ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು: ಅಡಿಬೈಲು ರಂಗನಾಥಸ್ವಾಮಿ ಜಾತ್ರೆ ಸಂಪನ್ನ

Published 25 ಫೆಬ್ರುವರಿ 2024, 14:02 IST
Last Updated 25 ಫೆಬ್ರುವರಿ 2024, 14:02 IST
ಅಕ್ಷರ ಗಾತ್ರ

ಆಲೂರು: ತಾಲ್ಲೂಕಿನ ಎರಡು ಹೋಬಳಿಗಳ ಧಾರ್ಮಿಕ ಸಂಬಂಧ ಬೆಸೆಯುವ ಅಡಿಬೈಲು ಶ್ರೀ ರಂಗನಾಥಸ್ವಾಮಿ ಜಾತ್ರೆ ಫೆ. 23ರಿಂದ 25ರ ವರೆಗೆ ವೈಭವದಿಂದ ನೆರವೇರಿತು.

ಶುಕ್ರವಾರ ರಾತ್ರಿ ರಂಗನಾಥಸ್ವಾಮಿ ಅಡ್ಡೆ ದೇವರನ್ನು ಕುಂದೂರು ಕಡೆಯವರು, ಭರತೂರು ಹೊಳೆ ಅಂಗಳಕ್ಕೆ ತಂದರು. ಶನಿವಾರ ಬೆಳಿಗ್ಗೆಯಿಂದಲೇ  ಬಿಂದಿಗಮ್ಮ ಕಳಸವನ್ನು ತಲೆ ಮೇಲೆ ಹೊತ್ತು ಒಯ್ಯುವ ವೈಷ್ಣವ ವಂಶಸ್ಥರಾದ ಶಾಂತಯ್ಯ ಅವರಿಗೆ ಸಂಜೆಯೊಳಗೆ ಏಳು ಬಾರಿ ತಲೆ ಬೋಳಿಸಲಾಯಿತು. ಶನಿವಾರ ಹಗಲು ಜಾತ್ರೆ ನಡೆಯಿತು.

ನಂತರ ಗೋವಿಂದ ನಾಮಸ್ಮರಣೆಯೊಂದಿಗೆ ಕಳಸವನ್ನು ಬೋಳು ತಲೆ ಮೇಲೆ ಇಡಲಾಯಿತು. ರಂಗನಾಥಸ್ವಾಮಿ ಮೆರೆ ದೇವರೊಂದಿಗೆ ಕಳಸವನ್ನು ಹೊತ್ತವರು ಕಳಸವನ್ನು ಕೈಯಲ್ಲಿ ಹಿಡಿಯದೆ ವಾದ್ಯದೊಂದಿಗೆ ಕೇವಲ ಪಂಜಿನ ಬೆಳಕಿನಿಂದ ಬೆಟ್ಟದ ಮೇಲಿರುವ ರಂಗನಾಥಸ್ವಾಮಿ ದೇವಾಲಯಕ್ಕೆ ನಡೆದು ಹೋದರು. ಈ ಮಾರ್ಗದಲ್ಲಿ ಭರತೂರು, ಪುರಭೈರವನಹಳ್ಳಿ, ಹಂಜಳಿಗೆ, ಕಲ್ಲಾರೆ, ಕೊಡತ್ತವಳ್ಳಿ, ಕಾಣಿಗೆರೆ, ಹೊಸಪುರ ಮತ್ತು ಕಣಿವೆ ಬಸವನಹಳ್ಳಿ ಎಂಬ ಎಂಟು ಊರು ಬಾಗಿಲುಗಳನ್ನು ಕಳಸ ಪ್ರವೇಶಿಸಿತು.

ಪ್ರತಿ ಊರು ಬಾಗಿಲಿನಲ್ಲಿ ಅಕ್ಕಿಯಿಂದ ಹಸೆ ಬರೆಯಲಾಗಿತ್ತು. ಕಳಸ ಊರು ಬಾಗಿಲಿಗೆ ಬಂದು ಮಂಡಿಯೂರಿ ಗದ್ದವನ್ನು ಅಕ್ಕಿಗೆ ಸ್ಪರ್ಶಿಸಿದಾಗ ನೆರದಿದ್ದವರು ಗೋವಿಂದ ನಾಮಸ್ಮರಣೆ ಮಾಡಿದರು. ಕಳಸ ತೆರಳಿದ ತಕ್ಷಣ ಸ್ಥಳದಲ್ಲಿದ್ದವರು ಹಸೆ ಅಕ್ಕಿ ಪಡೆಯಲು ಮುಗಿ ಬಿದ್ದರು. ಈ ಅಕ್ಕಿಯನ್ನು ಸೇವಿಸಿದರೆ ಜಠರ ಕಾಯಿಲೆ ಗುಣವಾಗುತ್ತದೆ ಎಂಬ ಪ್ರತೀತಿ ಇದೆ.

ಹೊಳೆಯಿಂದ ಸುಮರು 8 ಕಿ.ಮೀ ದೂರವಿರುವ ರಂಗನಾಥಸ್ವಾಮಿ ದೇವಾಲಯವನ್ನು ಗದ್ದೆ, ಕಾಫಿ ತೋಟ, ಗುಡ್ಡದಲ್ಲಿ ಹಾದುಹೋದ ಕಳಸ ಕೇವಲ ಒಂದು ಗಂಟೆಯಲ್ಲಿ ತಲುಪಿತು. ದೇವಸ್ಥಾನ ತಲುಪಿದ ನಂತರ ಉಯ್ಯಾಲೆ ಸೇವೆ ಮಾಡಿ ಬಿಂದಿಗಮ್ಮ ದೇವಿಯನ್ನು ಮನೆಗೆ ತುಂಬಿಕೊಳ್ಳಲಾಯಿತು.
ಈ ಜಾತ್ರೆ ವಿಶೇಷವೆಂದರೆ, ರಂಗನಾಥಸ್ವಾಮಿ ಮತ್ತು ಬಿಂದಿಗಮ್ಮ ದೇವಿಯ ಮದುವೆ ಸಂಭ್ರಮದ ಜಾತ್ರೆ. ಕುಂದೂರು ಕಡೆಯವರು ವರನ ಕಡೆಯವರು, ಭರತೂರು ಕಡೆಯವರು ವಧುವಿನ ಕಡೆಯವರು ಎಂದು ಗುರುತಿಸಲಾಗುತ್ತದೆ. ಬಿಂದಿಗಮ್ಮ ಕಳಸವನ್ನು ಕಳಿಸುವಾಗ, ಕುಂದೂರು ಕಡೆಯವರನ್ನು ಕರೆದು ಹೂ ಹಾರ ಹಾಕಿ ಗೌರವಿಸಿದರು.

ಭಾನುವಾರ ಬೆಟ್ಟದ ಮೇಲೆ ಹಗಲು ಜಾತ್ರೆ ನಡೆಯಿತು. ಸೂಕ್ತ ಪೊಲೀಸ್ ಬಂದೂಬಸ್ತ್ ಕಲ್ಪಿಸಲಾಗಿತ್ತು. ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ.ವಿ. ಉಮೇಶ್, ಸದಸ್ಯರಾದ ಮುಖ್ಯ ಅರ್ಚಕ ಎ.ಜಿ. ನಾರಾಯಣ ಅಡಿಬೈಲು, ಮಂಜುಳ ಹನುಮನಹಳ್ಳಿ, ಅಶೋಕ ಕುಂದೂರು, ಶಶಿಕಲಾ ಕುಂದೂರು, ಬಾಲರಾಜು ಕಲ್ಲರೆ, ರತೀಶ ಮಾದಿಹಳ್ಳಿ, ಯತೀಶ್ ಕುಂದೂರು ಮತ್ತು ರಂಗೇಗೌಡ ಗಂಜಿಗೆರೆ ಅವರು ಹೊಳೆ ಬದಿಯಲ್ಲಿ ಮತ್ತು ಬೆಟ್ಟದ ಮೇಲೆ ಜಾತ್ರೆಗೆ ಆಗಮಿಸಿ ದೇವರ ದರ್ಶನವನ್ನು ಪಡೆದರು. ಸಹಕರಿಸಿದ ಭಕ್ತರಿಗೆ ಆಭಿನಂದನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT