ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರದಿಂದ ಸಾಗಿದ ಶುಂಠಿ ನಾಟಿ: ವೆಚ್ಚ ಹೆಚ್ಚಳದ ನಡುವೆಯೂ ತಗ್ಗದ ರೈತರ ಉತ್ಸಾಹ

Published 1 ಮಾರ್ಚ್ 2024, 7:00 IST
Last Updated 1 ಮಾರ್ಚ್ 2024, 7:00 IST
ಅಕ್ಷರ ಗಾತ್ರ

ಕೊಣನೂರು: ಹಸಿ ಶುಂಠಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚುತ್ತಿದ್ದರೂ, ಶುಂಠಿ ಬಿತ್ತನೆ ಕಾರ್ಯವು ಭರದಿಂದ ಸಾಗಿದೆ. ರೈತರು ಉತ್ಸಾಹದಿಂದ ಶುಂಠಿ ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ.

ಕಳೆದ ವರ್ಷ ಹಸಿ ಶುಂಠಿಗೆ ಉತ್ತಮ ಬೆಲೆ ದೊರೆತಿದ್ದು, ಸಾವಿರ ರೂಪಾಯಿಗಳಲ್ಲಿ ಸಿಗುತ್ತಿದ್ದ ಲಾಭವು ಲಕ್ಷ ರೂಪಾಯಿಯಲ್ಲಿ ಸಿಕ್ಕಿದ್ದರಿಂದ ರೈತರ ಉತ್ಸಾಹ ಇಮ್ಮಡಿಯಾಗಿದೆ. ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳ ವ್ಯಾಪ್ತಿಯಲ್ಲಿ ಈ ವರ್ಷ ಶುಂಠಿ ಕೃಷಿಯು ಹೆಚ್ಚಿನ ಆದ್ಯತೆ ಪಡೆಯುತ್ತಿದೆ.

ಈ ಭಾಗದಲ್ಲಿ ಹೊಗೆಸೊಪ್ಪು ಪ್ರಮುಖ ವಾಣಿಜ್ಯ ಬೆಳೆ ಎನಿಸಿಕೊಂಡಿದ್ದು, ಅದಾಗ್ಯೂ ಶುಂಠಿ ಬೆಳೆಯುವ ಕೃಷಿ ಭೂಮಿಯು ವಿಸ್ತಾರಗೊಳ್ಳುತ್ತಿದೆ. ಮತ್ತೊಂದು ಮುಖ್ಯ ವಾಣಿಜ್ಯ ಬೆಳೆಯಾಗಿ ಪರಿಣಮಿಸುತ್ತಿದೆ.

ಶುಂಠಿ ಬೆಳೆಯಲ್ಲಿ ಉತ್ತಮ ಇಳುವರಿಯ ದೃಷ್ಟಿಯಿಂದ ಫೆಬ್ರುವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಬಿತ್ತನೆ ಮಾಡುವುದು ಸಾಮಾನ್ಯ. ಈಗಾಗಲೇ ಶುಂಠಿ ನಾಟಿ ಪ್ರಾರಂಭವಾಗಿದೆ. ಉತ್ತಮ ಲಾಭ ಗಳಿಸುವ ನಿರೀಕ್ಷೆಯಲ್ಲಿ ಉತ್ಸಾಹದಿಂದಲೇ ಚಟುವಟಿಕೆ ಆರಂಭಿಸಿರುವ ಬೆಳೆಗಾರರಿಗೆ ಪಿವಿಸಿ ಪೈಪ್, ಕೋಳಿಗೊಬ್ಬರ, ಬಿತ್ತನೆ ಬೀಜದ ಬೆಲೆ ಮತ್ತು ಕೂಲಿಯಲ್ಲಿನ ಹೆಚ್ಚಳವು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

2023 ರ ಜನವರಿಯಲ್ಲಿ ಹಸಿಶುಂಠಿ ಬೆಲೆಯು ಪ್ರತಿ 60 ಕೆ.ಜಿ.ಯ ಚೀಲಕ್ಕೆ ₹ 2ಸಾವಿರದಿಂದ ₹ 2,200 ಕ್ಕೆ ಮಾರಾಟವಾಗಿತ್ತು. ಮಾರ್ಚ್‌ ಮತ್ತು ಏಪ್ಲ್‌ನಲ್ಲಿ ಈ ಬೆಲೆ ₹ 5 ಸಾವಿರ ತಲುಪಿತ್ತು. ಮೇ ಹಾಗೂ ಜೂನ್‌ನಲ್ಲಿ ₹ 10ಸಾವಿರದಿಂದ ₹11 ಸಾವಿರಕ್ಕೆ ಬೆಲೆ ಹೆಚ್ಚಿದ್ದು ಬೆಳೆಗಾರರಲ್ಲಿ ಸಂಚನಲ ಮೂಡಿಸಿತ್ತು.

ಜುಲೈ ಮತ್ತು ಆಗಸ್ಟ್ ನಲ್ಲಿ ಹೊಸ ಶುಂಠಿಯು ಮಾರುಕಟ್ಟೆಗೆ ಬಂದಿದ್ದು, ₹ 3500, ಸೆಪ್ಟೆಂಬರ್‌ನಲ್ಲಿ ₹3,800, ಅಕ್ಟೋಬರ್ನಲ್ಲಿ ₹ 4ಸಾವಿರದಿಂದ₹ 5 ಸಾವಿರ ತಲುಪಿತು. ನವೆಂಬರ್ ಮತ್ತು ಡಿಸೆಂಬರ್ನಲ್ಲಿ ₹4,500ರಿಂದ ₹ 4800, ಈ ವರ್ಷದ ಜನವರಿ -ಫೆಬ್ರುವರಿ ತಿಂಗಳಲ್ಲಿ ₹4,300 ರಿಂದ ₹4ಸಾವಿರದವರೆಗೆ ಬೆಲೆ ಸಿಕ್ಕಿತ್ತು. ಸದ್ಯಕ್ಕೆ ಶುಂಠಿಯ ಬೆಲೆ ₹4,500 ಇದೆ.

ಕಳೆದ ವರ್ಷ ₹2,500 ರಿಂದ ₹3,200 ದೊರೆತಿದ್ದ ಬೀಜದ ಶುಂಠಿಯು, ಈ ವರ್ಷ ಪ್ರತಿ 60 ಕೆ.ಜಿ.ಗೆ ₹ 6,500ಕ್ಕೆ ತಲುಪಿದ್ದು, ದುಬಾರಿ ಎನಿಸಿತು. ಜನವರಿಯ ನಂತರ ಮಾರ್ಕೆಟ್‌ನಲ್ಲಿ ಶುಂಠಿಯ ಬೆಲೆ ಸ್ವಲ್ಪ ಇಳಿಮುಖವಾದ್ದರಿಂದ ಬೀಜದ ಬೆಲೆಯು ತುಸು ಕಡಿಮೆಯಾಗಿದೆ. ಸದ್ಯ ₹5,500 ಕ್ಕೆ ಮಾರಾಟ ಆಗುತ್ತಿದೆ.

ಕೋಳಿಗೊಬ್ಬರ ದುಬಾರಿ: ಶುಂಠಿ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯುವಲ್ಲಿ ಕೋಳಿಗೊಬ್ಬರಕ್ಕೆ ರೈತರು ಮಹತ್ವ ನೀಡುತ್ತಿರುವುದರಿಂದ ಈ ಬಾರಿ ಕೋಳಿ ಕೊಬ್ಬರದ ಬೆಲೆಯೂ ದುಬಾರಿಯಾಗಿದೆ.

ಪ್ರತಿ ವರ್ಷ ಅಗತ್ಯಕ್ಕೆ ತಕ್ಕಷ್ಟು ಕೋಳಿಗೊಬ್ಬರ ಟನ್‌ಗೆ ₹2,500 ರಿಂದ ₹3ಸಾವಿರಕ್ಕೆ ಸಿಗುತ್ತಿತ್ತು. ಈ ವರ್ಷ ಬೇಡಿಕೆ ಹೆಚ್ಚಿದ್ದರಿಂದ ಟನ್‌ಗೆ ₹3ಸಾವಿರದಿಂದ ₹ 3,500 ಕ್ಕೆ ತಲುಪಿದೆ. ಬೆಲೆ ಎಷ್ಟಿದ್ದರೂ ಕೊಳ್ಳಲು ಜನತೆ ಸಿದ್ಧರಿದ್ದರೂ, ಕೇಳಿದ ಸಮಯಕ್ಕೆ ಸಿಗದೇ ವ್ಯಾಪಾರಿಗಳು ಹೇಳಿದ ಸಮಯಕ್ಕೆ ಕಾದು ತೆಗೆದುಕೊಳ್ಳಬೇಕಿದೆ.

ತಮಿಳುನಾಡಿನಿಂದ ಪ್ರತಿದಿನ ರಾಮನಾಥಪುರಕ್ಕೆ 10 ರಿಂದ 15 ಲಾರಿಗಳು ಕೋಳಿಗೊಬ್ಬರ ಹೊತ್ತು ತರುತ್ತಿದ್ದರೂ ಬೇಡಿಕೆ ತಗ್ಗಿಲ್ಲ, ಗೊಬ್ಬರಕ್ಕಾಗಿ ಬೆಳೆಗಾರರ ಪರದಾಟ ತಪ್ಪಿಲ್ಲ.

ಲಾರಿಯಿಂದ ಕೋಳಿಗೊಬ್ಬರವನ್ನು ಇಳಿಸಿಕೊಳ್ಳುತ್ತಿರುವ ಜನರು.
ಲಾರಿಯಿಂದ ಕೋಳಿಗೊಬ್ಬರವನ್ನು ಇಳಿಸಿಕೊಳ್ಳುತ್ತಿರುವ ಜನರು.
ಕೊಣನೂರು ಹೋಬಳಿಯ ಬಿಸಲಹಳ್ಳಿ ಬಳಿ ಶುಂಠಿಯನ್ನು ನಾಟಿ ಮಾಡಿರುವುದು.
ಕೊಣನೂರು ಹೋಬಳಿಯ ಬಿಸಲಹಳ್ಳಿ ಬಳಿ ಶುಂಠಿಯನ್ನು ನಾಟಿ ಮಾಡಿರುವುದು.
ಕಡಿಮೆ ಪ್ರದೇಶದಲ್ಲಿ ಹೆಚ್ಚಿನ ಇಳುವರಿಗೆ ತಂತ್ರಜ್ಞಾನ ಬಳಸಲು ಸಲಹೆ ಈ ವರ್ಷ ಶುಂಠಿಗೆ ಉತ್ತಮ ಬೆಲೆ: ರೈತರಲ್ಲಿ ಮತ್ತಷ್ಟು ಉತ್ಸಾಹ
ಅರಕಲಗೂಡು ತಾಲ್ಲೂಕಿನಲ್ಲಿ ಕಳೆದ ವರ್ಷ 1300 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆದಿದ್ದು ಈ ವರ್ಷ 1500 ಹೆಕ್ಟೇರ್ ದಾಟುವ ಸಾಧ್ಯತೆಯಿದೆ.
ರಾಜೇಶ್ ಡಿ. ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ
ಒಂದು ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆಸಲು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ₹ 1 ಲಕ್ಷಕ್ಕಿಂತ ಹೆಚ್ಚು ಖರ್ಚಾಗುತ್ತಿದೆ. ದರ ಉತ್ತಮವಾಗಿ ದೊರೆತಲ್ಲಿ ಲಾಭವಾಗುತ್ತದೆ.
ಸತೀಶ್ ಸರಗೂರು ಶುಂಠಿ ಬೆಳೆಗಾರ
ಪೈಪ್‌ಗಳೂ ದುಬಾರಿ
ಶುಂಠಿ ಬೆಳೆಸಲು ಕೋಳಿಗೊಬ್ಬರ ಅತಿಯಾದ ರಾಸಾಯನಿಕಗಳನ್ನು ಬಳಸುವುದರಿಂದ ಎಲ್ಲ ಗಿಡಗಳಿಗೂ ಹೆಚ್ಚು ನೀರು ಒದಗಿಸಬೇಕಿದೆ. ಹಾಗಾಗಿ ನಿಯಮಿತವಾಗಿ ಕ್ರಮವಾಗಿ ನೀರು ಒದಗಿಸಲು ಹೆಚ್ಚು ಪಿವಿಸಿ ಪೈಪ್‌ಗಳ ಅಗತ್ಯವಿದೆ. ವರ್ಷದಿಂದ ವರ್ಷಕ್ಕೆ ಪೈಪ್ ಬೆಲೆ ಏರುಮುಖವಾಗುತ್ತಲೇ ಇದೆ. ₹ 80 ರಿಂದ ₹ 90 ಇದ್ದ ಮುಕ್ಕಾಲು ಇಂಚು 20 ಅಡಿಯ ಪ್ಲಾಸ್ಟಿಕ್ ಪಿವಿಸಿ ಪೈಪ್‌ಗೆ ಈ ವರ್ಷ ₹ 90 ರಿಂದ ₹ 110 ತೆರಬೇಕಿದೆ. ಕೂಲಿಯಲ್ಲೂ ಹೆಚ್ಚಳ: 2023 ರಲ್ಲಿ ಒಂದು ಎಕರೆ ವಿಸ್ಥೀರ್ಣದಲ್ಲಿ ಶುಂಠಿ ನಾಟಿ ಮಾಡಲು ₹ 12ಸಾವಿರದಿಂದ ₹ 15 ಸಾವಿರ ಕೊಡಬೇಕಿತ್ತು. ಒಂದು ಎಕರೆಯಲ್ಲಿ ನಾಟಿ ಮಾಡಲು ಈ ವರ್ಷ ₹ 18ಸಾವಿರದಿಂದ ₹ 22 ಸಾವಿರ ಕೂಲಿ ನೀಡಬೇಕಿದೆ. ನಾಟಿ ಮಾಡುವಾಗಲೆ ಕೂಲಿ ಈ ಪ್ರಮಾಣದಲ್ಲಿ ಹೆಚ್ಚಿದರೆ ಕಳೆ ತೆಗೆಯುವ ಗೊಬ್ಬರ ನೀಡುವ ರಾಸಾಯನಿಕ ಸಿಂಪಡಿಸುವ ಮತ್ತು ಬುಡಕ್ಕೆ ಮಣ್ಣು ಒದಗಿಸುವಾಗ ಕೂಲಿಯಲ್ಲಾಗುವ ಹೆಚ್ಚಳವನ್ನು ಸಹಿಸುವುದು ಹೇಗೆ ಎಂಬುದು ಬೆಳೆಗಾರರಿಗೆ ತಲೆನೋವಾಗಿದೆ.
ಜಮೀನಿಗೆ ಡಿಮ್ಯಾಂಡ್
ಶುಂಠಿಯ ಬೆಲೆಯು ಹೆಚ್ಚಿದಂತೆ ಶುಂಠಿ ಬೆಳೆಯಲು ಅನುಕೂಲಕರವಾದ ಜಮೀನಿಗೂ ಬೆಲೆ ಹೆಚ್ಚುತ್ತಿದ್ದು ಒಂದು ವರ್ಷದ ಅವಧಿಗೆ ಒಂದು ಎಕರೆ ಜಮೀನನ್ನು ಒಪ್ಪಂದದ ಮೇರೆಗೆ ಕೊಳವೆಬಾವಿ ಸೌಲಭ್ಯವಿದ್ದರೆ ಕಳೆದ ವರ್ಷ ₹ 50ಸಾವಿರದಿಂದ ₹ 60 ಸಾವಿರ ಬೆಲೆ ಇತ್ತು. ಈ ವರ್ಷ ₹ 75 ಸಾವಿರದಿಂದ ₹ 90 ಸಾವಿರಕ್ಕೆ ಒಪ್ಪಂದಗಳಾಗಿವೆ. ವಿದ್ಯುತ್‌ ಅಭಾವದ ಭಯ: ಒಪ್ಪಂದ ಮಾಡಿಕೊಂಡು ಬಿತ್ತನೆ ಪ್ರಾರಂಭವಾಗಿದ್ದು ಶುಂಠಿ ಬೆಳೆಯಲು ಹಾಕಬೇಕಿರುವ ಬಂಡವಾಳದ ಶೇ 70 ರಷ್ಟು ವೆಚ್ಚ ಮಾಡಿದ್ದಾಗಿದೆ. ಶುಂಠಿಗೆ ಅತ್ಯಂತ ಹೆಚ್ಚು ನೀರು ಒದಗಿಸಬೇಕಿದ್ದು ದಿನಕ್ಕೆ 7 ಗಂಟೆ ಕೊಡುತ್ತಿದ್ದ ವಿದ್ಯುತ್‌ ಅನ್ನು ಫೆಬ್ರುವರಿ ಮಧ್ಯದಲ್ಲಿ ಆಗಾಗ ಕಡಿತ ಮಾಡಲಾಗುತ್ತಿದೆ. ಮುಂದಿನ ಬಿರು ಬೇಸಿಗೆಯ ದಿನಗಳಲ್ಲಿ ವಿದ್ಯುತ್‌ ನೆಚ್ಚಿಕೊಂಡು ಶುಂಠಿ ಉಳಿಸಿಕೊಳ್ಳಲು ಕಷ್ಟವಾಗುತ್ತದೆ. ಕೆಲ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು ಅಂತರ್ಜಲ ಯಾವಾಗ ಕೈಕೊಡುತ್ತದೆಯೋ ಗೊತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT