ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ರಿಗೋಲ್ಡ್ ಸಂಸ್ಥೆ ವಿರುದ್ಧ ಕ್ರಮಕ್ಕೆ ಆಗ್ರಹ

‌ಜುಲೈ 8ರಂದು ಬೆಂಗಳೂರು ಚಲೋ ಚಳವಳಿ
Last Updated 22 ಜೂನ್ 2019, 19:37 IST
ಅಕ್ಷರ ಗಾತ್ರ

ಮುಖ್ಯಾಂಶಗಳು

* ₹ 1,700 ಕೋಟಿ ‌ರಾಜ್ಯದ ಗ್ರಾಹಕರು ಹೂಡಿಕೆ ಮಾಡಿದ ಮೊತ್ತ

* ₹ 700 ಕೋಟಿ ಚೆಕ್‌ ಬೌನ್ಸ್‌ ಆದ ಮೊತ್ತ

*‌ ₹ 12 ಸಾವಿರ ಕೋಟಿ ಜಪ್ತಿ ಮಾಡಿದ ಆಸ್ತಿ

ಹಾಸನ: ‘ರಾಜ್ಯದ ಲಕ್ಷಾಂತರ ಜನರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ಪರಿಹಾರ ನೀಡದ ಅಗ್ರಿಗೋಲ್ಡ್‌ ಸಂಸ್ಥೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜುಲೈ 8ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ’ ಎಂದು ಅಗ್ರಿಗೋಲ್ಡ್ ಗ್ರಾಹಕರ ಮತ್ತು ಪ್ರತಿನಿಧಿ ಕಲ್ಯಾಣ ಸಂಘದ ಗೌರವಾಧ್ಯಕ್ಷ ಎಂ.ಸಿ.ಡೋಂಗ್ರೆ ಹೇಳಿದರು.

ನಗರದ ಸಂಸ್ಕೃತ ಭವನದಲ್ಲಿ ಅಗ್ರಿಗೋಲ್ಡ್ ಸಂಸ್ಥೆ ಗ್ರಾಹಕರು ಹಾಗೂ ಏಜೆಂಟರೊಂದಿಗೆ ಏರ್ಪಡಿಸಿದ್ದ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದರು.

ರಾಜ್ಯದ ಒಂಬತ್ತು ಲಕ್ಷ ಗ್ರಾಹಕರು ಸುಮಾರು ₹ 1,700 ಕೋಟಿ ಹೂಡಿಕೆ ಮಾಡಿದ್ದು, ಅತಂತ್ರರಾಗಿದ್ದಾರೆ. ಅಧಿಕ ಹಣದಾಸೆಗೆ ಅದೆಷ್ಟೋ ಜನ ಜಮೀನು, ಒಡವೆ ವಸ್ತ್ರಾಭರಣ ಮಾರಿ ಹಣ ಹೂಡಿದ್ದಾರೆ. ಈಗ ಸಂಸ್ಥೆ ಮುಚ್ಚಿದ್ದರಿಂದ ಸಾಕಷ್ಟು ತೊಂದರೆಯಾಗಿದೆ. ಇಂತಹ ಸಂಸ್ಥೆ ಗಳಿಂದ ಜನರ ನೆಮ್ಮದಿ ಹಾಳಾಗುತ್ತಿದೆ. ಜುಲೈ 8ರಂದು ಬೆಂಗಳೂರು ಚಲೋಗೆ ರಾಜ್ಯದ ವಿವಿಧ ಮೂಲೆಗಳಿಂದ 25 ಸಾವಿರ ಜನ ಭಾಗವಹಿಸುತ್ತಾರೆ. ಜಿಲ್ಲೆಯ 40 ಸಾವಿರ ಜನರು ಅಗ್ರಿಗೋಲ್ಡ್‌ನಲ್ಲಿ ಪಾಲು ಹೊಂದಿದ್ದು, ಎಲ್ಲರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

‘ಎಂಟು ರಾಜ್ಯಗಳಿಂದ ಸುಮಾರು 32 ಲಕ್ಷ ಖಾತೆ ಹೊಂದಿದ್ದು, ₹ 6,385 ಕೋಟಿ ಪಾವತಿಸಬೇಕಿದೆ. ಗ್ರಾಹಕರಿಗೆ ನೀಡಿದ ಸುಮಾರು ₹ 700 ಕೋಟಿ ಮೌಲ್ಯದ ಚೆಕ್‌ಗಳು ಬೌನ್ಸ್ ಆಗಿವೆ. ಆಂಧ್ರಪ್ರದೇಶದ ಅಗ್ರಿಗೋಲ್ಡ್ ಸಂಸ್ಥೆಯು ವಿಜಯವಾಡಾವನ್ನು ತನ್ನ ಕೇಂದ್ರ ಕಚೇರಿಯಾಗಿ ಮಾಡಿಕೊಂಡಿದ್ದು, ಗ್ರಾಹರಿಂದ ಠೇವಣಿಗಳನ್ನು ಸಂಗ್ರಹಿಸಿ ರಿಯಲ್ ಎಸ್ಟೇಟ್‍ನಲ್ಲಿ ಹೂಡಿಕೆ ಮಾಡಿದೆ. ಅತಿ ಹೆಚ್ಚು ಆಸ್ತಿ ಆಂಧ್ರಪ್ರದೇಶದಲ್ಲಿ ಹೊಂದಿದೆ’ ಎಂದು ವಿವರಿಸಿದರು.

‘ಅಗ್ರಿಗೋಲ್ಡ್‌ ವಿರುದ್ಧ ಈಗಾಗಲೇ ಕಾನೂನು ಹೋರಾಟ ಆರಂಭಿಸಲಾಗಿದೆ. ಗ್ರಾಹಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಎಲ್ಲರಿಗೂ ಹೂಡಿರುವ ಹಣ ವಾಪಸ್‌ ನೀಡಬೇಕು. ಆಂಧ್ರಪ್ರದೇಶ ನ್ಯಾಯಾಲಯ ಇತರೆ ರಾಜ್ಯಗಳ ಸಮಸ್ಯೆಯನ್ನು ವಿಚಾರಣೆಯಲ್ಲಿ ಪರಿಗಣಿಸಿಲ್ಲ. ಆದ್ದರಿಂದ ಹೋರಾಟ ಮಾಡಲೇಬೇಕಿದೆ’ ಎಂದು ಎಚ್ಚರಿಸಿದರು.

ಅಗ್ರಿಗೋಲ್ಡ್‌ ವಂಚನೆ ಬಯಲಾಗುತ್ತಿದ್ದಂತೆ ಸಿಪಿಐ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಕರಪತ್ರ ವಿತರಣೆ, ಬಂದ್‌ ಹಾಗೂ ಜಾಗೃತಿ ಜಾಥಾಗಳ ಮೂಲಕ ಮೋಸದ ವಿಷಯ ತಿಳಿಸಿದರು. ಅದೇ ರೀತಿಯ ಕೆಲಸ ಕರ್ನಾಟದಲ್ಲೂ ಆಗಬೇಕಿದೆ ಎಂದರು.

ಕರ್ನಾಟಕ ಸರ್ಕಾರ ವಂಚನೆ ಪ್ರಕರಣವನ್ನು ಸಿಐಡಿಗೆ ವಹಿಸಿ ಸಂಸ್ಥೆ ಹೊಂದಿರುವ ಆಸ್ತಿಯನ್ನು ಜಪ್ತಿ ಮಾಡಿದೆಯಾದರೂ ಗ್ರಾಹಕರಿಗೆ ಯಾವುದೇ ಪರಿಹಾರ ದೊರೆತಿಲ್ಲ. ಮಧ್ಯಮವರ್ಗದ ಕುಟುಂಬಗಳು ಇದರಿಂದ ಬೀದಿಗೆ ಬಂದಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ಆಂದ್ರಪ್ರದೇಶ ಸರ್ಕಾರ ಅಗ್ರಿಗೋಲ್ಡ್‌ ಸಂಸ್ಥೆ ವಿರುದ್ಧ ಕಾನೂನು ಹೋರಾಟ ಆರಂಭಿಸಿದೆ. ರಾಜ್ಯದಾದ್ಯಂತ 350 ಕಚೇರಿ ತೆರೆದು ಸಂಸ್ಥೆ ನೀಡಿರುವ ಬಾಂಡ್‌ಗಳ ಪರಿಶೀಲನೆ ನಡೆಸುತ್ತಿದೆ. ₹ 12 ಸಾವಿರ ಕೋಟಿ ಆಸ್ತಿ ಮುಟ್ಟುಗೋಲು ಹಾಕಿದೆ. ಆ ಪ್ರಕ್ರಿಯೆ ಕರ್ನಾಟಕದಲ್ಲೂ ನಡೆಯಬೇಕಿದೆ ಎಂದರು.

ಸಂಘದ ಅಧ್ಯಕ್ಷ ಯೋಗೀಶ್‌, ಪ್ರಧಾನ ಕಾರ್ಯದರ್ಶಿ ಟಿ.ಸುದರ್ಶನ್‌, ಬಿ.ಎನ್‌.ಶಿವಪ್ಪ, ಗಣೇಶ್‌, ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್‌ ಇದ್ದರು.

*ಐಎಂಎ ವಂಚನೆಯಿಂದ ಎಚ್ಚೆತ್ತು ಇತರ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವ ಸಾರ್ವಜನಿಕರು ಈ ಹೋರಾಟಗಳಲ್ಲಿ ಪಾಲ್ಗೊಳ್ಳಬೇಕು
–ಜೆ.ಓ.ಮಹಾಂತಪ್ಪ, ಸಾಮಾಜಿಕ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT