ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಆಲೂರು, ಹಾಸನ ತಾಲ್ಲೂಕು ಶಾಲೆಗಳಿಗೆ ರಜೆ

ಜಿಲ್ಲೆಯಲ್ಲಿ ಒಟ್ಟು 394 ವಿದ್ಯಾರ್ಥಿಗಳಿಗೆ ಕೋವಿಡ್ ದೃಢ: ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ
Last Updated 18 ಜನವರಿ 2022, 17:19 IST
ಅಕ್ಷರ ಗಾತ್ರ

ಹಾಸನ: ಹೆಚ್ಚು ಕೋವಿಡ್‌ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಹಾಸನ ಮತ್ತು ಆಲೂರು ತಾಲ್ಲೂಕಿನ ಶಾಲೆಗಳಿಗೆ ಮೂರು ದಿನ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.

ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಾಸನ ತಾಲ್ಲೂಕಿನ 29 ಶಾಲೆಗಳಲ್ಲಿನ 228 ವಿದ್ಯಾರ್ಥಿಗಳಿಗೆ ಹಾಗೂ ಆಲೂರು ತಾಲ್ಲೂಕಿನ 39 ಶಾಲೆಗಳ 166 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಎರಡೂ
ತಾಲ್ಲೂಕುಗಳಲ್ಲಿ 1 ರಿಂದ 9 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮೂರು ದಿನಗಳ ರಜೆ ಘೋಷಿಸಲಾಗಿದೆ. ಶನಿವಾರ ಮತ್ತು ಭಾನುವಾರ ವಾರಾಂತ್ಯ ಕರ್ಫ್ಯೂ ಇರುವುದರಿಂದ ಒಟ್ಟು ಐದು ದಿನ ರಜೆ ಸಿಗಲಿದೆ’ ಎಂದು ವಿವರಿಸಿದರು.

‘ಜ. 24ರಿಂದ ಮತ್ತೆ ಶಾಲೆಗಳನ್ನು ಪುನರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಂತರದ ಅಂಕಿ ಅಂಶಗಳನ್ನು ಗಮನಿಸಿ ಮುಂದೆ ಯಾವ ರೀತಿ ಕ್ರಮ ವಹಿಸಬೇಕು ಎಂಬ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

‘ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದು, ಕೋವಿಡ್ ಸೋಂಕು ಕಂಡುಬರುವ ಎಲ್ಲ ವಯೋ ಮಾನದವರಿಗೆ ಹೋಂ ಕ್ವಾರಂಟೈನ್ ಮಾಡಬೇಕು. ಶೌಚಾಲಯ ಇನ್ನಿತರ ಮೂಲ ಸೌಕರ್ಯಗಳಿಲ್ಲದ ಸೋಂಕಿತ ರನ್ನು ಕೋವಿಡ್ ಆರೈಕೆ ಕೇಂದ್ರಗಳಲ್ಲಿ 7 ರಿಂದ 8 ದಿನ ಚಿಕಿತ್ಸೆ, ಔಷಧೋಪಚಾರ ನೀಡಿ ಗುಣಮುಖರಾದ ನಂತರ ಬಿಡುಗಡೆಗೊಳಿಸಲು ನಿರ್ದೇಶನ ನೀಡಲಾಗಿದೆ’ ಎಂದು ಹೇಳಿದರು.

‘ಮಂಗಳವಾರ ಜಿಲ್ಲೆಯಲ್ಲಿ 1ರಿಂದ 10 ತರಗತಿಯವರೆಗಿನ 119 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದ್ದು ಒಟ್ಟು 475 ವಿದ್ಯಾರ್ಥಿಗಳಲ್ಲಿ ಸೋಂಕು ಸಕ್ರಿಯವಾಗಿದೆ. 9 ಕೋವಿಡ್‌ ಆರೈಕೆ ಕೇಂದ್ರಗಳನ್ನು ಗುರುತಿಸಿದ್ದು, 129 ಕೊಠಡಿಗಳಲ್ಲಿ 450 ಹಾಸಿಗೆ ಸಿದ್ಧಪಡಿಸಲಾಗಿದೆ. ಎಲ್ಲ ತಾಲ್ಲೂಕುಗಳಲ್ಲಿ ಕೋವಿಡ್ ವಾರ್ ರೂಂ ತೆರೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ಹಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಆರೈಕೆಗೆ ಸದ್ಯಕ್ಕೆ ಯಾವುದೇ ಕೊರತೆಗಳಿಲ್ಲ ಎಂದು ಹಿಮ್ಸ್‌ ನಿರ್ದೇಶಕರು ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಪತ್ತೆಯಾಗಿರುವ ಸೋಂಕಿತರಿಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಅವರ ಮನೆಗಳಿಗೆ ಮಾತ್ರಗಳನ್ನು ತಲುಪಿಸಲು ಮೊದಲ ಆದ್ಯತೆ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್.ಗಿರೀಶ್, ಜಿ.ಪಂ ಸಿಇಒ ಕಾಂತರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ. ಸತೀಶ್ ಕುಮಾರ್, ಶಾಸಕ ಕೆ.ಎಂ. ಶಿವಲಿಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT