ಹೊಳೆನರಸೀಪುರ: ‘ಕಳೆದ 4 ವರ್ಷಗಳ ಹಿಂದೆ ನಮಗೆ ನೀಡಿರುವ ಮೊಬೈಲ್‍ನಲ್ಲಿ ಈಗ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕಡಿಮೆ ರ‍್ಯಾಮ್, ಕಡಿಮೆ ಜಿಬಿಗಳಿರುವ ಮೊಬೈಲ್ ನೀಡಿದ್ದಾರೆ. ಇವುಗಳಲ್ಲಿ ನಮ್ಮ ಇಲಾಖೆ ಕೆಲಸದ ಡೇಟಾ ನಮೂದಿಸಲು ಸಾಧ್ಯವೇ ಇಲ್ಲ’ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಶೈಲಜಾ ತಿಳಿಸಿದರು.
ಸೋಮವಾರ ತಾಲ್ಲೂಕು ಸಿಡಿಪಿಓ ಕಚೇರಿ ಮುಂದೆ ಮೊಬೈಲ್ ಹಿಂದಿರುಗಿಸಲು ಪ್ರತಿಭಟನೆ ನಡೆಸುವ ವೇಳೆ ಮಾತನಾಡಿ, ಹೊಸ ಮೊಬೈಲ್ ನೀಡದಿದ್ದರೆ ಈ ಮೊಬೈಲ್‌ಗಳನ್ನು ನಾಳೆಯಿಂದ ಬಳಸುವುದಿಲ್ಲ, ಬಳಸಲೂ ಸಾಧ್ಯವೂ ಇಲ್ಲ’ ಎಂದರು.
‘ಈ ಮೊಬೈಲ್‍ಗಳನ್ನು ಬದಲಿಸಿ ಹೆಚ್ಚು ಕೆಲಸ ಮಾಡಿದರೂ ಹ್ಯಾಂಗ್ ಆಗದ, ಹೆಚ್ಚು ಸ್ಟೋರೇಜ್‍ಗೆ ಅವಕಾಶ ಇರುವ ಮೊಬೈಲ್‍ಗಳನ್ನು ನೀಡಿ ಎಂದು ಕಳೆದ ಒಂದು ವರ್ಷದಿಂದ ಆಗ್ರಹಿಸುತ್ತಿದ್ದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸದ ಕಾರಣ ಇಂದು ಅನಿವಾರ್ಯವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಿಡಿಪಿಓ ಭಾಗ್ಯಮ್ಮ,‘ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ 4 ವರ್ಷಗಳ ಹಿಂದೆ ಮೊಬೈಲ್ ನೀಡಿತ್ತು. ಆದ್ದರಿಂದ ಹೊಸ ಮೊಬೈಲ್ ನೀಡಿ ಎಂದು ಆಗ್ರಹಿಸಿ ಇಂದು ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿದ್ದಾರೆ. ಸರ್ಕಾರ ಹೊಸ ಮೊಬೈಲ್ ನೀಡಿದರೆ ನಾವೂ ನೀಡುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದರು.
ಇದೇ ವೇಳೆ ಅಂಗನವಾಡಿ ಕಾರ್ಯಕರ್ತೆಯರು ಭಾಗ್ಯಮ್ಮ ಅವರಿಗೆ ಮೊಬೈಲ್ ಹಿಂದಿರುಗಿಸಲು ಹೋದಾಗ ಅವರು ತೆಗೆದುಕೊಳ್ಳಲು ನಿರಾಕರಿಸಿದರು.
ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವೀಣಾ, ಕಾರ್ಯದರ್ಶಿ ಶೈಲಜಾ, ಖಜಾಂಚಿ ಗೀತಾ, ಉದ್ದೂರು ಅಂಬಿಕಾ, ಶ್ರುತಿ, ಶೋಭಾರಾಣಿ, ಸಿದ್ದಿಕಾ, ಯಶೋಧ. ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.