ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಮೈದ ಸೇರಿ ನಾಲ್ವರ ಬಂಧನ

ಸೆಸ್ಕ್‌ ನೌಕರನ ಹತ್ಯೆ ಪ್ರಕರಣ: ಪಿಸ್ತೂಲ್‌ ವಶ
Last Updated 18 ಜನವರಿ 2021, 13:59 IST
ಅಕ್ಷರ ಗಾತ್ರ

ಹಾಸನ: ತಾಲ್ಲೂಕಿನ ಹೂವಿನಹಳ್ಳಿ ಕಾವಲು ಸಮೀಪ ಕೆಪಿಟಿಸಿಎಲ್ ಕಿರಿಯ ಸಹಾಯಕನನ್ನು ಗುಂಡಿಕ್ಕಿಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿಯ ಸಹೋದರ ಸೇರಿ ನಾಲ್ವರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಅರೇಕಲ್‌ ಹೊಸಹಳ್ಳಿ ಗ್ರಾಮದ ಕೆಪಿಟಿಸಿಎಲ್‌ ಕಿರಿಯ ಸಹಾಯಕ ಸಂತೋಷ್‌ (35) ಎಂಬಾತನನ್ನು ಜ.15ರ ಸಂಜೆ ಕೊಲೆ ಮಾಡಲಾಗಿತ್ತು. ಮಡಿಕೇರಿ ತಾಲ್ಲೂಕಿನ ಮಕ್ಕಂದೂರು ಗ್ರಾಮದ ಕೆ.ಟಿ.ಅನುಕೂಲ್‌, ಆಲೂರು ತಾಲ್ಲೂಕಿನ ಕಟ್ಟೆಹೊಳೆ ಗ್ರಾಮದ ಸುದೀನ್‌ ಕುಮಾರ್‌, ಮಕ್ಕಂದೂರಿನ ಬಿ.ಎಸ್.ಸುರೇಶ್‌, ಎಚ್‌.ಬಿ.ಸತೀಶ್‌ ಎಂಬುವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಒಂದು ಪಿಸ್ತೂಲ್, 20 ಸಜೀವ ಗುಂಡು, ಡಸ್ಟರ್‌ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ ಗೌಡ ತಿಳಿಸಿದರು.

ತಂದೆ ಸಣ್ಣರಂಗೇಗೌಡರ ಅಕಾಲಿಕ ನಿಧನದಿಂದ ಅನುಕಂಪದ ಆಧಾರದಲ್ಲಿ ಸಂತೋಷ್‌ ಗೆ ಸರ್ಕಾರಿ ನೌಕರಿ ಸಿಕ್ಕಿತ್ತು. ಜಯಶ್ರೀ ಎಂಬಾಕೆಯನ್ನು ಪ್ರೀತಿಸಿ ಮದುವೆ ಆಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ, ಸಂತೋಷ್‌ ನಿತ್ಯ ಕುಡಿದು ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ. ಈ ವಿಚಾರವನ್ನು ತನ್ನ ಸಹೋದರ ಸುದೀನ್‌ ಬಳಿ ಜಯಶ್ರೀ ಹೇಳಿಕೊಂಡಿದ್ದಳು. ಸಂತೋಷ್‌ಗೆ ಹಲವು ಬಾರಿ ತಿಳುವಳಿಕೆ ಹೇಳಿದ್ದರೂ ಪರಿವರ್ತನೆಯಾಗಿರಲಿಲ್ಲ. ವಿಪರೀತ ಸಾಲ ಮಾಡಿದ್ದರಿಂದ ಸಾಲಗಾರರು ಸಹ ಬಂದು ಕಾಟ ಕೊಡುತ್ತಿದ್ದರು. ಆದರೆ, ಆತ ಎಷ್ಟು ಹಣ ಸಾಲ ಮಾಡಿದ್ದ ಎಂಬ ಮಾಹಿತಿ ಇಲ್ಲ. ಇದರಿಂದ ಬೇಸತ್ತ ಸುದೀನ್‌ ತನ್ನ ಭಾವನನ್ನು ಸಂಬಂಧಿಕರ ನೆರವಿನಿಂದ ಕೊಲೆ ಮಾಡಿಸಿದ್ದಾನೆ ಎಂದು ಎಸ್‌ಪಿ ವಿವರಿಸಿದರು.

ಸಂತೋಷ್‌ ಕೊಲೆ ಮಾಡಲು ಸಲುವಾಗಿ ಸುದೀನ್‌ ಮಡಿಕೇರಿಯ ತನ್ನ ಸಂಬಂಧಿ, ರೌಡಿ ಶೀಟರ್‌ ಕೆ.ಟಿ.ಅನುಕೂಲ್‌ ನೆರವು ಪಡೆದಿದ್ದ. ಈತ ಲೈಸೆನ್ಸ್‌ ಇರುವ ಪಿಸ್ತೂಲ್‌ ಸಹ ಹೊಂದಿದ್ದಾನೆ. ಸುರೇಶ್‌, ಸತೀಶ್‌ ಜತೆಗೆ ಹಾಸನಕ್ಕೆ ಬಂದ ಅನುಕೂಲ್‌, ಮಾತುಕತೆಗಾಗಿ ಸಂತೋಷ್‌ನನ್ನು ಹೂವಿನಲ್ಲಿ ಕಾವಲ್‌ ಬಳಿ ಕರೆಸಿಕೊಂಡಿದ್ದರು. ಎಲ್ಲರೂ ಒಟ್ಟಿಗೆ ಸೇರಿ ಮದ್ಯ ಸೇವಿಸಿದ್ದರು. ಈ ವೇಳೆ ಪಿಸ್ತೂಲ್‌ನಿಂದ ಅನುಕೂಲ್ ಸಂತೋಷ್‌ ಮೇಲೆ ಗುಂಡಿನ ಮಳೆಗೈದಿದ್ದಾನೆ. ಎಂಟು ಸುತ್ತು ಗುಂಡು ಹಾರಿಸಿದ್ದು, ಐದು ಗುಂಡು ಸಂತೋಷ್‌ ದೇಹ ಹೊಕ್ಕಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದರು.

ಕೊಲೆ ಮಾಡಿದ ಬಳಿಕ ನಾಲ್ವರೂ ಪರಾರಿಯಾಗಿದ್ದರು. ಅನುಕೂಲ್‌ಗೆ ನೀಡಿರುವ ಗನ್‌ ಲೈಸೆನ್ಸ್ ರದ್ದುಗೊಳಿಸುವಂತೆ ಮಡಿಕೇರಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಡಿವೈಎಸ್‌ಪಿ ಪುಟ್ಟಸ್ವಾಮಿಗೌಡ, ಸಿಪಿಐ ಪಿ.ಸುರೇಶ್‌, ಪಿಎಸ್‌ಐ ಬಿ.ಬಸವರಾಜು, ಸಿಬ್ಬಂದಿಗಳಾದ ರವಿಕುಮಾರ್, ಸುಬ್ರಹ್ಮಣ್ಯ, ಬಿ.ಆರ್.ಮಂಜುನಾಥ್‌, ದೇವರಾಜು, ಜುಲ್ಫಿಕರ್‌ ಅಹಮದ್‌ ಬೇಗ್‌, ಲೋಕನಾಥ್‌, ಸಂತೋಷ್‌ ಅವರನ್ನು ಎಸ್ಪಿ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT