಭು ಚವ್ಹಾಣ್‌ ಪರಿಶಿಷ್ಟ ಜಾತಿಯವರಲ್ಲ: ಎಚ್‌.ಆಂಜನೇಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಚಿವ ಪ್ರಭು ಚವ್ಹಾಣ್ ಅವರು ಪರಿಶಿಷ್ಟ ಜಾತಿಗೆ ಸೇರಿದವರಲ್ಲ ಎಂದು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ನಡೆಸಿದ ತನಿಖಾ ವರದಿ ಸ್ಪಷ್ಟವಾಗಿ ಹೇಳಿದೆ’ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಹೇಳಿದ್ದಾರೆ.

‘ನಾನು ಕರ್ನಾಟಕದವನೇ ಎಂಬುದು ಅನೇಕ ವಿಚಾರಣೆಗಳು ಹಾಗೂ ಜಾರಿನಿರ್ದೇಶನಾಲಯದ ವರದಿಯಿಂದ ಸಾಬೀತಾಗಿದೆ’ ಎಂದು ಚವ್ಹಾಣ್‌ ಅವರು ಪ್ರತಿಪಾದಿಸಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಂಜನೇಯ, ‘ಶಂಕರರಾವ್‌ ದೊಡ್ಡಿ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಲು ನಾನು ಸಚಿವನಾಗಿದ್ದಾಗ ಆದೇಶ ನೀಡಿದ್ದೆ. ತನಿಖೆ ನಡೆಸಿದ ನಿರ್ದೇಶನಾಲಯ 240 ಪುಟಗಳ ವರದಿ ನೀಡಿತ್ತು. ಅದರಲ್ಲಿ ಚವ್ಹಾಣ್ ಪರಿಶಿಷ್ಟ ಜಾತಿಗೆ ಸೇರಿದವರಲ್ಲ, ಮಹಾರಾಷ್ಟ್ರಕ್ಕೆ ಸೇರಿದವರು ಮತ್ತು ಸುಳ್ಳು ಪ್ರಮಾಣ ಪತ್ರ ನೀಡಿದ್ದಾರೆ ಎಂದು ತಿಳಿಸಿತ್ತು’ ಎಂದಿದ್ದಾರೆ.

‘ಇವರ ಪರಿವಾರದವರೆಲ್ಲೂ ಮಹಾರಾಷ್ಟ್ರಕ್ಕೆ ಸೇರಿದವರು. ಅಲ್ಲಿಯೇ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ ಎಂದು ವರದಿಯಲ್ಲಿದೆ. ಈ ವರದಿಯನ್ನು ಆಧರಿಸಿ ಇವರ ಮೂಲ ಜಾತಿ ಪ್ರಮಾಣ ಪತ್ರ ರದ್ದುಪಡಿಸಬೇಕು ಎಂದು ಶಂಕರರಾವ್‌ ಮನವಿ ಮಾಡಿದ್ದರು’ ಎಂದು ಆಂಜನೇಯ ತಿಳಿಸಿದ್ದಾರೆ.

ಆದರೆ, ಸಮಾಜ ಕಲ್ಯಾಣ ಇಲಾಖೆಯ ಅಂದಿನ ಆಯುಕ್ತರು ವಿಚಾರಣೆ ನಡೆಸಿ, ತೀರ್ಪು ನೀಡುವ ದಿನಾಂಕ ನಿಗದಿ ಮಾಡಿದ್ದರು. ಆ ದಿನಾಂಕದ ಒಳಗೇ ಪ್ರಭಾವಕ್ಕೆ ಮಣಿದು ಪ್ರಭು ಚವ್ಹಾಣ್ ವಿರುದ್ಧ ಸಲ್ಲಿಸಿದ್ದ ದೂರು ವಾಪಸ್‌ ಪಡೆಯಲಾಗಿದೆ. ತಕ್ಷಣವೇ ದುರುದ್ದೇಶಪೂರ್ವಕವಾಗಿ ದೂರು ಹಿಂದಕ್ಕೆ ಪಡೆದಿರುವುದಾಗಿ ದೂರುದಾರರಿಗೆ ₹1 ಲಕ್ಷ ದಂಡ ವಿಧಿಸಿದ್ದರು ಎಂದೂ ಆರೋಪಿಸಿದ್ದಾರೆ.

ಆ ಬಳಿಕ, ಆಯುಕ್ತರು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಬೀದರ್‌ ಜಿಲ್ಲಾಧಿಕಾರಿಗಳಿಗೆ 2018 ರ ಮೇ 7 ರಂದು ಪತ್ರ ಬರೆದರು. ಅಂದಿನ ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ್‌ ಅವರು ತನಿಖೆಗೆ ನೋಟಿಸ್‌ ಜಾರಿ ಮಾಡಿದ ದಿನವೇ ಅವರನ್ನು ವರ್ಗಾವಣೆ ಮಾಡಲಾಯಿತು. ನಂತರ ಅಲ್ಲಿಗೆ ಬಂದ ಜಿಲ್ಲಾಧಿಕಾರಿ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆಂಜನೇಯ ದೂರಿದ್ದಾರೆ.

ಇವರ ವಿರುದ್ಧ ಯಾರೇ ಆಗಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ ಅವರ ಮೇಲೆ ಪ್ರಭಾವ ಬೀರಿ ಅರ್ಜಿ ಹಿಂದಕ್ಕೆ ಪಡೆಯುವಂತೆ ಮಾಡುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು