ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ವಿರುದ್ಧ 10 ಪಟ್ಟು ಆಡಳಿತ ವಿರೋಧಿ ಅಲೆ: ಪ್ರೀತಂ ಜೆ. ಗೌಡ

Published 30 ಡಿಸೆಂಬರ್ 2023, 14:22 IST
Last Updated 30 ಡಿಸೆಂಬರ್ 2023, 14:22 IST
ಅಕ್ಷರ ಗಾತ್ರ

ಹಾಸನ: ಕಳೆದ ಆರು ವರ್ಷಗಳಲ್ಲಿದ್ದ ಹತ್ತು ಪಟ್ಟು ಆಡಳಿತ ವಿರೋಧಿ ಅಲೆ, ಕೇವಲ ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಂದಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಮೇಲೆ ಜನ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಯಾವುದೇ ಗ್ಯಾರಂಟಿ ಸಮರ್ಪಕವಾಗಿ ಜಾರಿ ಆಗುತ್ತಿಲ್ಲ. ಅವರ ಯಾವುದೇ ಮಾತುಗಳು ಸರ್ಕಾರ ನಡೆಸುವವರ ಮಾತುಗಳಲ್ಲ ಎಂದರು.

ಕಾಂಗ್ರೆಸ್‌ ನಾಯಕರು ಯೋಜನೆಗಳನ್ನು ಅನುಷ್ಠಾನ ಮಾಡುವುದನ್ನು ಬಿಟ್ಟು ಬೇರೆ ಎಲ್ಲ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡುತ್ತಿಲ್ಲ. ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಹಿಜಾಬ್ ವಿಚಾರವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಆಡಳಿತ ವೈಫಲ್ಯ ಮುಚ್ಚಲು ಇಂತಹ ತಂತ್ರ ಉಪಯೋಗಿಸುತ್ತಿದ್ದಾರೆ ಎಂದು ಆರೋಪಿಸಿದರು.

ಜನರು ಬುದ್ಧಿವಂತರಿದ್ದು, ಇದಕ್ಕೆ ಮಹತ್ವ ಕೊಡುವುದಿಲ್ಲ. ಕಾಂಗ್ರೆಸ್‌ನವರು ಮೋದಿ ಅವರ 5 ಕೆ.ಜಿ. ಅಕ್ಕಿ ಬಿಟ್ಟು 5 ಗ್ರಾಂ ಕೂಡ ಜಾಸ್ತಿ ಕೊಡಲು ಆಗುತ್ತಿಲ್ಲ. ಹಣ ಕೊಡುತ್ತೇವೆ ಎಂದು ಹೇಳುತ್ತಾರೆ. ಅದರಲ್ಲಿ ಒಂದೆರಡು ಕೆ.ಜಿ. ಅಕ್ಕಿ ಬರುವುದಿಲ್ಲ. ಹಾಗಾಗಿ 2024ಕ್ಕೆ ಮತ್ತೆ ಮೋದಿಯವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್‌ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನವರಿಗೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಮನಸ್ಥಿತಿಯನ್ನು ಚಾಮುಂಡೇಶ್ವರಿ ಹಾಗೂ ಹಾಸನಂಬೆ ಕರುಣಿಸಲಿ. ಒಂದು ಸಮುದಾಯಕ್ಕೆ ₹ 10 ಸಾವಿರ ಕೋಟಿ ಎನ್ನುವ ಬದಲು, ಇನ್ನೂ ₹ 1 ಕೋಟಿ ಸೇರಿಸಿ ಎಲ್ಲ ಬಡವರಿಗೆ ಎನ್ನಬೇಕು. ಆಗ ಜನರು ಇವರನ್ನು ಒಪ್ಪಿಕೊಳ್ಳುತ್ತಾರೆ. ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಅನ್ನು ಕರ್ನಾಟಕದ ಜನ ಒಪ್ಪುವುದಿಲ್ಲ ಎಂದರು.

ಮರ ಕಡಿದ ಪ್ರಕರಣದಲ್ಲಿ ಕ್ರಮ ಆಗಲಿ: ಬೇಲೂರು ತಾಲ್ಲೂಕಿನ ನಂದಗೋಡನಹಳ್ಳಿಯಲ್ಲಿ ಅಕ್ರಮ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಫ್ಒ ಸೇರಿದಂತೆ ಹಲವರನ್ನು ಅಮಾನತು ಮಾಡಲಾಗಿದೆ. ಯಾರೇ ಆದರೂ ಅರಣ್ಯದ ವಿಚಾರದಲ್ಲಿ ಕಾನೂನು ಕೈಗೆತ್ತಿಕೊಂಡರೆ, ಸೂಕ್ತ ಕ್ರಮ ಆಗಬೇಕು. ಇದರಲ್ಲಿ ಯಾವುದೇ ಮುಲಾಜು ನೋಡದೇ ಕಾನೂನು ರೀತಿ ಕ್ರಮ ಆಗಬೇಕು ಎಂದರು.

ಸಂಸದ ಪ್ರಜ್ವಲ್ ವಿರುದ್ಧ ಅಕ್ರಮ ಭೂ ಪರಭಾರೆ ಆರೋಪ ವಿಚಾರವಾಗಿ ನಾನು ಯಾವುದೇ ವ್ಯಕ್ತಿಯ ವೈಯಕ್ತಿಕ ವಿಚಾರ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ರಾಜಕೀಯವಾಗಿ ಎಷ್ಟೇ ವಿರೋಧಿ ಇದ್ದರೂ ನಾನು ಇನ್ನೊಬ್ಬರ ಬಗ್ಗೆ ಮಾತನಾಡುವುದಿಲ್ಲ ಎಂದು ಪ್ರೀತಂ ಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT