ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | 2.12 ಲಕ್ಷ ರೈತರಿಗೆ ₹38.75 ಕೋಟಿ ಜಮೆ

ಸಂತೋಷ್‌ ಸಿ.ಬಿ.
Published 24 ಫೆಬ್ರುವರಿ 2024, 5:58 IST
Last Updated 24 ಫೆಬ್ರುವರಿ 2024, 5:58 IST
ಅಕ್ಷರ ಗಾತ್ರ

ಹಾಸನ: ಸರ್ಕಾರ ಬಿಡುಗಡೆ ಮಾಡಿರುವ ತಲಾ ₹2 ಸಾವಿರ ಬರ ಪರಿಹಾರವನ್ನು ಜಿಲ್ಲೆಯ 2,12,024 ರೈತರ ಖಾತೆಗೆ ಜಮಾ ಮಾಡಲಾಗಿದ್ದು, ಇನ್ನುಳಿದ ರೈತರಿಗೆ ಹಂತ ಹಂತವಾಗಿ ಪಾವತಿಸಲು ಕೃಷಿ ಇಲಾಖೆ ಮುಂದಾಗಿದೆ. ಆದರೆ, ಸರ್ಕಾರ ನೀಡಿರುವ ಪರಿಹಾರ ಧನಕ್ಕೆ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.  

ಕೃಷಿ ಇಲಾಖೆಯ ಬೆಳೆ ಹಾನಿ ಪರಿಶೀಲನೆ ಮಾಡಿ, ಜಿಲ್ಲಾಧಿಕಾರಿ ಅನುಮೋದನೆ ಮೂಲಕ ಸಲ್ಲಿಸಿದ ಪ್ರಸ್ತಾವಕ್ಕೆ ಅನುಗುಣವಾಗಿ ಪ್ರತಿ ರೈತರಿಗೆ ₹2 ಸಾವಿರದಂತೆ ಹಣ ಬಿಡುಗಡೆಯಾಗಿದೆ. ಎನ್‌ಡಿಆರ್‌ಎಫ್ ಮಾನದಂಡದಂತೆ ₹ 131 ಕೋಟಿ ಬಿಡುಗಡೆಗೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸರ್ಕಾರದಿಂದ ಪ್ರಥಮ ಹಂತವಾಗಿ ₹ 38.75 ಕೋಟಿ ಬಿಡುಗಡೆಯಾಗಿದೆ.

ಎನ್‌ಡಿಆರ್‌ಎಫ್ ಮಾನದಂಡದಂತೆ ಕನಿಷ್ಠ ಐದು ಎಕರೆ ಮಿತಿಯವರೆಗೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪರಿಹಾರ ಹಣ ಪಡೆಯಲು ಪ್ರತಿಯೊಬ್ಬ ರೈತರು ಫ್ರೂಟ್ಸ್‌ ಐಡಿ (ಎಫ್ಐಡಿ) ಹೊಂದಿರುವುದು ಕಡ್ಡಾಯವಾಗಿದೆ.

ಈಗಾಗಲೇ ಉಳಿದ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸಲಾಗಿದ್ದು, ಸರ್ಕಾರದಿಂದ ಹಣ ಬಿಡುಗಡೆಯಾದ ನಂತರ ಪರಿಹಾರ ಹಣ ವಿತರಣೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2.12 ಲಕ್ಷ ರೈತರಿಗೆ ಪರಿಹಾರ ವಿತರಣೆಯಾಗಿದ್ದು 1,54,792 ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿ ಕುರಿತು ಸಮೀಕ್ಷೆಯ ನಂತರ ರೈತರನ್ನು ಗುರುತಿಸಿ, ಪರಿಹಾರ ವಿತರಣೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯ ದಾಖಲೆಗಳನ್ನು ಜಿಲ್ಲಾಧಿಕಾರಿ ಪರಿಶೀಲನೆ ಮಾಡಿದ ನಂತರವೇ ಕಾನೂನು ಬದ್ಧವಾಗಿ ಆಯಾ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿದ್ದು, ಯಾವುದೇ ಲೋಪವಾಗದಂತೆ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ₹ 2ಸಾವಿರ ಪರಿಹಾರ ಯಾವುದಕ್ಕೂ ಸಾಲದು. ಎನ್‍ಡಿಆರ್‌ಎಫ್ ಮಾನದಂಡಕ್ಕೆ ಹೊರತಾಗಿ ರಾಜ್ಯ ಸರ್ಕಾರ ಸಹ ರೈತರ ನೆರವಿಗೆ ಬರಬೇಕು. ಅಗತ್ಯ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಾಲ ಮನ್ನಾಕ್ಕೆ ಒತ್ತಾಯ: ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಐದಾರು ವರ್ಷಗಳ ಹಿಂದೆ ಕೃಷಿ ಚಟುವಟಿಕೆಗಾಗಿ ಸಾಲ ಪಡೆದಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿ, ಪ್ರಕೃತಿ ವಿಕೋಪ, ಕೋವಿಡ್‌–19 ಪರಿಣಾಮವಾಗಿ ರೈತರು  ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಸರ್ಕಾರ ಅಗತ್ಯ ಪರಿಹಾರ ಹಾಗೂ ಸಾಲಮನ್ನಾ ಮಾಡುವಂತೆ ರೈತ ಸಂಘಟನೆಗಳು ಆಗ್ರಹಿಸಿವೆ.

ಮಳೆಯ ಕೊರತೆಯಿಂದ ಬೆಳೆಗಳು ಸಂಪೂರ್ಣವಾಗಿ ಹಾನಿ ಆಗಿದ್ದು, ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚುನಾವಣೆ ವೇಳೆ ಸಾಲಮನ್ನಾ ಮಾಡುವುದಾಗಿ ಅಶ್ವಾಸನೆ ಕೊಟ್ಟಿದ್ದು ಬಿಟ್ಟರೆ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಿಲ್ಲ. ಬ್ಯಾಂಕ್‌ನಲ್ಲಿ ಲಕ್ಷಾಂತರ ರೂಪಾಯಿ ಸಾಲದಿಂದಾಗಿ ರೈತರು ಆತ್ಮಹತ್ಯೆಯ ದಾರಿ ಹಿಡಿಯುವುದು ಅನಿವಾರ್ಯವಾಗಿದೆ ಎಂದು ರೈತ ಮುಖಂಡರು ಹೇಳುತ್ತಿದ್ದಾರೆ.

ಬ್ಯಾಂಕ್‌ಗಳು ರೈತರ ಜಮೀನನ್ನು ಬೇಕಾಬಿಟ್ಟಿ ಹರಾಜು ಮಾಡುತ್ತಿವೆ. ಈ ಬಗ್ಗೆಯೂ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಜಿ.ಜಿ.ಹಳ್ಳಿ ನಾರಾಯಣಸ್ವಾಮಿ ಹೇಳಿದ್ದಾರೆ.

ಪರಿಹಾರ ಪ್ರೋತ್ಸಾಹ ಧನ ಸಾಲಕ್ಕೆ ಜಮೆ

ಸರ್ಕಾರ ₹ 2ಸಾವಿರ ಪರಿಹಾರ ವಿತರಣೆ ಮಾಡುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗದು. ಎಕರೆಗೆ ಕನಿಷ್ಠ ₹ 25ಸಾವಿರ ಬಿಡುಗಡೆ ಮಾಡಿದರೆ ರೈತರ ಮಕ್ಕಳ ವಿದ್ಯಾಭ್ಯಾಸ ಹಾಗೂ ಕೃಷಿ ಚಟುವಟಿಕೆಗೆ ಅನುಕೂಲವಾಗುತ್ತಿತ್ತು  ಎಂದು ರೈತ ಮುಖಂಡ ಕಣಗಾಲ್‌ ಮೂರ್ತಿ ಹೇಳಿದ್ದಾರೆ. ಬಜೆಟ್‌ನಲ್ಲಿ ನಾನಾ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಲಾಗಿದೆ. ಆದರೆ ರೈತರ ಬಾಯಿಗೆ ಮಣ್ಣು ಹಾಕುವ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ. ಹಾಲು ಮಾರಾಟದಿಂದ ಬರುವ ಪ್ರೋತ್ಸಾಹ ಧನ ಉದ್ಯೋಗ ಖಾತರಿ ಯೋಜನೆಯ ಹಣ ಬರ ಪರಿಹಾರ ಮೊತ್ತಗಳನ್ನು ಬ್ಯಾಂಕ್‌ಗಳು ಸಾಲದ ಖಾತೆ ಜಮೆ ಮಾಡಿಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳೆ ಹಾನಿ ಅತಿವೃಷ್ಟಿ ಅನಾವೃಷ್ಟಿ ಜೊತೆಗೆ ಕಾಡಾನೆಗಳ ಉಪಟಳದಿಂದ ಬೇಸತ್ತಿರುವ ರೈತರಿಗೆ ಅಗತ್ಯ ಪರಿಹಾರ ಬೇಕಾಗಿದೆ ಎಂದು ತಿಳಿಸಿದ್ದಾರೆ.

ತಾಲ್ಲೂಕುವಾರು ಬಿಡುಗಡೆಯಾದ ಅನುದಾನ (₹ಕೋಟಿ)

ಅರಸೀಕೆರೆ;8.67

ಸಕಲೇಶಪುರ;0.95

ಆಲೂರು;2.26

ಅರಕಲಗೂಡು;5.03

ಬೇಲೂರು;3.74

ಚನ್ನರಾಯಪಟ್ಟಣ;6.72

ಹಾಸನ;7.58

ಹೊಳೆನರಸೀಪುರ;3.77

212024 ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿದ್ದು ಉಳಿದ ರೈತರಿಗೆ ಹಂತ ಹಂತವಾಗಿ ಪರಿಹಾರ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಮಾನಸ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT