ಒಕ್ಕಲಿಗರ ಸಂಘದ ಚುನಾವಣೆ: 3 ಸ್ಥಾನಕ್ಕೆ 11 ಮಂದಿ ಪೈಪೋಟಿ, ನಾಳೆ ಮತದಾನ

ಹಾಸನ: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಯೂ ಬಿರುಸುಗೊಂಡಿದ್ದು, ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ, ಜೆಡಿಎಸ್ ಮುಖಂಡ, ಉದ್ಯಮಿ ಎಸ್.ಎಸ್.ರಘುಗೌಡ, ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂ.ಶಂಕರ್ (ತೆಂಕನಹಳ್ಳಿ), ಸಿ.ಎಸ್.ಯುವರಾಜ್, ಎ.ಎನ್.ಮಂಜೇಗೌಡ, ಎಚ್.ಎಂ.ರವಿ, ಎಂ.ಕೆ.ರವಿಶಂಕರ್, ಜೆ.ಎಂ.ಶಿವಕುಮಾರ ಜಾಗಟೆ, ಜೆ.ಪಿ.ಶೇಖರ್, ಎಂ.ಶಂಕರ್ ಕಣದಲ್ಲಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಹಳೆ ಮುಖಗಳ ಜತೆ ಹೊಸಬರು ಅಖಾಡಕ್ಕೆ ಇಳಿದಿರುವುದು ಹಾಗೂ ರಾಜಕೀಯ ಬೆರೆತುಕೊಂಡಿರುವುದರಿಂದ ಚುನಾವಣೆ ರಂಗೇರಿದೆ. ಹಾಸನ ಜಿಲ್ಲೆಯಿಂದ ಮೂವರು ನಿರ್ದೇಶಕರನ್ನು ಆಯ್ಕೆ ಮಾಡಬೇಕಿದ್ದು,ಹನ್ನೊಂದು ಮಂದಿ ಕಣದಲ್ಲಿದ್ದಾರೆ. ಇದಕ್ಕಾಗಿ ಡಿ.12ರಂದು ಮತದಾನ ನಡೆಯಲಿದೆ.
ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವವರ ಜತೆಗೆ ವಕೀಲ ಜೆ.ಪಿ.ಶೇಖರ್, ಸಾಮಾಜಿಕ ಕಾರ್ಯಕರ್ತ ಶಿವಕುಮಾರ ಜಾಗಟೆ, ಪ್ರಾಧ್ಯಾಪಕ ರವಿಶಂಕರ್ ಸ್ಪರ್ಧೆಗಿಳಿರುವುದು ಗಮನಾರ್ಹ. ಆದರೆ, ಕಳೆದೆರಡು ಚುನಾವಣೆಯಲ್ಲಿ ಜೆಡಿಎಸ್–ಕಾಂಗ್ರೆಸ್ ನಡುವೆ ಸಿಂಡಿಕೇಟ್ ಲೆಕ್ಕಾಚಾರದಿಂದ ಚನ್ನಾರಾಯಪಟ್ಟಣದವರೇ ಆಯ್ಕೆಯಾಗಿದ್ದರು.
ಹಿಂದಿನಂತೆಯೇ ಈ ಬಾರಿಯೂ ಬಹುತೇಕರು ಸಿಂಡಿಕೇಟ್ ಲೆಕ್ಕಾಚಾರದಲ್ಲಿಯೇ ಚುನಾವಣೆ ಎದುರಿಸುತ್ತಿದ್ದಾರೆ. ಸಿ.ಎನ್.ಬಾಲಕೃಷ್ಣ, ಎಸ್.ಎಸ್. ರಘುಗೌಡ ಒಂದು ಸಿಂಡಿಕೇಟ್ ಮಾಡಿದ್ದರೆ, ಕಾಂಗ್ರೆಸ್ನಿಂದ ಬಾಗೂರು ಮಂಜೇಗೌಡ, ಎಂ.ಶಂಕರ್ ಮತ್ತು ಸಿ.ಎಸ್.ಯುವರಾಜ್ ಜೊತೆಯಾಗಿದ್ದಾರೆ. ಉಳಿದವರು ಸ್ವಂತ ಬಲದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಬೆಂಗಳೂರು ಕೇಂದ್ರೀಕೃತವಾಗಿರುವ ಒಕ್ಕಲಿಗರ ಸಂಘದ ಆಡಳಿತವನ್ನು ಜಿಲ್ಲೆಗೂ ವಿಸ್ತರಿಸಲಾಗುವುದು, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಹೋಬಳಿ ಮಟ್ಟದಲ್ಲೂ ಒಕ್ಕಲಿಗರ ಭವನ ಸ್ಥಾಪನೆ ಎಂಬಿತ್ಯಾದಿ ಭರವಸೆಗಳನ್ನು ನೀಡಲಾಗುತ್ತಿದೆ.
ಸಾಮಾನ್ಯ ಚುನಾವಣೆಗಳಂತೆ ಒಕ್ಕಲಿಗರ ಸಂಘದ ಚುನಾವಣೆಯೂ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಮತದಾರರಿಗೆ ಬಳುವಳಿ ನೀಡಲಾಗುತ್ತಿದ್ದು, ನಿತ್ಯ ಬಾಡೂಟ ಸಾಮಾನ್ಯವಾಗಿದೆ. ಪ್ರಚಾರವಂತೂ ಸಾರ್ವತ್ರಿಕ ಚುನಾವಣೆ ಮೀರಿಸುವಷ್ಟರ ಮಟ್ಟಿಗೆ ನಡೆಯುತ್ತಿದೆ.
ಹಾಸನ ಜಿಲ್ಲೆಯಲ್ಲಿ 53,134 ಮತದಾರರು ಇದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 19,948 ಮತಗಳು ಇವೆ. ಹಾಸನ ತಾಲ್ಲೂಕಿನಲ್ಲಿ 16,098 ಮತದಾರರು ಇದ್ದಾರೆ. ಹಾಸನ, ಚನ್ನರಾಯಪಟ್ಟಣ ತಾಲ್ಲೂಕಿನ ಮತದಾರರೇ ನಿರ್ಣಾಯಕ. ಹಾಗಾಗಿ ಈ ತಾಲ್ಲೂಕುಗಳನ್ನು ಪ್ರಮುಖವಾಗಿ ಕೇಂದ್ರೀಕರಿಸಿ ಮತದಾರರನ್ನು ತಲುಪುವ ಪ್ರಯತ್ನದಲ್ಲಿ ಸಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.