ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2,700 ಕಿ.ಮೀ ಸೈಕಲ್‌ ಯಾತ್ರೆ

ಸೆ.14ರಿಂದ ಮೂರು ಹಂತದಲ್ಲಿ ‘ಚಲಿಸು ಕರ್ನಾಟಕ’
Last Updated 7 ಸೆಪ್ಟೆಂಬರ್ 2020, 14:43 IST
ಅಕ್ಷರ ಗಾತ್ರ

ಹಾಸನ: ಕೋವಿಡ್‌ 19 ನಿಂದ ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳನ್ನು ಅರಿಯುವ ಉದ್ದೇಶದಿಂದ ಸೆ. 14ರಿಂದ
ರಾಜ್ಯದಾದ್ಯಂತ ‘ಚಲಿಸು ಕರ್ನಾಟಕ’ಹೆಸರಿನಲ್ಲಿ 2,700 ಕಿ.ಮೀ ಸೈಕಲ್‌ ಯಾತ್ರೆ ಆಯೋಜಿಸಲಾಗಿದೆ ಎಂದು
ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಖಜಾಂಚಿ ಕೆ.ಬಿ. ಅಜಯ್‌ ಹೇಳಿದರು.

ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣದ ಅವಶ್ಯಕತೆ ಬಗ್ಗೆ ತಿಳಿಸಲು ಮತ್ತು ಜನರ ಕಷ್ಟಗಳನ್ನು ಅರಿಯಲು ಸಮಿತಿ
ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ನೇತೃತ್ವದಲ್ಲಿ ‘ಚಲಿಸು ಕರ್ನಾಟಕ’ ಸೈಕಲ್‌ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ಮೊದಲ ಹಂತದ ಯಾತ್ರೆಯು ಸೆ. 14 ರಂದು ಕೋಲಾರದಲ್ಲಿ ಆರಂಭವಾಗಿ ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು ಜಿಲ್ಲೆಗಳ ಮೂಲಕ ಹಾದು ಸೆ. 24ರಂದು ಹಾಸನ ಜಿಲ್ಲೆಯ ಅರಕಲಗೂಡು ತಲುಪಲಿದೆ. ಸೆ. 25ರಂದು ಹಾಸನ, ಗಂಡಸಿ ಮೂಲಕ ತುಮಕೂರು,ಚಿತ್ರದುರ್ಗ ಜಿಲ್ಲೆಗಳಲ್ಲಿ ಸಾಗಿ 28ರಂದು ಶಿರಾದಲ್ಲಿ ಸಮಾರೋಪಗೊಳ್ಳಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎರಡನೇ ಹಂತದ ಯಾತ್ರೆ ಅ.5 ರಿಂದ ಉತ್ತರ ಮತ್ತು ಕಲ್ಯಾಣ ಕರ್ನಾಟಕ ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲ್ಬುರ್ಗಿ, ಬೀದರ್‌, ವಿಜಯಪುರ, ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕೈಗೊಳ್ಳಲಾಗುವುದು. ನ. 23ರಿಂದ ಮೂರನೇ ಹಂತದಲ್ಲಿ ಉತ್ತರ ಕರ್ನಾಟಕ, ಬೆಳಗಾವಿ, ಧಾರವಾಡ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೈಗೊಳ್ಳಲಾಗುವುದು. ಯಾತ್ರೆಯಲ್ಲಿ ಭಾಗವಹಿಸುವವರಿಗೆ ಊಟ, ವಸತಿ ವ್ಯವಸ್ಥೆ ಇದೆ ಎಂದು ತಿಳಿಸಿದರು.

ಭ್ರಷ್ಟ ವ್ಯವಸ್ಥೆಯಿಂದ ನಾಡಿನ ಸಂಪತ್ತು ಲೂಟಿಯಾಗುತ್ತಿದೆ. ಅದರಲ್ಲೂ ಆಡಳಿತ ಮತ್ತು ಆರೋಗ್ಯ ವ್ಯವಸ್ಥೆಗಳು ಹದಗೆಟ್ಟಿದೆ. ಕೋವಿಡ್‌ ಚಿಕಿತ್ಸೆ ಹೆಸರಿನಲ್ಲಿ ಸಾಕಷ್ಟು ಹಣ ಲೂಟಿ ಮಾಡಲಾಗುತ್ತಿದೆ. ರಾಜ್ಯದ ಮೂರು ಪಕ್ಷಗಳ ಗಮನ ಹಣ ಮಾಡುವ ಕಡೆಗೆ ಇದೆ ಎಂದು ಆರೋಪಿಸಿದರು.

ದೇಶದಲ್ಲಿ ಇಂಧನ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸುತ್ತಿದ್ದರೂ ಬೊಕ್ಕಸ ಮಾತ್ರ ಖಾಲಿಯಾಗಿದೆ. ಕೋವಿಡ್‌ ನಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಸೈಕಲ್‌ ಯಾತ್ರೆಗೆ ನೋಂದಾಯಿಸಿಕೊಳ್ಳಲು http://www.krsparty.org/registration/cycle.php
ವೆಂಬ್‌ ಲಿಂಕ್ ನೋಡಬಹುದು. ಮಾಹಿತಿಗೆ ಮೊ. 9632082999, 7975625575 ಸಂಖ್ಯೆಗೆ
ಸಂಪರ್ಕಿಸಬಹುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಅಕ್ಮಲ್‌ ಜಾವಿದ್‌, ರಾಜ್ಯ ಯುವ ಘಟಕ ಕಾರ್ಯದರ್ಶಿ ಜಿ. ಮೋಹನ್‌, ವಕೀಲ
ಸತೀಶ್‌, ಚಂದ್ರಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT