ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರಕಲಗೂಡು: ಬಹುಮತವಿದ್ದರೂ ಮೈತ್ರಿಗೆ ಸಿಗದ ಅಧ್ಯಕ್ಷ ಸ್ಥಾನ

ಅರಕಲಗೂಡು ಪಪಂ; ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಆಯ್ಕೆ
Published : 21 ಆಗಸ್ಟ್ 2024, 14:45 IST
Last Updated : 21 ಆಗಸ್ಟ್ 2024, 14:45 IST
ಫಾಲೋ ಮಾಡಿ
Comments

ಅರಕಲಗೂಡು: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರದೀಪ್ ಕುಮಾರ್ ಅಧ್ಯಕ್ಷರಾಗಿ ಹಾಗೂ ಬಿಜೆಪಿ– ಜೆಡಿಎಸ್ ಮೈತ್ರಿ ಅಭ್ಯರ್ಥಿ ಸುಭಾನ ಷರೀಫ್‌ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರದೀಪ್ ಕುಮಾರ್ 10 ಮತಗಳನ್ನು ಪಡೆದು ಚುನಾಯಿತರಾದರು. ಪ್ರತಿಸ್ಪರ್ಧಿ ಜೆಡಿಎಸ್– ಬಿಜೆಪಿ ಮೈತ್ರಿ ಅಭ್ಯರ್ಥಿ ರಮೇಶ್ ವಾಟಾಳ್ 9 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ, ಜೆಡಿಎಸ್ ಮೈತ್ರಿ ಬೆಂಬಲಿತ ಸುಭಾನ ಷರೀಫ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಲ್ಲವಿ ಅವರಿಗೆ ತಲಾ 9 ಮತಗಳು ಲಭಿಸಿದವು. ಲಾಟರಿ ಮೂಲಕ ಸುಭಾನ್ ಷರೀಫ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಜೆಡಿಎಸ್, ಬಿಜೆಪಿ ಸದಸ್ಯರಿಗೆ ವಿಪ್ ಜಾರಿಗೊಳಿಸಿದರೂ ಮೈತ್ರಿ ಅಭ್ಯರ್ಥಿಗೆ ಸೋಲುಂಟಾಗಿದೆ. ತಹಶೀಲ್ದಾರ್ ಕೆ.ಸಿ. ಸೌಮ್ಯ, ತಾಲ್ಲೂಕು ಕಚೇರಿ ಶಿರಸ್ತೇದಾರ್ ಸಿ. ಸ್ವಾಮಿ ಚುನಾವಣಾ ಕಾರ್ಯ ನಿರ್ವಹಿಸಿದರು.

ಗುದ್ದುಗೆ ಗುದ್ದಾಟಕ್ಕೆ ತೆರೆ: ಪಟ್ಟಣ ಪಂಚಾಯಿತಿ ಆಡಳಿತದ ಚುಕ್ಕಾಣಿ ಹಿಡಿಯಲು ವಾರದಿಂದ ಇನ್ನಿಲ್ಲದ ರಾಜಕೀಯ ಕಸರತ್ತು ನಡೆದಿತ್ತು. ಒಟ್ಟು 17 ಸದಸ್ಯರ ಪೈಕಿ ಜೆಡಿಎಸ್, ಬಿಜೆಪಿಯಿಂದ ತಲಾ 6 ಹಾಗೂ ಕಾಂಗ್ರೆಸ್ ಪಕ್ಷದ ಐವರು ಸದಸ್ಯರಿದ್ದರು. ಜೆಡಿಎಸ್– ಬಿಜೆಪಿಗೆ ಬಹುಮತ ಇದ್ದರೂ, ಜೆಡಿಎಸ್‌ನ ನಾಲ್ವರು ಸದಸ್ಯರು ಮತ್ತು ಬಿಜೆಪಿಯ ಇಬ್ಬರು ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರು. ಕಾಂಗ್ರೆಸ್ ಪಕ್ಷದ ಇಬ್ಬರು ಸದಸ್ಯರು, ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಬಹುಮತವಿದ್ದ ಕಾರಣಕ್ಕಾಗಿ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರಿಗೆ ವಿಪ್ ಜಾರಿಗೊಳಿಸಿತ್ತು. ಅದಾಗ್ಯೂ ಮೈತ್ರಿ ಅಭ್ಯರ್ಥಿ ಸೋಲು ಅನಭವಿಸಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರದೀಪ್ ಕುಮಾರ್  ಪರ ಸಂಸದ ಶ್ರೇಯಸ್ ಪಟೇಲ್ ಮತದಾನ ಮಾಡಿದರು.  ಬಿಜೆಪಿ ಚಿಹ್ನೆಯಡಿ ಗೆದ್ದು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಲ್ಲವಿ ಅವರಿಗೆ ಮತ ಚಲಾಯಿಸದೇ ಸಂಸದರು ಹೊರ ನಡೆದರು.

ಮೈತ್ರಿ ಅಭ್ಯರ್ಥಿಯಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರಿಗೂ ಶಾಸಕ ಎ. ಮಂಜು ಮತ ಚಲಾಯಿಸಿದರು. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗೆ 10 ಮತಗಳು ಹಾಗೂ ಜೆಡಿಎಸ್– ಬಿಜೆಪಿ ಮೈತ್ರಿ ಅಭ್ಯರ್ಥಿಗೆ 9 ಮತಗಳು ಬಂದವು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಗಳಿಗೆ ತಲಾ 9 ಮತಗಳು ಲಭಿಸಿ ಸಮಬಲ ಸಾಧಿಸಿದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಾದ ಎಂ.ಟಿ. ಕೃಷ್ಣೇಗೌಡ, ಸಿ.ಡಿ. ದಿವಾಕರ್ ಗೌಡ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಅವರನ್ನು ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾದ ಪ್ರದೀಪ್ ಕುಮಾರ್ ಮಾತನಾಡಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ವಿಪ್‌ ಉಲ್ಲಂಘನೆ: ವರಿಷ್ಠರ ಜೊತೆ ಚರ್ಚೆ

ಕಾಂಗ್ರೆಸ್ ಪಕ್ಷದ ಸೂಚನೆಯಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರದೀಪ್ ಕುಮಾರ್ ಅವರಿಗೆ ಮತ ನೀಡಲಾಗಿದ್ದು ಅವರು ಹತ್ತು ಮತಗಳನ್ನು ಪಡೆದು ಜಯಗಳಿಸಿದ್ದಾರೆ ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಮತ ನೀಡಲು ನಿರ್ದೇಶನ ಇಲ್ಲದ ಕಾರಣ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿಗೊಳಿಸಿದರೂ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ನೀಡಿದ್ದಾರೆ. ಇದರ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು. ಹೈಕಮಾಂಡ್‌ಗೆ ದೂರು: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ ಕಾಂಗ್ರೆಸ್ ಪಕ್ಷದ ಚಿಹ್ನೆಯಡಿ ಗೆದ್ದ ಇಬ್ಬರು ಸದಸ್ಯರು ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಪರೋಕ್ಷವಾಗಿ ಸಹಕಾರ ನೀಡಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು ಈ ಕುರಿತು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು ಎಂದರು.

ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿದರೆ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗಲಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಮನ ಹರಿಸಬೇಕು. ಈ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು.
-ಎಂ.ಟಿ. ಕೃಷ್ಣೇಗೌಡ ಕಾಂಗ್ರೆಸ್ ಮುಖಂಡ
ಬಿಜೆಪಿ– ಜೆಡಿಎಸ್‌ನ ತಲಾ ಆರು ಸದಸ್ಯರಿದ್ದು ಬಹುಮತ ಇತ್ತು. ಹೀಗಾಗಿ ವಿಪ್ ಜಾರಿಗೊಳಿಸಲಾಗಿತ್ತು. ವಿಪ್ ಉಲ್ಲಂಘಿಸಿದ ಸದಸ್ಯರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಎ. ಮಂಜು, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT