ಭಾನುವಾರ, ಸೆಪ್ಟೆಂಬರ್ 19, 2021
24 °C
ಹಳೇಬೀಡು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಆರು ಮಂದಿ ಅಂತರ ಜಿಲ್ಲಾ ಕಳ್ಳರ ಬಂಧನ

ಹಳೇಬೀಡು: ರಾಜ್ಯದ ವಿವಿಧೆಡೆ ಕಳವಾದ ₹ 1.05 ಕೋಟಿ ಮೌಲ್ಯದ 16 ವಾಹನ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ರಾಜ್ಯದ ವಿವಿಧೆಡೆ ವಾಹನ ಕಳವು ಮಾಡಿರುವ ಆರೋಪದ ಮೇರೆಗೆ ಶಿವಮೊಗ್ಗ, ಮಂಗಳೂರು ಮತ್ತು ಕಲಬುರ್ಗಿಯ ಆರು ಮಂದಿಯನ್ನು ಬಂಧಿಸಿರುವ ಇಲ್ಲಿನ ಪೊಲೀಸರು ₹ 1.05 ಕೋಟಿ ಮೌಲ್ಯದ 13 ವಾಹನ ಹಾಗೂ ಕೃತ್ಯಕ್ಕೆ ಬಳಸಿದ್ದ 3 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸೊರಬ ನಗರದ ಶಾಹಿದ್ ಅಹಮದ್, ಶಿವಮೊಗ್ಗದ ಹಿದಾಯತ್ ಷರೀಫ್, ಮಂಗಳೂರಿನ ಭಾಸ್ಕರ್ ಪೂಜಾರಿ, ಸೊರಬದ ಅಬ್ದುಲ್ ಕಲಾಂ, ಕಲ್ಬುರ್ಗಿಯ ಅಬ್ದುಲ್ ರಹೀಂ ಹಾಗೂ ಖಾಜಾ ಮಹಮದ್ ಬಂಧಿತರು.

‘ಬಂಧಿತರಿಂದ 2 ಲಾರಿ, 10 ಅಶೋಕ್ ಲೈಲಾಂಡ್ ಗೂಡ್ಸ್ ವಾಹನ, ಕಳ್ಳತನದ ಕೆಲಸಕ್ಕೆ ಬಳಸಲಾಗಿದ್ದ ಮಹೀಂದ್ರಾ ಪಿಕಪ್ ವಾಹನ, 1 ಯಮಹಾ ಆರ್‌.ಎಕ್ಸ್‌ 100 ಬೈಕ್, 1 ಹೊಂಡಾ ಡಿಯೋ ವಶಪಡಿಸಿ ಕೊಳ್ಳಲಾಗಿದೆ’ ಎಂದು ಹಳೇಬೀಡಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ಗೌಡ ತಿಳಿಸಿದರು.

‘ಶಿವಮೊಗ್ಗ, ಹಾವೇರಿ, ಹುಬ್ಬಳ್ಳಿ, ರಾಮನಗರ, ಬೆಂಗಳೂರು ಗ್ರಾಮಾಂತರ, ಹಾಸನ ಜಿಲ್ಲೆಯ ಹಳೇಬೀಡು ಹಾಗೂ ಬಾಣಾವರ ದಲ್ಲಿ ವಾಹನಗಳನ್ನು ಪತ್ತೆ ಹಚ್ಚಲಾ ಗಿದೆ. ಹಳೇಬೀಡು ಬಳಿಯ ಮಾಯಾಗೊಂಡನಹಳ್ಳಿ ಚೆಕ್ ಪೋಸ್ಟ್‌ನಲ್ಲಿ ಅನುಮಾನಾಸ್ಪದವಾಗಿ  ಕಂಡು ಬಂದವರ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂತು. ಫೈನಾನ್ಸ್ ಕಂಪನಿಯ ಸಿಬ್ಬಂದಿಯ ಸೋಗಿನಲ್ಲಿ ಆರೋಪಿಗಳು ದಾಖಲೆಗಳಿ ಲ್ಲದೆಯೇ ವಾಹನಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದರು’ ಎಂದರು.

‘ಕಳ್ಳತನ ಮಾಡಿರುವ ಬಹುತೇಕ ವಾಹನಗಳು ಅಶೋಕ ಲೈಲ್ಯಾಂಡ್‌ ಕಂಪನಿಯವಾಗಿದ್ದು, ರಾಡುಗಳನ್ನು ಬಳಸಿ ಕಳ್ಳತನ ಮಾಡುತ್ತಿದ್ದರು. ಆರೋಪಿಗಳು ಚಿಕ್ಕ ವಯಸ್ಸಿನವ ರಾಗಿದ್ದು, ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದರು. ಹಣದ ಆಸೆಗಾಗಿ ವಾಹನಗಳನ್ನು ಕಳ್ಳತನ ಮಾಡಿ ಮಂಗಳೂರು ಮತ್ತು ಕಲ್ಬುರ್ಗಿಯಲ್ಲಿ ಮಾರಾಟ ಮಾಡಿ ಬರುತ್ತಿದ್ದರು. ಒಬ್ಬನನ್ನು ಹೊರತುಪಡಿಸಿ ಉಳಿದವರು ಅಪರಾಧ ಹಿನ್ನೆಲೆ ಹೊಂದಿಲ್ಲ’ ಎಂದರು.

ಆರೋಪಿಗಳ ಪತ್ತೆಗೆ ಶ್ರಮಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್‌.ನಂದಿನಿ, ಅರಸೀಕೆರೆ ಉಪ ವಿಭಾಗ ಡಿವೈಎಸ್ಪಿ ಪಿ.ನಾಗೇಶ್, ಹಳೇಬೀಡು ಸರ್ಕಲ್ ಇನ್‌ಸ್ಪೆಕ್ಟರ್‌ ಎಸ್.ಎನ್.ಶ್ರೀಕಾಂತ್, ಸಬ್ ಇನ್‌ಸ್ಪೆಕ್ಟರ್‌ ಗಿರಿಧರ್, ಹಳೇಬೀಡು ಪೊಲೀಸ್ ಸಿಬ್ಬಂದಿಯನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಪ್ರಮಾಣಪತ್ರ ಹಾಗೂ ಬಹುಮಾನ ನೀಡುವುದಾಗಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.