ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ,ಮೈಸೂರು,ತುಮಕೂರು ಜಿಲ್ಲೆಗೆ ಸಂಪರ್ಕ–₹1865 ಕೋಟಿ ಹೆದ್ದಾರಿ ಯೋಜನೆಗೆ ಚಾಲನೆ

Last Updated 1 ಡಿಸೆಂಬರ್ 2018, 13:39 IST
ಅಕ್ಷರ ಗಾತ್ರ

ಹಾಸನ: ಹಾಸನದಿಂದ ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ₹ 1865 ಕೋಟಿ ವೆಚ್ಚದ ಮೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದರು.

ಹೊಸ ಬಸ್ ನಿಲ್ದಾಣ ಬಳಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗಡ್ಕರಿ, ಬೆಂಗಳೂರು-ಮಂಗಳೂರು ನಡುವೆ ನೇರ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್ ನಲ್ಲಿ 23 ಕಿ.ಮೀ. ಉದ್ದದ ಸುರಂಗ ನಿರ್ಮಾಣ ಮಾಡಲು ಈಗಾಗಲೇ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ತಯಾರು ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಒಟ್ಟು ₹ 10 ಸಾವಿರ ಕೋಟಿ ವೆಚ್ಚದ ಕಾಮಗಾರಿಗೆ ಮುಂದಿನ 6 ತಿಂಗಳ ವೇಳೆಗೆ ಟೆಂಡರ್ ಕರೆಯಲಾಗುವುದು. ಈ ಯೋಜನೆ ಕಾರ್ಯಗತವಾದರೆ, ಕರ್ನಾಟಕ ಹಾಗೂ ಮಂಗಳೂರು ಬಂದರು ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ನುಡಿದರು.

ರಾಜ್ಯದಲ್ಲಿ ಮುಂದಿನ ವರ್ಷಗಳಲ್ಲಿ ₹ 2 ಲಕ್ಷ ಕೋಟಿ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಭೂ ಸ್ವಾಧೀನ ಸಮಸ್ಯೆಯಿಂದ ವಿಳಂಬವಾಗಿದ್ದ 117 ಕಿ.ಮೀ, ಉದ್ದದ ₹ 7 ಸಾವಿರ ಕೋಟಿ ವೆಚ್ಚದ ಮೈಸೂರು–ಬೆಂಗಳೂರು ದಶಪಥ ರಸ್ತೆ ಕಾಮಗಾರಿ ಜನವರಿಯಿಂದ ಆರಂಭಗೊಳ್ಳಲಿದೆ. ಅದೇ ರೀತಿ ಮೂರು ಹಂತಗಳಲ್ಲಿ ₹ 16 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರು ಹೊರ ವರ್ತುಲ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಬೆಂಗಳೂರು–ಚೆನೈ ಎಕ್ಸೆಪ್ರೆಸ್‌ ಮಾರ್ಗದ ಬಗ್ಗೆ ಪ್ರಸ್ತಾಪಿಸಿದ ಗಡ್ಕರಿ, ಇದು ಬಂದರು ನಗರಿಗೆ ಸಂಪರ್ಕ ಕಲ್ಪಿಸುವ ಹೊಸ ಕೊಂಡಿಯಾಗಿರುವ ಕಾರಣ ಆಮದು, ರಫ್ತು ಕೇಂದ್ರವಾಗಲಿದೆ. ಈ ಮಾರ್ಗ ಕರ್ನಾಟಕದಲ್ಲಿ 76 ಕಿ.ಮೀ, ಆಂದ್ರಪ್ರದೇಶದಲ್ಲಿ 91 ಕಿ.ಮೀ ಮತ್ತು ತಮಿಳುನಾಡಿನಲ್ಲಿ 116 ಕಿ.ಮೀ. ಹಾದು ಹೋಗುತ್ತದೆ. ಇದರ ಅಂದಾಜು ವೆಚ್ಚ ₹ 18 ಸಾವಿರ ಕೋಟಿ ಎಂದು ಸಚಿವರು ವಿವರಿಸಿದರು.

ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಸರ್ಕಾರ ಕೇವಲ ಹಳೇ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಎಲ್‌.ಆರ್‌.ಶಿವರಾಮೇಗೌಡ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೊಯಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT