ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹5.72 ಲಕ್ಷ ಖೋಟಾ ನೋಟು ವಶ

ಬೆಂಗಳೂರಿನ ಒಂದೇ ಕುಟುಂಬದ ಮೂವರ ಬಂಧನ
Last Updated 5 ನವೆಂಬರ್ 2020, 15:37 IST
ಅಕ್ಷರ ಗಾತ್ರ

ಹಾಸನ: ಸಕಲೇಶಪುರ ಪಟ್ಟಣದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಮೂವರನ್ನು ಬಂಧಿಸಿ, ₹5.72 ಲಕ್ಷ ಖೋಟಾ ನೋಟು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರಿನ ಚಾಮರಾಜಪೇಟೆಯ ಅಜಯ್‌ , ಪತ್ನಿ ಜಿ.ಶಾಂತಕುಮಾರಿ ಹಾಗೂ ಪುತ್ರ ಥಾಮಸ್‌ ಬಂಧಿತ ಆರೋಪಿಗಳು. ಇವರಿಂದ₹2,000, ₹500, ₹200 ಮುಖ ಬೆಲೆಯ ಖೋಟಾ ನೋಟುಗಳು, ₹ 1.52 ಲಕ್ಷ ನೈಜ ನೋಟು ಹಾಗೂ ಕೃತ್ಯ ಬಳಸಿದ ಕಂಪ್ಯೂಟರ್‌, ಸ್ಕ್ಯಾನರ್‌, ಪ್ರಿಂಟರ್‌ ಮತ್ತು ನೋಟು ಮುದ್ರಿಸಲು ಬಳಸುತ್ತಿದ್ದ ನಾಲ್ಕು ಅಚ್ಚುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ ಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಲ್ಲೂಕಿನ ದೋಣಿಗಾಲ್‌ನ ಅಂಗಡಿಗೆ ಬುಧವಾರ ಭೇಟಿ ನೀಡಿ ₹500 ಮುಖ ಬೆಲೆಯ ನೋಟು ಕೊಟ್ಟು ಸಿಗರೇಟ್‌, ಇತರ ಸಾಮಗ್ರಿ ಖರೀದಿಸಿ ಚಿಲ್ಲರೆ ಪಡೆದಿದ್ದಾರೆ. ಅವರು ನೀಡಿದ ನೋಟಿನ ಬಗ್ಗೆ ಅನುಮಾನಗೊಂಡ ವ್ಯಾಪಾರಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ನಕಲಿ ಎಂದು ಗೊತ್ತಾಗಿದೆ. ಈವರೆಗೆ ಆರೋಪಿಗಳು ಎಷ್ಟು ಹಣ ಚಲಾವಣೆ ಮಾಡಿದ್ದಾರೆ ಎಂಬುದುರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.

ಲಾಕ್‌ಡೌನ್‌ ಅವಧಿಯಲ್ಲಿ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ಅಜಯ್‌, ಸ್ಕ್ರೀನ್‌ ಪ್ರಿಟಿಂಗ್‌ ಮಾಡುವುದನ್ನು ಕಲಿತಿದ್ದ. ಬೆಂಗಳೂರಿನ ತನ್ನ ಮನೆಯಲ್ಲಿ ಕಂಪ್ಯೂಟರ್, ಸ್ಕ್ಯಾನರ್‌, ಪ್ರಿಂಟರ್‌, ನೋಟು ಮುದ್ರಣಕ್ಕೆ ಬೇಕಾಗುವ ಪೇಪರ್‌, ಸ್ಟಿಕರ್‌ ಮುಂತಾದ ಉಪಕರಣ ಇಟ್ಟುಕೊಂಡು ಖೋಟಾ ನೋಟು ಮುದ್ರಿಸುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಮನೆಯಲ್ಲಿ ಶೋಧ ನಡೆಸಿದಾಗ, ಚಲಾವಣೆಗೆ ಸಿದ್ಧಪಡಿಸಿ ₹2,000 ಮುಖ ಬೆಲೆ ₹1 ಲಕ್ಷ, ₹200 ಮುಖ ಬೆಲೆಯ ₹30,500 ಹಾಗೂ ಎ4 ಅಳತೆಯ ಪೇಪರ್‌ನಲ್ಲಿ ಮುದ್ರಿಸಿದ್ದ ₹500 ಮುಖಬೆಲೆಯ ₹3.24 ಲಕ್ಷ ಮತ್ತು ₹200 ಮುಖ ಬೆಲೆಯ ₹24 ಸಾವಿರ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಆರೋಪಿಗಳು ಬೆಂಗಳೂರಿನಲ್ಲಿ ಕಾರು ಬಾಡಿಗೆ ಪಡೆದು ಹೊರ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಅಂಗಡಿಗಳಲ್ಲಿ ಸಾಮಾನು ಖರೀದಿಸಿ ನಕಲಿ ನೋಟು ಚಲಾವಣೆ ಮಾಡಿ, ನೈಜ ಹಣ ಪಡೆಯುತ್ತಿದ್ದರು. ಇವರಿಗೆ ಇಂತಹ ಯೋಚನೆ ಹೊಳೆದಿದ್ದು ಹೇಗೆ? ಎಷ್ಟು ಮಂದಿ ಶಾಮೀಲಾಗಿದ್ದಾರೆ? ಎಷ್ಟು ಹಣ ಚಲಾವಣೆ ಮಾಡಲಾಗಿದೆ? ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ಆರೋಪಿಗಳ ಬ್ಯಾಂಕ್‌ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದರು.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಸಕಲೇಶಪುರದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಭಾರತಿ ರಾಯಣ್ಣಗೌಡ, ಎಎಸ್‌ಐ ರಂಗಸ್ವಾಮಿ, ಸಿಬ್ಬಂದಿಗಳಾದ ಗಿರೀಶ್‌, ಸೋಮಶೇಖರ್ ಎಚ್.ಎಂ, ಸುನಿಲ್‌, ಲೋಕೇಶ್‌, ಪೃಥ್ವಿ, ಸತೀಶ್‌ ಅವರನ್ನು ಎಸ್‌ಪಿ ಪ್ರಶಂಶಿಸಿ, ಬಹುಮಾನ ಘೋಷಿಸಿದರು.

ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌.ನಂದಿನಿ, ಡಿಎಸ್‌ಪಿ ಗೋಪಿ, ಸಿಪಿಐ ಗಿರೀಶ್‌,ಪಿಎಸ್‌ಐ ಚಂದ್ರಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT