ಸೋಮವಾರ, ಜೂನ್ 21, 2021
28 °C
ಹಳೇಬೀಡಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳ: ಸೋಂಕಿತರ ಆರೈಕೆ

ಆಶಾ ಕಾರ್ಯಕರ್ತೆಯರು ಮತ್ತೆ ಯುದ್ಧಕ್ಕೆ ಸಜ್ಜು

ಎಚ್.ಎಸ್.ಅನಿಲ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ಕೊರೊನಾ ಯೋಧರಾದ ಆಶಾ ಕಾರ್ಯಕರ್ತೆಯರು ಮತ್ತೆ ಯುದ್ಧಕ್ಕೆ ಸಜ್ಜಾಗಿದ್ದು, 68 ಮಂದಿ ಕೊರೊನಾ ಸೋಂಕಿತರ ಸೇವೆ ಮಾಡುತ್ತಿದ್ದಾರೆ.

ಹಳೇಬೀಡಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಗಂಭೀರ ಸ್ವರೂಪದ ರೋಗ ಲಕ್ಷಣಗಳು ಇಲ್ಲದಿರುವವರನ್ನು ಮನೆಗಳಲ್ಲೇ ಐಸೊಲೇಷನ್ ಮಾಡಲಾಗಿದೆ. ಅಂತಹ ರೋಗಿಗಳ ಆರೈಕೆಯನ್ನು ಆಶಾ ಕಾರ್ಯಕರ್ತೆಯರು ನೋಡಿ ಕೊಳ್ಳುತ್ತಿದ್ದಾರೆ. ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸೋಂಕಿತರಿಗೆ ಸಂಪರ್ಕ ಸೇತುವೆಯಂತೆ ಕೆಲಸ ಮಾಡುತ್ತಿದ್ದಾರೆ. ವೈದ್ಯರು ನೀಡಿದ ಮಾತ್ರೆಗಳನ್ನು ಸೋಂಕಿತರಿಗೆ ಪೂರೈಕೆ ಮಾಡುತ್ತಿದ್ದಾರೆ.

ರೋಗಿಗಳು ಹಾಗೂ ಸಂಪರ್ಕಿತರು 14 ದಿನ ಮನೆಯಿಂದ ಹೊರಬರದಂತೆ ನೋಡಿಕೊಳ್ಳುತ್ತಿದ್ದಾರೆ. ಸೋಂಕಿತರ ಪಲ್ಸ್ ಪರೀಕ್ಷೆ ಮಾಡುವುದರೊಂದಿಗೆ ಉಸಿರಾಟದ ತೊಂದರೆಯನ್ನು ವಿಚಾರಿಸುತ್ತಿದ್ದಾರೆ. ಶೀತ, ನೆಗಡಿ, ಕೆಮ್ಮು ಹಾಗೂ ಜ್ವರದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಸೋಂಕಿತರ ಆರೋಗ್ಯದಲ್ಲಿ ವ್ಯತ್ಯಾಸವಿದ್ದರೆ ಆಸ್ಪತ್ರೆಗೆ ತಿಳಿಸುತ್ತಾರೆ. ಇದರಿಂದ ಕೊರೊನಾ ನಿಯಂತ್ರಣಕ್ಕೆ ಅನುಕೂಲವಾಗಿದೆ ಎಂದು ಹಿರಿಯ ಮಹಿಳಾ
ಆರೋಗ್ಯ ಸಹಾಯಕಿ ಜಯಲಕ್ಷ್ಮಮ್ಮ ತಿಳಿಸಿದರು.

ಹಳೇಬೀಡು ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 10 ಮಂದಿ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಬೇಲೂರು ತಾಲ್ಲೂಕಿನಲ್ಲಿ 126 ಮಂದಿ ಕೆಲಸ ಮಾಡುತ್ತಿದ್ದಾರೆ.

‘ನಾವು ತಪಾಸಣೆಗಾಗಿ ಮನೆಗಳಿಗೆ ಭೇಟಿ ನೀಡಿದಾಗ ನಗು ಮೊಗದೊಂದಿಗೆ ಮಾತನಾಡಿಸಿ ಮಾಹಿತಿ ಕೊಡುವವರು ತುಂಬಾ ವಿರಳ. ಜಗಳಕ್ಕೆ ನಿಲ್ಲುವವರೇ ಹೆಚ್ಚು. ಹೊರಗಿನಿಂದ ಬಂದವರ ಬಗ್ಗೆ ಮಾಹಿತಿ ಕೊಡಲು ನೆರೆಹೊರೆಯವರು ಭಯಪಡುತ್ತಾರೆ. ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಆಶಾ ಕಾರ್ಯಕರ್ತೆಯರಾದ ಪುಷ್ಪಾ, ಛಾಯಾ, ಸುನೀತಾ, ಜಾನಕಮ್ಮ, ವಸಂತಾ, ಆರತಿ ಮನವಿ ಮಾಡಿದರು.

ಆಶಾ ಕಾರ್ಯಕರ್ತೆಯರ ಸೇವೆಗೆ ನಿರ್ದಿಷ್ಟ ಸಮಯವಿಲ್ಲ. ಮಧ್ಯರಾತ್ರಿ ತೊಂದರೆ ಕಂಡು ಬಂದರೂ ಮುನ್ನುಗ್ಗುತ್ತಾರೆ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ಶ್ಲಾಘಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.