ವಿಷ್ಣುವರ್ಧನ ನಿರ್ಮಿಸಿದ ದೇಗುಲ
ಇತಿಹಾಸ ಹೇಳುವಂತೆ ಒಬ್ಬ ಕೊರಮನು ಬುಟ್ಟಿ ಹೆಣೆಯಲು ಬಿದಿರು ತರಲು ಹೋಗಿದ್ದನು. ಬಿದಿರಿನ ಗುಂಪೊಂದಕ್ಕೆ ಕತ್ತಿಯನ್ನು ಹೊಡೆಯುವಾಗ ಆಯತಪ್ಪಿ ಏಟು ಒಂದು ಬಂಡೆಗೆ ತಾಗುತ್ತದೆ. ಆ ಬಂಡೆಯಿಂದ ಒಂದು ಬದಿಯಲ್ಲಿ ಹಾಲು ಮತ್ತೊಂದು ಬದಿಯಲ್ಲಿ ರಕ್ತ ಬರುತ್ತದೆ. ಇದರಿಂದ ಗಾಬರಿಯಾದ ಅವನು ಪ್ರಜ್ಞೆ ತಪ್ಪಿ ಬೀಳುವನು. ಮನೆಗೆ ವಾಪಸ್ ಬಾರದ ಈತನನ್ನು ಮನೆಯವರು ಹುಡುಕಿಕೊಂಡು ಹೋದರು. ಪ್ರಜ್ಞೆ ಬಂದ ವ್ಯಕ್ತಿಯು ನಡೆದ ವಿಷಯವನ್ನು ತಿಳಿಸುತ್ತಾನೆ. ಸ್ಥಳವನ್ನು ಗಮನಿಸಿದಾಗ ಬ್ರಹ್ಮದೇವನ ವಿಗ್ರಹ ಪತ್ತೆಯಾಗುತ್ತದೆ. ಆ ಉದ್ಭವ ಮೂರ್ತಿಯನ್ನು ಪಾಳೆಗಾರರಿಂದ ರಕ್ಷಿಸಲೆಂದು ವಿಷ್ಣುವರ್ಧನ ರಾಜನು ದೇವಾಲಯವನ್ನು ನಿರ್ಮಾಣ ಮಾಡಿಸುತ್ತಾನೆ. ಹೊಯ್ಸಳ ದೊರೆ ವಿಷ್ಣುವರ್ಧನ ಜೈನ ಧರ್ಮದಿಂದ ವೈಷ್ಣವ ಧರ್ಮಕ್ಕೆ ಮತಾಂತರ ಹೊಂದಿದ್ದರಿಂದ ಬ್ರಹ್ಮದೇವನನ್ನೆ ರಂಗನಾಥನೆಂಬ ಹೆಸರಿನಿಂದ ಕರೆಯಲಾರಂಭಿಸಿದರು ಎನ್ನಲಾಗಿದೆ.