ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಚಿನ್ನಾಭರಣಕ್ಕಾಗಿ ತಾಯಿ, ಇಬ್ಬರು ಮಕ್ಕಳ ಕೊಲೆ ಪ್ರಕರಣ: ಆರೋಪಿ ಬಂಧನ

Published 7 ಜನವರಿ 2024, 13:55 IST
Last Updated 7 ಜನವರಿ 2024, 13:55 IST
ಅಕ್ಷರ ಗಾತ್ರ

ಹಾಸನ: ನಗರದ ದಾಸರಕೊಪ್ಪಲಿನಲ್ಲಿ ನಡೆದಿದ್ದ ತಾಯಿ ಹಾಗೂ ಇಬ್ಬರು ಮಕ್ಕಳ ನಿಗೂಢ ಸಾವಿನ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ವಿಜಯಪುರದ ನಿಂಗಪ್ಪ ಕಾಗವಾಡ ಎಂಬಾತನನ್ನು ಪೆನ್ಷನ್​​​ ಮೊಹಲ್ಲಾ ಠಾಣೆ ಪೊಲೀಸರು ಬಂಧಿಸಿದ್ದು, ಚಿನ್ನಾಭರಣಕ್ಕಾಗಿ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ಆರೋಪಿ ನಿಂಗಪ್ಪ ಹಣ ಕೊಡುವಂತೆ ಶಿವಮ್ಮಳನ್ನು ಪೀಡಿಸುತ್ತಿದ್ದ. ಆಕೆ ಹಣ ಕೊಡಲು ನಿರಾಕರಿಸಿದಾಗ ಶಿವಮ್ಮ, ಆಕೆಯ ಮಕ್ಕಳಾದ ಪವನ್, ಸಿಂಚನಾರ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ. ಮೊದಲಿಗೆ ಇದೊಂದು ಆತ್ಮಹತ್ಯೆ ಎಂಬ ಅನುಮಾನ ವ್ಯಕ್ತವಾಗಿತ್ತು.

ಶಿವಮ್ಮಳ ತಾಯಿ ಹುಲಿಗೆಮ್ಮ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಿದಾಗ ಕೊಲೆ ಎಂಬುದು ಬೆಳಕಿಗೆ ಬಂದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಜ. 1 ರಂದು ನಗರದ ಹೊರವಲಯದ ದಾಸರಕೊಪ್ಪಲಿನ ಮನೆಯೊಂದರಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಬೇಕರಿ ಕೆಲಸಕ್ಕೆ ತುಮಕೂರಿಗೆ ಹೋಗಿದ್ದ ಪತಿ ತೀರ್ಥಪ್ರಸಾದ್‌ ಮನೆಗೆ ಬಂದು ನೋಡಿದಾಗ ಪ್ರಕರಣ ಬಯಲಾಗಿತ್ತು.

ಕೊಲೆಯಾದ ಶಿವಮ್ಮ ಹಾಗೂ ಅವರ ಪತಿ ತೀರ್ಥಪ್ರಸಾದ್ ಕೆಲ ದಿನಗಳ ಹಿಂದೆ ವಿಜಯಪುರದಲ್ಲಿ ಬೇಕರಿ ನಡೆಸುತ್ತಿದ್ದರು. ಈ ವೇಳೆ ವಿಜಯಪುರದ ನಿಂಗಪ್ಪ ಕಾಗವಾಡ ಹಾಗೂ ಶಿವಮ್ಮ ಮಧ್ಯೆ ಸ್ನೇಹ ಬೆಳೆದಿತ್ತು. ಬೇಕರಿಯಲ್ಲಿ ನಷ್ಟ ಆಗಿದ್ದರಿಂದ, ಅದನ್ನು ಮುಚ್ಚಿ ವಾಪಸ್ ಬಂದಿದ್ದ ತೀರ್ಥಪ್ರಸಾದ್‌, ತುಮಕೂರಿನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು. ದೂರವಿದ್ದ ಗಂಡನಿಗೆ ಮರೆಮಾಚಿ ಗೆಳೆಯ ನಿಂಗಪ್ಪನ ಜೊತೆ ಶಿವಮ್ಮ ಸಲುಗೆಯಿಂದ ಇದ್ದಳು.

ಗಂಡ ಬೇಕರಿ ಕೆಲಸಕ್ಕೆ ಆಚೆ ಹೋಗಿದ್ದು, ಹೊಸ ವರ್ಷಾಚರಣೆಗೆ ಶಿವಮ್ಮ ತನ್ನ ಸ್ನೇಹಿತನ ನಿಂಗಪ್ಪನನ್ನು ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಶಿವಮ್ಮ ಹಾಗೂ ಆರೋಪಿ ಮಧ್ಯೆ ಹಣಕ್ಕೆ ಜಗಳವಾಗಿದೆ. ಆರೋಪಿ ಹಣ ನೀಡುವಂತೆ ಪೀಡಿಸಿದ್ದಾನೆ. ನಿರಾಕರಿಸಿದಕ್ಕೆ ಕತ್ತು ಹಿಸುಕಿ ಶಿವಮ್ಮಳ ಕೊಲೆ ಮಾಡಿದ್ದಾನೆ. ಬಳಿಕ ಮಕ್ಕಳಾದ ಸಿಂಚನಾ, ಪವನ್ ಕೊಲೆ ಮಾಡಿದ್ದು, ಅಡುಗೆ ಅನಿಲದ ಸಿಲಿಂಡರ್ ಪೈಪ್ ತೆಗೆದು, ಶಿವಮ್ಮಳ ಮೊಬೈಲ್, ತಾಳಿ ಸರದೊಂದಿಗೆ ಪರಾರಿ ಆಗಿದ್ದ. ಮರು ದಿನ ಶಿವಮ್ಮಳ ಪತಿ ತೀರ್ಥಪ್ರಸಾದ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ನಿಂಗಪ್ಪ ಕಾಗವಾಡನ ಮೇಲೆ ಅನುಮಾನ ವ್ಯಕ್ತಪಡಿಸಿ, ಕೊಲೆಯಾದ ಶಿವಮ್ಮ ಅವರ ತಾಯಿ ಹುಲಿಗೆಮ್ಮ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಜನರ ಹಿಡಿಶಾಪ
ಆರೋಪಿ ನಿಂಗಪ್ಪ ಕಾಗವಾಡನನ್ನು ಪೊಲೀಸರು ಸ್ಥಳ ಮಹಜರಿಗೆ ದಾಸರಕೊಪ್ಪಲಿಗೆ ಕರೆದೊಯ್ದ ವೇಳೆ ಸುತ್ತಲಿನ ಮಹಿಳೆಯರು ಜನರು ಹಿಡಿ ಶಾಪ ಹಾಕಿದರು. ‘ನಿನಗೆ ನಾಚಿಕೆ ಆಗಲ್ವಾ. ಸಣ್ಣ ಮಕ್ಕಳನ್ನು ಕೊಲೆ ಮಾಡೋಕೆ ಹೇಗಾದರೂ ಮನಸು ಬಂತು’ ಎಂದು ಆಕ್ರೋಶ ಹೊರಹಾಕಿದರು. ‘ಈತನಿಗೆ ಅಂತಿಂಥ ಶಿಕ್ಷೆ ಕೊಡಬೇಡಿ. ನೇರವಾಗಿ ನೇಣಿಗೆ ಹಾಕಿ. ಇವರಂಥ ಜನರು ಸಮಾಜದಲ್ಲಿ ಇರಲು ಯೋಗ್ಯರಲ್ಲ’ ಎಂದು ಜನರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT